ಮುಂಬಯಿ : ಮುಂಬಯಿ ಮಹಾನಗರಿಯ ನಿತ್ಯ ಪ್ರಯಾಣಿಕರಿಗೆ ಇಂದು ಮಂಗಳವಾರ ದುಪ್ಪಟ್ಟು ಸಂತಸ ಉಂಟಾಗಿದೆ.
ಮೊದಲನೇಯದಾಗಿ ಆಟೋ ಚಾಲಕರು ಇಂದಿನಿಂದ ಆರಂಭಿಸಲಿದ್ದ ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂದೆಗೆದುಕೊಂಡಿದ್ದಾರೆ.
ಎರಡನೇಯದಾಗಿ ಮುಂಬಯಿ ಮಹಾ ನಗರಿಯ ಬೆಸ್ಟ್ ಸಾರಿಗೆ ಬಸ್ಸಿನ ಪ್ರಯಾಣ ದರವನ್ನು ಇಂದಿನಿಂದ ಜಾರಿಗೆ ಬರುವಂತೆ ಇಳಿಸಲಾಗಿದೆ.
ಬೆಸ್ಟ್ ಪ್ರಕಟಿಸಿರುವಂತೆ ಇಂದಿನಿಂದ ಬಸ್ಸು ಪ್ರಯಾಣ ದರ ನಾಲ್ಕು ಸ್ಲಾಬ್‌ಗಳನ್ನು ಮಾತ್ರವೇ ಹೊಂದಿರುತ್ತದೆ : 0.5 ಕಿ.ಮೀ, 5-10 ಕಿ.ಮೀ., 10-15 ಕಿ.ಮೀ ಮತ್ತು 15 ಕಿ.ಮೀ. ಮೀರುವ ಪ್ರಯಾಣ.
Related Articles
ಬೆಸ್ಟ್ ನಾನ್-ಎಸಿ ಕನಿಷ್ಠ ಪ್ರಯಾಣ ದರವನ್ನು ಮೊದಲ 5 ಕಿ.ಮೀ.ಗೆ 8 ರೂ.ಗಳಿಂದ 5ರೂ.ಗೆ ಇಳಿಸಲಾಗಿದೆ. ಗರಿಷ್ಠ ದರವನ್ನು 20 ರೂ.ಗೆ ನಿಗದಿಸಲಾಗಿದೆ.
ಎಸಿ ಬಸ್ ಕನಿಷ್ಠ ಪ್ರಯಾಣ ದರವನ್ನು 20 ರೂ.ಗಳಿಂದ 6 ರೂ.ಗೆ ಇಳಿಸಲಾಗಿದೆ. ಗರಿಷ್ಠ ದರವನ್ನು 25 ರೂ.ಗೆ ನಿಗದಿಸಲಾಗಿದೆ.
ಇಂದು ಮಂಗಳವಾರದಿಂದ ನಾನ್-ಎಸಿ (ರೆಗ್ಯುಲರ್) ಬಸ್ ಪ್ರಯಾಣ ದರವು 5 ರೂ., 10, ರೂ., 15 ರೂ. ಮತ್ತು 20 ರೂ. ಅಗಿರುತ್ತದೆ. ಏರ್ ಕಂಡೀಶನ್ ಬಸ್ ದರಗಳು 6, 13, 19 ಮತ್ತು 25 ರೂ.ಗಳಾಗಿರುತ್ತವೆ.
ಇದೇ ವೇಳೆ ಮುಂಬಯಿ ಆಟೋ ಚಾಲಕರ ಸಂಘದ ಪ್ರತಿನಿಧಿಗಳು ಇಂದು ತಮ್ಮ ಬೇಡಿಕೆಗಳನ್ನು ಚರ್ಚಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅರನ್ನು ಭೇಟಿಯಾಗಲಿದ್ದಾರೆ. ಅಂತೆಯೇ ಅವರು ಇಂದಿನಿಂದ ಆರಂಭಿಸಲಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ.
ಆಟೋ ಪ್ರಯಾಣದ ಕನಿಷ್ಠ ದರಗಳನ್ನು ಏರಿಸಬೇಕು, ಹೊಸ ಪರ್ಮಿಟ್‌ಗಳನ್ನು ನೀಡಬಾರದು, ಓಲಾ, ಉಬರ್ ಸೇವೆಗಳನ್ನು ನಿಷೇಧಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಟೋ ಚಾಲಕರ ಸಂಘ ಸರಕಾರವನ್ನು ಆಗ್ರಹಿಸಿದೆ.