ಮುಂಬಯಿ : ಮರದಿಂದ ಬಿದ್ದು ಎದೆಗೆ ಸ್ಟೀಲ್ ರಾಡ್ ಹೊಕ್ಕಿ ತೀವ್ರವಾಗಿ ಗಾಯಗೊಂಡಿದ್ದ 22 ವರ್ಷದ ಕಾರ್ಮಿಕನ ಜೀವವನ್ನು ನಗರದ ನಾಗರಿಕ ಆಸ್ಪತ್ರೆಯ ವೈದ್ಯರು ಉಳಿಸಿದ್ದಾರೆ.
ಬಾಂದ್ರಾದಲ್ಲಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಬಾಬಾ ಆಸ್ಪತ್ರೆಯ ವೈದ್ಯರು ಇತ್ತೀಚೆಗೆ ಕಾರ್ಮಿಕನಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ಎದೆಯಲ್ಲಿ ಸಿಲುಕಿದ್ದ ಮುರಿದ ಸ್ಟೀಲ್ ರಾಡ್ ಅನ್ನು ತೆಗೆದುಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂದ್ರಾದಲ್ಲಿ ಜುಲೈ 26 ರಂದು ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು, ಕಾರ್ಮಿಕನು ಮರದ ಮೇಲೆ ಹತ್ತಿ ಕೆಲಸ ಮಾಡುತ್ತಿದ್ದಾಗ, ಸಮತೋಲನ ತಪ್ಪಿ ಮರದಿಂದ ಬಿದ್ದು ಕಟ್ಟಡದ ಕಾಂಪೌಂಡ್ ಬೇಲಿ ಮೇಲೆ ಬಿದ್ದಿದ್ದಾನೆ. ಚೂಪಾದ ಸ್ಟೀಲ್ ರಾಡ್ ಅವರ ಎದೆಗೆ ಚುಚ್ಚಿತು ಮತ್ತು ಮುರಿದ ತುಂಡು ಒಳಗೆ ಉಳಿದಿತ್ತು. ಕೆಲಸಗಾರನನ್ನು ಚಿಕಿತ್ಸೆಗಾಗಿ ಬಾಬಾ ಆಸ್ಪತ್ರೆಗೆ ಸಾಗಿಸಲಾಯಿತು. “ಆಸ್ಪತ್ರೆಯಲ್ಲಿ, ಸ್ಟೀಲ್ ರಾಡ್ ಅವರ ಶ್ವಾಸಕೋಶಕ್ಕೆ ಹಾನಿ ಮಾಡಿಲ್ಲ ಎಂದು ಕಂಡುಬಂದಿದ್ದು, ಪಕ್ಕೆಲುಬು ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ.
ವಿನೋದ್ ಖಾಡೆ, ಅಮಿತ್ ದೇಸಾಯಿ ಮತ್ತು ಶ್ರದ್ಧಾ ಮೋನೆ ಅವರನ್ನೊಳಗೊಂಡ ವೈದ್ಯರ ತಂಡವು ಕೆಲಸಗಾರನಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿತು. ಒಂದು ಗಂಟೆ ಅವಧಿಯ ಶಸ್ತ್ರ ಚಿಕಿತ್ಸೆಯ ನಂತರ, ಕಾರ್ಮಿಕನ ಎದೆಯಿಂದ ಸ್ಟೀಲ್ ರಾಡ ನ್ನು ತೆಗೆದುಹಾಕಲಾಯಿತು ಎಂದು ಅವರು ಹೇಳಿದರು.
ಸ್ಟೀಲ್ ರಾಡ್ ತೆಗೆದ ನಂತರ ಕಾರ್ಮಿಕನ ಶ್ವಾಸಕೋಶ ಮತ್ತು ಹೃದಯದ ಬಳಿ ಆಂತರಿಕ ರಕ್ತಸ್ರಾವವನ್ನು ತಪ್ಪಿಸಲು, ವೈದ್ಯರು ಇಂಟರ್ಕೋಸ್ಟಲ್ ಟ್ಯೂಬ್ ಅನ್ನು ಸೇರಿಸಿದರು. ಶಸ್ತ್ರಚಿಕಿತ್ಸೆಯ ನಂತರ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು, ಚೇತರಿಸಿಕೊಂಡ ನಂತರ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಒಂದು ವಾರದ ನಂತರ, ಕಾರ್ಮಿಕನು ಗಾಯಗಳಿಂದ ಚೇತರಿಸಿಕೊಂಡನು ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದನು. ಎರಡು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.