ಮುಂಬಯಿ : ಮುಂಬಯಿ ಈಗ ದೇಶದ ಹಾಗೂ ಇದೇ ವೇಳೆ ವಿಶ್ವದ ಅತೀ ದೊಡ್ಡ ಸಾರ್ವಜನಿಕ ವೈಫೈ ನಗರವಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದಾರೆ.
ಅವರಿಂದು ಮುಂಬಯಿ ಮಹಾನಗರಿಯ ವಿವಿಧ ತಾಣಗಳಲ್ಲಿ ಒಟ್ಟು 500 ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ ನೀಡಿದ್ದಾರೆ. ಈ ವರ್ಷ ಮೇ 1ರೊಳಗೆ ಮುಂಬಯಿಯಲ್ಲಿನ ವೈಫೈ ಹಾಟ್‌ಸ್ಪಾಟ್‌ಗಳ ಸಂಖ್ಯೆ 1,200ಕ್ಕೆ ಏರಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಫಡ್ನವೀಸ್ ಅವರ ನಗರದ ಪ್ರಜೆಗಳಿಗೆ ಅತೀ ನಿಕಟವಿರುವ ವೈಫೈ ಹಾಟ್ ಸ್ಪಾಟ್‌ಗಳ ವಿವರಗಳನ್ನು ನೀಡಿದರು. ಇವುಗಳ ಸಂಪರ್ಕ ಹಾಗೂ ವೇಗದ ಬಗೆಗಿನ ಬೆಳವಣಿಗೆಗಳ ಮೇಲೆ ಸರಕಾರ ತೀವ್ರವಾಗಿ ನಿಗಾ ಇಡಲಿದೆ. ಮುಂಬಯಿಗರಿಗೆ ಅತ್ಯಂತ ಉತ್ತಮ ವೈಫೈ ಹಿತಾನುಭವವನ್ನು ನೀಡುವುದಕ್ಕೆ ಸರಕಾರ ಬದ್ಧವಾಗಿದೆ ಎಂದಿರುವ ಫಡ್ನವೀಸ್, ಈ ಕುರಿತ ಯಾವುದೇ ಲೋಪ, ದೋಷ, ಅಡ್ಡಿ, ಅಡಚಣೆಗಳನ್ನು ಆದ್ಯತೆಯ ಮೇಲೆ ನಿವಾರಿಸಲಾಗುವುದು ಎಂಬ ಭರವಸೆಯನ್ನು ಅವರು ಜನರಿಗೆ ನೀಡಿದರು.
ಜನವರಿ 2ರಿಂದ 8ರ ವರೆಗಿನ ಪ್ರಾಯೋಗಿಕ ವೈಫೈ ಸೇವೆ ಒದಗಣೆಯ ಅವಧಿಯಲ್ಲಿ 23,000 ಬಳಕೆದಾರರು ಈ ಸೇವೆಗೆ ಸೈನ್ ಅಪ್ ಆಗಿದ್ದಾರೆ; 2 ಟಿಬಿ ಡಾಟಾಗಿಂತಲೂ ಅಧಿಕ ಪ್ರಮಾಣದ ಡಾಟಾವನ್ನು ಅವರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಫಡ್ನವೀಸ್ ಹೇಳಿದರು.
ಹಾಟ್ ಸ್ಪಾಟ್‌ಗಳ ಮೂಲಕ ಮುಂಬಯಿ ಮಹಾನಗರಿಯನ್ನು ಸಂಪರ್ಕಿಸುವ ಪ್ರಯತ್ನವನ್ನು ಕಳೆದ ವರ್ಷ ಆಗಸ್ಟ್‌ನಲ್ಲೇ ಮಾಡಲಾಗಿತ್ತು ಎಂದಿರುವ ಫಡ್ನವೀಸ್, ನಗರದಲ್ಲಿ ಮೇ 1ರ ಒಳಗಾಗಿ 1,200 ವೈಫೈ ಹಾಟ್‌ಸ್ಪಾಟ್‌ಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಹಾಗಿದ್ದರೂ ಮುಂಬಯಿ ನಗರ ವ್ಯಾಪ್ತಿಯಲ್ಲಿ 500 ವೈಫೈ ಹಾಟ್ ಸ್ಪಾಟ್‌ಗಳನ್ನು ಪೂರ್ಣಗೊಳಿಸುವ ಗಡುವು ಕಳೆದ ವರ್ಷ ನವೆಂಬರ್‌ಗೆ ಮುಗಿದಿತ್ತು ಎಂದವರು ಹೇಳಿದರು.