ಮುಂಬೈ: ಪೊಲೀಸರನ್ನು ಕಂಡು ಗಾಬರಿಗೊಂಡು ಯು ಟರ್ನ್ ಹೊಡೆದು ಅತಿಯಾದ ವೇಗದಿಂದ ಬೈಕ್ ಚಲಾಯಿಸಿದ ಪರಿಣಾಮ ಫ್ಲೈಓವರ್ ನ ಗೋಡೆಗೆ ಡಿಕ್ಕಿ ಹೊಡೆದು, ಇಬ್ಬರು ಯುವಕರು 40 ಅಡಿ ಆಳದಲ್ಲಿರುವ ರಸ್ತೆ ಬಿದ್ದು ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾ ಮೇಲ್ಸೇತುವೆ ಬಳಿ ಬುಧವಾರ ನಸುಕಿನ ವೇಳೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಎಂಟಿಸಿ ಮೃತ ನೌಕರನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ,ಸರ್ಕಾರಿ ಹುದ್ದೆ: ಶ್ರೀರಾಮುಲು
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಫ್ಲೈ ಓವರ್ ನಿಂದ 40 ಅಡಿ ಆಳಕ್ಕೆ ಬಿದ್ದ ಹಿನ್ನೆಲೆಯಲ್ಲಿ 17 ವರ್ಷದ ಬೈಕ್ ಸವಾರ ಪ್ರಜ್ಞಾಹೀನನಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.
ಬುಧವಾರ ನಸುಕಿನ ವೇಳೆ ಬಾಂದ್ರಾ ಫ್ಲೈಓವರ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಸೇತುವೆಯಲ್ಲಿ ಪೊಲೀಸರನ್ನು ಕಂಡು, ಕೂಡಲೇ ಬೈಕ್ ಅನ್ನು ತಿರುಗಿಸಿ ವೇಗವಾಗಿ ಹೊರಟಿದ್ದರು. ಆಗ ಬೈಕ್ ಫ್ಲೈಓವರ್ ನ ರೈಲಿಂಗ್ ಗೆ ಡಿಕ್ಕಿಹೊಡೆದ ಪರಿಣಾಮ ಇಬ್ಬರು ಕೆಳಗಿದ್ದ ರಸ್ತೆಗೆ ಎಸೆಯಲ್ಪಟ್ಟಿದ್ದರು.
ಸಮುದ್ರವನ್ನು ಸಂಪರ್ಕಿಸುವ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇನಲ್ಲಿ ರಂಗ್ ಪಂಚಮಿ ಮತ್ತು ಮುಸ್ಲಿಮರ ಬಡಿ ರಾತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ಸವಾರರ ಮೇಲೆ ನಿಗಾ ಇಡಲು ಬಾಂದ್ರಾ ಫ್ಲೈಓವರ್ ನಲ್ಲಿ ಗಸ್ತು ತಿರುಗುತ್ತಿದ್ದರು.
ಬೈಕ್ ನಲ್ಲಿದ್ದ ಹಿಂಬದಿ ಸವಾರ ಅಬ್ದುಲ್ ಅಹದ್ ಶೇಕ್ (18ವರ್ಷ) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಲಾಯಿಸುತ್ತಿದ್ದಾತ ಅಪ್ರಾಪ್ತನಾಗಿದ್ದು, ಆತನ ತಲೆಗೆ ಗಂಭೀರ ಗಾಯವಾಗಿದೆ. ಆತ ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಇಬ್ಬರೂ ಬೈಕ್ ಅನ್ನು ಯೂಟರ್ನ್ ತೆಗೆದುಕೊಂಡು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು. ಬೈಕ್ ಓಡಿಸುತ್ತಿದ್ದಾತನ ಬಳಿ ಲೈಸೆನ್ಸ್ ಕೂಡಾ ಇಲ್ಲವಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.