ಮುಂಬೈ: ವಾಣಿಜ್ಯ ನಗರಿಯ ಹೆಸರಾಂತ ರಿಯಲ್ ಎಸ್ಟೇಟ್ ಡೆವಲಪರ್ ಪರಾಸ್ ಪೋರ್ವಾಲ್ ವಸತಿ ಸಮುಚ್ಛಯದ 23ನೇ ಅಂತಸ್ತಿನ ಮೇಲಿನಿಂದ ಕೆಳಕ್ಕೆ ಹಾರಿ ದಾರುಣ ಅಂತ್ಯ ಕಂಡಿರುವ ಘಟನೆ ಮುಂಬೈನಲ್ಲಿ ಗುರುವಾರ (ಅಕ್ಟೋಬರ್ 20)ನಡೆದಿದೆ.
ಇದನ್ನೂ ಓದಿ:ಪಡಿತರ ಚೀಟಿಯಲ್ಲಿ ‘ಏಸು’ ಭಾವಚಿತ್ರ; ಡಿಕೆಶಿ ಸ್ವಕ್ಷೇತ್ರದಲ್ಲಿ ಮತಾಂತರ ವಿವಾದ
ಮನೆಯ ಜಿಮ್ ನಿಂದ ಹೊರಗೆ ಬಾಲ್ಕನಿಗೆ ಬಂದು ಪರಾಸ್ (57 ವರ್ಷ) ಕೆಳಕ್ಕೆ ಹಾರಿರುವುದಾಗಿ ವರದಿ ತಿಳಿಸಿದ್ದು, “ತನ್ನ ಸಾವಿಗೆ ಯಾರೂ ಹೊಣೆಗಾರರಲ್ಲ ಮತ್ತು ಯಾರನ್ನೇ ಆಗಲಿ ತನಿಖೆಗೆ ಒಳಪಡಿಸಬೇಕಾಗಿಲ್ಲ” ಎಂದು ಡೆತ್ ನೋಟ್ ನಲ್ಲಿ ಬರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಚಿಂಚ್ ಪೊಂಕ್ಲಿ ರೈಲ್ವೆ ನಿಲ್ದಾಣ ಸಮೀಪ ಇರುವ ಶಾಂತಿ ಕಮಲ್ ಹೌಸಿಂಗ್ ಸೊಸೈಟಿಯ 23ನೇ ಮಹಡಿಯಲ್ಲಿರುವ ನಿವಾಸದಲ್ಲಿನ ಜಿಮ್ ನ ಹೊರಭಾಗದ ಬಾಲ್ಕನಿಯಲ್ಲಿ ನಿಂತು ಕೆಳಕ್ಕೆ ಹಾರಿರುವುದಾಗಿ ಅಧಿಕಾರಿಗಳು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿನ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.