Advertisement

Watch video:ಸೇತುವೆಯಲ್ಲಿ ಹೈಡ್ರಾಮಾ…ಕೊನೆಗೂ ಮಹಿಳೆಯ ಪ್ರಾಣ ರಕ್ಷಿಸಿದ ಟ್ರಾಫಿಕ್‌ ಪೊಲೀಸ್‌

03:50 PM Aug 03, 2023 | Team Udayavani |

ಮಹಾರಾಷ್ಟ್ರ: ಇತ್ತೀಚೆಗೆ ದೇಶಾದ್ಯಂತ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಆದರೆ ನವಿ ಮುಂಬೈನ ವಾಶಿ ಸೇತುವೆ ಮೇಲಿಂದ ಸಮುದ್ರಕ್ಕೆ ಹಾರಿ ಜೀವ ಕಳೆದುಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬಳನ್ನು ಮುಂಬೈ ಟ್ರಾಫಿಕ್‌ ಪೊಲೀಸರು ಚಾಕಚಕ್ಯತೆಯಿಂದ ರಕ್ಷಿಸಿದ ಘಟನೆ ನಡೆದಿದ್ದು, ಮಹಿಳೆಯನ್ನು ರಕ್ಷಿಸಿದ ವಿಡಿಯೋ ಇದೀಗ ವೈರಲ್‌ ಆಗಿದೆ.‌

Advertisement

ಇದನ್ನೂ ಓದಿ:ಗಿಳಿ ಕಾಣೆಯಾಗಿದೆ… ಹುಡುಕಿ ಕೊಟ್ಟವರಿಗೆ 10 ಸಾವಿರ ಬಹುಮಾನ

ಮಹಿಳೆಯನ್ನು ಸಮಯಪ್ರಜ್ಞೆಯಿಂದ ಕಾಪಾಡಿದ ಟ್ರಾಫಿಕ್‌ ಪೊಲೀಸರ ನಡೆಗೆ ಸಾರ್ವಜನಿಕರಿಂದ ಹಾಗೂ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಮಹಿಳೆಯನ್ನು ಟ್ರಾಫಿಕ್‌ ಕಾನ್ಸ್‌ ಟೇಬಲ್‌ ಗಳಾದ ಶಿವಾಜಿರಾವ್‌ ಬಾಚ್ರೆ, ರಾಜು ಡಾಂಡೇಕರ್‌, ರಾಥೋಡ್‌ ಮತ್ತು ಟಾಂಬೆ ರಕ್ಷಿಸಿರುವುದಾಗಿ ಎ ಎನ್‌ ಐ ವರದಿ ಮಾಡಿದೆ.

ವಿಡಿಯೋದಲ್ಲೇನಿದೆ?:

ಸೇತುವೆಯ ಆಯಕಟ್ಟಿನ ಭಾಗದಲ್ಲಿ ಪೈಪ್‌ ಅನ್ನು ಹಿಡಿದುಕೊಂಡ ಮಹಿಳೆಯೊಬ್ಬಳು ಅಳುತ್ತಿದ್ದು, ಈ ಸಂದರ್ಭದಲ್ಲಿ ಕೆಲವು ಜನರು (ಕೆಲವರು ಮಹಿಳೆಯ ಕುಟುಂಬದ ಸದಸ್ಯರು) ಆಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಸಮುದ್ರಕ್ಕೆ ಹಾರದಂತೆ ತಡೆಯಲು ಪ್ರಯತ್ನಿಸುತ್ತಿದ್ದರು. ಆದರೆ ಆಕೆ ಯಾರ ಮಾತನ್ನೂ ಕೇಳಲು ನಿರಾಕರಿಸುತ್ತಿದ್ದು, ಯಾರೂ ಹತ್ತಿರ ಬರಬಾರದು, ದೂರ ಹೋಗಿ, ಇಲ್ಲದಿದ್ದರೆ ಸೇತುವೆ ಮೇಲಿಂದ ಕೆಳಕ್ಕೆ ಹಾರುವುದಾಗಿ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Advertisement


ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಟ್ರಾಫಿಕ್‌ ಪೊಲೀಸ್‌ ಶಿವಾಜಿ ರಾವ್‌ ಆಕೆಯ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಯಾವುದೇ ಕಾರಣಕ್ಕೂ ದುಡುಕಬೇಡ ಎಂದು ಆಕೆಗೆ ಹೇಳುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಆಕೆಯ ಸಮೀಪ ತೆರಳಿ ರಕ್ಷಿಸಲು ಮುಂದಾದಾಗ ಆಕೆ ಕೋಪದಿಂದ ಸೇತುವೆ ಮೇಲಿಂದ ಹಾರುವುದಾಗಿ ಬೆದರಿಕೆಯೊಡ್ಡಿದ್ದಳು. ಆಗ ಗುಂಪುಗೂಡಿದ್ದ ಜನರಿಗೆ ದೂರ ಸರಿಯುವಂತೆ ಟ್ರಾಫಿಕ್‌ ಪೊಲೀಸರು ಸೂಚಿಸಿದ್ದರು. ಆಕೆ ಅಳುತ್ತಾ ತನ್ನ ಸಿಟ್ಟನ್ನು ಹೊರಹಾಕುತ್ತಿದ್ಳು. ಈ ಸಂದರ್ಭದಲ್ಲಿ ದಿಢೀರನೆ ಮುನ್ನುಗ್ಗಿದ ಟ್ರಾಫಿಕ್‌ ಪೊಲೀಸ್‌ ಆಕೆಯ ಬೆನ್ನನ್ನು ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಿದ್ದು, ಕೂಡಲೇ ಉಳಿದ ಜನರು, ಪೊಲೀಸರು ನೆರವು ನೀಡುವ ಮೂಲಕ ಆಕೆಯನ್ನು ರಕ್ಷಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮಹಿಳೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಟ್ರಾಫಿಕ್‌ ಕಾನ್ಸ್‌ ಟೇಬಲ್‌ ಗಳ ಸಮಯಪ್ರಜ್ಞೆಯಿಂದ ಆಕೆಯ ಜೀವ ರಕ್ಷಿಸಿದ್ದಕ್ಕೆ ನೆಟ್ಟಿಗರು ಬಹುಪರಾಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next