ಮುಂಬೈ: ಇಲ್ಲಿನ ಘಾಟ್ ಕೋಪರ್ ಪ್ರದೇಶದಲ್ಲಿ ಕೆಲವೇ ದಿನಗಳ ಹಿಂದೆ ಕುಸಿದು ಬಿದ್ದ ಬೃಹತ್ ಹೋರ್ಡಿಂಗ್ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದೆ. ಬೃಹತ್ ಹೋರ್ಡಿಂಗ್ ಅಳವಡಿಸಿದ್ದ ಇಗೊ ಮಿಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಿಕ ಭವೇಶ್ ಭಿಂಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಿಂಡೆ ಅವರನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಆತ ಜೈಪುರದ ಹೋಟೆಲ್ ಒಂದರಲ್ಲಿ ಅಡಗಿದ್ದ ಎನ್ನಲಾಗಿದೆ.
ಕಳೆದ ಸೋಮವಾರ ಘಾಟ್ ಕೋಪರ್ ನಲ್ಲಿ ಬೃಹತ್ ಹೋರ್ಡಿಂಗ್ ಕುಸಿದು ಬಿದ್ದಿತ್ತು. ಪೆಟ್ರೋಲ್ ಪಂಪ್ ಬಳಿ ಅಳಡಿಸಿದ್ದ ಈ ಹೋರ್ಡಿಂಗ್ ಭಾರಿ ಗಾಳಿ ಮಳೆಗೆ ಬಿದ್ದಿತ್ತು. ಇದರಿಂದ 16 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ನಂತರ ಮುಂಬೈ ಪೊಲೀಸರು ಹೋರ್ಡಿಂಗ್ ಅಳವಡಿಸಿದ್ದ ಭವೇಶ್ ಭಿಂಡೆ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಸಂಜೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಭಿಂಡೆ ವಿರುದ್ಧ ಈಗಾಗಲೇ 23 ಕ್ರಿಮಿನಲ್ ಪ್ರಕರಣಗಳಿವೆ. ಇದೇ ವರ್ಷದ ಜನವರಿಯಲ್ಲಿ ಭಿಂಡೆ ವಿರುದ್ಧ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಹೋರ್ಡಿಂಗ್ ನ ಕಂಬದ ದುರ್ಬಲ ಮತ್ತು ಕಳಪೆ ಅಡಿಪಾಯವು ಬೀಳಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಸುಮಾರು 17,040 ಚದರ ಅಡಿ ವಿಸ್ತೀರ್ಣದ ಹೋರ್ಡಿಂಗ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅತಿದೊಡ್ಡ ಹೋರ್ಡಿಂಗ್ ಎಂದು ದಾಖಲಾಗಿದೆ.