ಮುಂಬಯಿ: 16 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಆರೋಪದಲ್ಲಿ ಮೂವರು ಅಪ್ರಾಪ್ತ ವಯಸ್ಕ ಬಾಲಕರು ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯ ಮುಂಬೈನ ಲೋವರ್ ಪರೇಲ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಸಂತ್ರಸ್ತೆಯ ಸ್ನೇಹಿತನಾಗಿದ್ದು, ಹುಟ್ಟುಹಬ್ಬವನ್ನು ಆಚರಿಸಲು ಹೋಗಿ ಉಳಿದ ಐವರು ಆರೋಪಿಗಳೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಂತರ ರಾತ್ರಿ, ಚಾಲ್ ನಿವಾಸಿಗಳು ಬಾಲಕಿಯ ಆಕ್ರಂದನ ಕೇಳಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಎನ್‌ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯ ಸಿಬಂದಿ ಅಪ್ರಾಪ್ತ ವಯಸ್ಕ ಬಾಲಕಿ ಮತ್ತು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕರಾಗಿರುವ ಮೂವರನ್ನು ಬಂಧಿಸಿ ಡೋಂಗ್ರಿಯಲ್ಲಿರುವ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.