ಮುಂಬಯಿ: ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಮುಂಬಯಿ ತಂಡದ ಶೋಚನೀಯ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರಧಾನ ಕೋಚ್ ಅಮಿತ್ ಪಗ್ನಿಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
“ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ನಾನು ಹೊಣೆ ಹೊರಲಿದ್ದೇನೆ. ತಂಡದ ಆಟಗಾರರಿಗೆ ತೀವ್ರವಾದ ಅಭ್ಯಾಸದ ಕೊರತೆ ಕಾಡಿದ್ದೇ ಈ ನಿರ್ವಹಣೆಗೆ ಕಾರಣ. ಆಟಗಾರರಿಗೆಲ್ಲ ಒಟ್ಟಾಗಿ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ’ ಎಂಬುದಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‌ಗೆ (ಎಂಸಿಎ) ಬರೆದ ಪತ್ರದಲ್ಲಿ ಪಗ್ನಿಸ್ ತಿಳಿಸಿದ್ದಾರೆ.
ಅಮಿತ್ ಪಗ್ನಿಸ್ ಅವರ ರಾಜೀನಾಮೆಯನ್ನು ಎಂಸಿಎ ಅಂಗೀಕರಿಸುವುದೋ ಅಥವಾ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ ತನಕ ಮುಂದುವರಿಯುವಂತೆ ಸೂಚಿಸುತ್ತದೋ ಎಂಬದನ್ನು ಕಾದು ನೋಡಬೇಕಿದೆ.
ಮುಂಬಯಿ ಹಾಗೂ ರೈಲ್ವೇಸ್ ತಂಡದ ಮಾಜಿ ಕ್ರಿಕೆಟಿಗನಾಗಿರುವ ಅಮಿತ್ ಪಗ್ನಿಸ್ ಕಳೆದ ಡಿ. 17ರಂದಷ್ಟೇ ಕೋಚ್ ಹುದ್ದೆಗೆ ನೇಮಕಗೊಂಡಿದ್ದರು.
ಸಯ್ಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ “ಎಲೈಟ್ ಇ’ ವಿಭಾಗದಲ್ಲಿದ್ದ ಮುಂಬಯಿ, ತವರಿನಂಗಳದಲ್ಲೇ ಸತತ 4 ಪಂದ್ಯಗಳನ್ನು ಸೋತು ಕೊನೆಯದಾಗಿ ಆಂಧ್ರದ ವಿರುದ್ಧ ತನ್ನ ಏಕೈಕ ಜಯ ಸಾಧಿಸಿತ್ತು. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದ್ದರು.