Advertisement

ಬದುಕಿನ “ಶತಕ’ಪೂರೈಸಿ ಅಗಲಿದ ಮುಂಬಯಿ ಕ್ರಿಕೆಟಿಗ ವಸಂತ್‌ ರಾಯ್‌ಜಿ

02:51 AM Jun 14, 2020 | Sriram |

ಮುಂಬಯಿ: ಬದುಕಿನ “ಶತಕ’ವನ್ನು ಪೂರೈಸಿದ್ದ ಭಾರತದ ಹಾಗೂ ವಿಶ್ವದ ಅತೀ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್‌ ರಾಯ್‌ಜಿ ಶನಿವಾರ ಮುಂಬಯಿ ಯಲ್ಲಿ ನಿಧನ ಹೊಂದಿದರು. ಕಳೆದ ಜನವರಿ 26ರಂದು ಅವರು 100 ವರ್ಷಗಳ ಸಂಭ್ರಮ ಆಚರಿಸಿದ್ದರು.

Advertisement

“ವಸಂತ್‌ ರಾಯ್‌ಜಿ ಶನಿವಾರ ನಸುಕಿನ 2.20ರ ವೇಳೆ ತಮ್ಮ ವಾಲ್ಕೇಶ್ವರ ನಿವಾಸದಲ್ಲಿ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದರು’ ಎಂದು ಅವರ ಮೊಮ್ಮಗ ಸುದರ್ಶನ್‌ ನಾನಾವತಿ ತಿಳಿಸಿದರು. ವಸಂತ್‌ ರಾಯ್‌ಜಿ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ರಾಯ್‌ಜಿ 1940ರ ದಶಕದಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 277 ರನ್‌ ಗಳಿಸಿದ್ದರು. ಸರ್ವಾಧಿಕ ಗಳಿಕೆ 68 ರನ್‌. 1933ರಲ್ಲಿ ನಡೆದ ಭಾರತದ ಪ್ರಪ್ರಥಮ ತವರಿನ ಟೆಸ್ಟ್‌ ಪಂದ್ಯವನ್ನು ಹತ್ತಿರದಿಂದ ಕಂಡ ಹೆಗ್ಗಳಿಕೆ ಇವರದ್ದಾಗಿತ್ತು.

ಕ್ರಿಕೆಟ್‌ ಚರಿತ್ರಕಾರ, ಲೆಕ್ಕ ಪರಿ ಶೋಧಕ ಕೂಡ ಆಗಿದ್ದ ವಸಂತ್‌ ರಾಯ್‌ಜಿ 1939ರಲ್ಲಿ “ಕ್ರಿಕೆಟ್‌ ಕ್ಲಬ್‌ ಆಫ್ ಇಂಡಿಯಾ’ ತಂಡವನ್ನು ಪ್ರತಿನಿಧಿಸುವ ಮೂಲಕ ಕ್ರಿಕೆಟ್‌ ಜೀವನ ಆರಂಭಿಸಿದರು. ಅಂದು ನಾಗ್ಪುರದಲ್ಲಿ ಸೆಂಟ್ರಲ್‌ ಪ್ರೊವಿನ್ಸಸ್‌ ವಿರುದ್ಧ ಆಡಿದರು.

1941ರಲ್ಲಿ ಮುಂಬಯಿ ತಂಡದ ಕದ ತೆರೆಯಿತು. ಆಗ ಅವರು ವಿಜಯ್‌ ಮರ್ಚಂಟ್‌ ನಾಯಕತ್ವದ ತಂಡದೊಂದಿಗೆ ವೆಸ್ಟರ್ನ್ ಇಂಡಿಯಾ ವಿರುದ್ಧ ಆಡಿದರು. ಬಳಿಕ ಬರೋಡ ತಂಡವನ್ನೂ ಪ್ರತಿನಿಧಿಸಿದರು.

Advertisement

ಮುಂಬಯಿಯ “ಜಾಲಿ ಕ್ರಿಕೆಟ್‌ ಕ್ಲಬ್‌’ನ ಸ್ಥಾಪಕ ಸದಸ್ಯರಲ್ಲಿ ಒಬ್ಬ ರಾದ ವಸಂತ್‌ ರಾಯ್‌ಜಿ ಉತ್ತಮ ಬರಹಗಾರರೂ ಆಗಿದ್ದರು. ರಣಜಿತ್‌ ಸಿಂಹಜಿ, ದುಲೀಪ್‌ ಸಿಂಹಜಿ, ವಿಕ್ಟರ್‌ ಟ್ರಂಪರ್‌, ಸಿ.ಕೆ. ನಾಯ್ಡು ಮತ್ತು ಎಲ್‌.ಪಿ. ಜೈ ಕುರಿತು ಪುಸ್ತಕಗಳನ್ನು ಬರೆದ ಹೆಗ್ಗಳಿಕೆ ರಾಯ್‌ಜಿ ಅವರದಾಗಿದೆ.

ಸಚಿನ್‌ ತೆಂಡುಲ್ಕರ್‌ ಶೋಕ
ಬಾಳ್ವೆಯ “ಸೆಂಚುರಿ’ ಪೂರ್ತಿ ಗೊಂಡಾಗ ಕ್ರಿಕೆಟ್‌ ತಾರೆಗಳಾದ ಸಚಿನ್‌ ತೆಂಡುಲ್ಕರ್‌ ಮತ್ತು ಸ್ಟೀವ್‌ ವೋ ಅವರು ವಸಂತ್‌ ರಾಯ್‌ಜಿ ನಿವಾಸಕ್ಕೆ ತೆರಳಿ ಶುಭ ಹಾರೈಸಿದ್ದರು. ಅವರ ಅಗಲಿಕೆಯ ವೇಳೆ ತೆಂಡುಲ್ಕರ್‌ ಇದನ್ನು ನೆನಪಿಸಿಕೊಂಡಿದ್ದಾರೆ.

“ಸರ್‌ ವಸಂತ್‌ ರಾಯ್‌ಜಿ ಅವರ 100 ವರ್ಷಗಳ ಸಂಭ್ರಮದಲ್ಲಿ ನಾನೂ ಭಾಗಿಯಾಗಿದ್ದೆ. ಅವರ ಕ್ರಿಕೆಟ್‌ ಪ್ರೀತಿ ಅಸಾಮಾನ್ಯ. ವಸಂತ್‌ ರಾಯ್‌ಜಿ ಅಗಲಿಕೆಯಿಂದ ಬಹಳ ನೋವಾಗಿದೆ’ ಎಂದು ಸಚಿನ್‌ ತೆಂಡುಲ್ಕರ್‌ ಶೋಕ ವ್ಯಕ್ತ ಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next