Advertisement

ಕನ್ನಡದಲ್ಲೀಗ ಮಲ್ಟಿಸ್ಟಾರ್ ಹವಾ

05:54 PM Oct 27, 2017 | |

ನೀವ್ಯಾಕೆ ಮಲ್ಟಿಸ್ಟಾರ್‌ ಸಿನಿಮಾ ಮಾಡೋಲ್ಲ ಅಂತ ಒಮ್ಮೆ ರಾಕ್‌ಲೈನ್‌ ವೆಂಕಟೇಶ್‌ ಅವರನ್ನು ಕೇಳಿದಾಗ, ಹೀರೋಗಳು ಸ್ವಲ್ಪ ಮೆತ್ತಗಾಗಬೇಕು. ಆಗಷ್ಟೇ ಬಹುತಾರಾಗಣದ ಚಿತ್ರ ಬರೋಕೆ ಸಾಧ್ಯ ಅಂದಿದ್ದರು. ಅವರು ಹಾಗಂತ ಹೇಳಿ ಒಂದೂವರೆ ವರ್ಷ ಆಗಿರಬಹುದೇನೋ? ಈಗ ಹೀರೋಗಳು ಮೆತ್ತಗಾಗಿದ್ದಾರಾ? ಸೋಲು ಅವರನ್ನು ಕಂಗೆಡಿಸಿದೆಯಾ? ಅಥವಾ ಮನೋಭಾವ ಬದಲಾಗಿದೆಯಾ? ಕಾರಣಗಳು ಏನೇ ಇರಲಿ, ಮತ್ತೆ ಕನ್ನಡದಲ್ಲಿ ಮಲ್ಟಿಸ್ಟಾರ್‌ ಸಿನಿಮಾಗಳ ಟ್ರೆಂಡು ಆರಂಭವಾಗಿದೆ. 

Advertisement

ಎಂಬತ್ತರ ದಶಕದಲ್ಲಿ ಬಹುತಾರಾಗಣದ ಅನೇಕ ಸಿನಿಮಾಗಳು ಬಂದವು. ವಿಷ್ಣುವರ್ಧನ್‌-ಅಂಬರೀಶ್‌, ಅಂಬರೀಶ್‌- ರವಿಚಂದ್ರನ್‌, ಶಂಕರ್‌ನಾಗ್‌- ಅನಂತ್‌ನಾಗ್‌, ರಾಜ್‌ಕುಮಾರ್‌-ಶ್ರೀನಾಥ್‌, ದೇವರಾಜ್‌- ಪ್ರಭಾಕರ್‌ … ಹೀಗೆ ತಾರೆಯರೆಲ್ಲ ಒಂದಾಗಿ ಸಿನಿಮಾ ಮಾಡೋದನ್ನು ಇಷ್ಟಪಡುತ್ತಿದ್ದರು. ಗಂಡಬೇರುಂಡ, ಖದೀಮ ಕಳ್ಳರು, ಸ್ನೇಹಿತರ ಸವಾಲ್‌, ಸಹೋದರರ ಸವಾಲ್‌, ಹಬ್ಬ  – ಹೀಗೆ ಸಾಲು ಸಾಲು ಸಿನಿಮಾಗಳು ಬಂದವು.

ಇದೀಗ ಮತ್ತದೇ ಟ್ರೆಂಡು ತಿರುಗಿ ಬಂದಿದೆ. ಮಲ್ಟಿಸ್ಟಾರು ಸಿನಿಮಾಗಳನ್ನು ಸ್ಟಾರುಗಳು ಒಪ್ಪಿಕೊಳ್ಳುತ್ತಿದ್ದಾರೆ. ಊಹಿಸಲಿಕ್ಕೂ ಸಾಧ್ಯವಿಲ್ಲದ ಕಾಂಬೀನೇಷನ್ನುಗಳು ಕೆಲಸ ಮಾಡುತ್ತಿವೆ. ಹೀಗೆ ಮಲ್ಟಿಸ್ಟಾರು ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ಹೆಸರು ಮಾಡಿದ್ದವರು ರಾಕ್‌ಲೈನ್‌ ವೆಂಕಟೇಶ್‌. “ಪ್ರೀತ್ಸೇ’, “ದಿಗ್ಗಜರು’, “ಯಾರೇ ನೀನು ಚೆಲುವೆ’ ಮುಂತಾದವು ಅವರದೇ ಸಿನಿಮಾಗಳು. ಅಂತಹ ಚಿತ್ರಗಳ ನಿರ್ದೇಶನದಲ್ಲಿ ಪಳಗಿದ್ದವರು  ಡಿ. ರಾಜೇಂದ್ರಬಾಬು, ರಾಜೇಂದ್ರ ಸಿಂಗ್‌ ಬಾಬು- ಮುಂತಾದ ನಿರ್ದೇಶಕರು. 
ಇದೀಗ ಹೊಸ ನಿರ್ಮಾಪಕರು, ಹೊಸ ನಿರ್ದೇಶಕರು ಕೂಡ ಇದೇ ದಾರಿಯಲ್ಲಿದ್ದಾರೆ. ಬಹುತಾರೆಗಳನ್ನಿಟ್ಟುಕೊಂಡು ಬಹುನಿರೀಕ್ಷೆಯ ಸಿನಿಮಾ ಮಾಡುತ್ತಿದ್ದಾರೆ. ಈಗೇನಿದ್ರೂ ಮಲ್ಟಿಗಳ ಕಾಲ. ಮಲ್ಟಿ ಮೀಡಿಯಾ, ಮಲ್ಟಿ ಫ್ಲೆಕ್ಸು. ಜೊತೆಗೆ ಮಲ್ಟಿ ಸ್ಟಾರು, ಮಲ್ಟಿ ಕ್ರೋರು!

ಶ್ರೀಕಂಠ
ಶಿವರಾಜ್‌ಕುಮಾರ್‌ ಅಭಿನಯದ “ಶ್ರೀಕಂಠ’ ಚಿತ್ರ ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿಸಿದ್ದು, ಚಿತ್ರ ಪ್ರೇಕ್ಷಕರ ಎದುರು ಬರಲು ರೆಡಿಯಾಗಿದೆ. ನಿರ್ದೇಶಕ ಮಂಜುಸ್ವರಾಜ್‌ಗೆ ಇದು ಮೂರನೇ ಸಿನಿಮಾ. ಅದರಲ್ಲೂ ಶಿವರಾಜ್‌ಕುಮಾರ್‌ಗೆ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಚಿತ್ರದಲ್ಲಿ ವಿಜಯರಾಘವೇಂದ್ರ ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಶಿವರಾಜ್‌ಕುಮಾರ್‌ ಮತ್ತು ವಿಜಯರಾಘವೇಂದ್ರ ಈ ಹಿಂದೆ “ಖುಷಿ’ ಸಿನಿಮಾದಲ್ಲಿ ನಟಿಸಿದ್ದರು. ಮಿಲನ ಪ್ರಕಾಶ್‌ ನಿರ್ದೇಶನದ “ಖುಷಿ’ ಚಿತ್ರದಲ್ಲಿ ವಿಜಯರಾಘವೇಂದ್ರ ಶಿವರಾಜ್‌ಕುಮಾರ್‌ ಸಹೋದರನಾಗಿ ನಟಿಸಿದ್ದರು. ಈಗ “ಶ್ರೀಕಂಠ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಜತೆ ಪುನಃ ವಿಜಯರಾಘವೇಂದ್ರ ಜತೆಯಾಗಿದ್ದಾರೆ. ಇಡೀ ಸಿನಿಮಾದಲ್ಲಿ ವಿಜಯರಾಘವೇಂದ್ರ ಪಾತ್ರ ಕ್ಯಾರಿ ಆಗುತ್ತಾ ಹೋಗಲಿದೆಯಂತೆ.

Advertisement

ಇನ್ನು ನಿರ್ಮಾಪಕ ಚಿಂಗಾರಿ ಮಹದೇವು ಅವರ ಪುತ್ರ ಮನು ಗೌಡ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇವರಿಗೂ ಇದು ಮೂರನೇ ನಿರ್ಮಾಣದ ಚಿತ್ರ. “ಶ್ರೀಕಂಠ’ ಶೀರ್ಷಿಕೆ ಕೆಳಗೆ “ದಿ ಕಾಮನ್‌ ಮ್ಯಾನ್‌’ ಎಂಬ ಅಡಿಬರಹವಿದೆ. ಶಿವರಾಜ್‌ಕುಮಾರ್‌ “ಶ್ರೀಕಂಠ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಅದೊಂದು ಹೊಸಬಗೆಯ ಪಾತ್ರ. “ಶ್ರೀಕಂಠ’ ಪಕ್ಕಾ ಆ್ಯಕ್ಷನ್‌ ಮತ್ತು ಎಂಟರ್‌ಟೈನರ್‌ ಸಿನಿಮಾ. ಈ ಚಿತ್ರಕ್ಕೆ ಚಾಂದಿನಿ ನಾಯಕಿ. ಇದು ಕನ್ನಡದ ಮೊದಲ ಸಿನಿಮಾ ಅವರಿಗೆ. ಮೂಲತಃ ಕನ್ನಡದ ಹುಡುಗಿಯೇ, ಆದರೆ, ಯುಎಸ್‌ನಲ್ಲಿ ವಾಸ. ಮಲಯಾಳಂ ಚಿತ್ರ ಮಾಡಿದ್ದ ಅವರಿಗೆ ಇದು ಮೊದಲ ಸಿನಿಮಾ.  ಈ ಹಿಂದೆಯೇ ಚಿತ್ರ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಕೆಲ ಸಣ್ಣಪುಟ್ಟ ಕೆಲಸಗಳನ್ನು ಪೂರ್ತಿಗೊಳಿಸಬೇಕಾಗಿದ್ದರಿಂದ ನಿರ್ದೇಶಕರು, “ಶ್ರೀಕಂಠ’ನನ್ನು ಇನ್ನಷ್ಟು ಅಂದಗೊಳಿಸಿ, ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಸದ್ಯಕ್ಕೆ ಡಬ್ಬಿಂಗ್‌ ಕೆಲಸ ಬಾಕಿ ಇದೆ. ಇನ್ನು, ನಿರ್ಮಾಪಕ ಮನುಗೌಡ ಅವರಿಗೆ ಶಿವರಾಜ್‌ಕುಮಾರ್‌ ಸಿನಿಮಾ ನಿರ್ಮಾಣ ಮಾಡಿದ್ದು ಅವರ ಬದುಕಿನ ಸಾರ್ಥಕತೆಯಂತೆ.

ಶಿವರಾಜ್‌ಕುಮಾರ್‌ಗೆ ಈ ಚಿತ್ರದ ಕಥೆ ಕೇಳಿದಾಗಲೇ ಚಿತ್ರದಲ್ಲೇನೋ ಹೊಸತನವಿದೆ ಅಂತೆನಿಸಿ, ಒಪ್ಪಿಕೊಂಡರಂತೆ. ಮಂಜುಸ್ವರಾಜ್‌ಗೆ ಚಿತ್ರದ ಮೇಲೆ ಹಿಡಿತ ಇರುವುದನ್ನು ಕಂಡ ಶಿವಣ್ಣ, ನಿರ್ದೇಶಕರು ಕೇಳಿದ್ದನ್ನೆಲ್ಲಾ ಮಾಡಿದ್ದಾರಂತೆ. ಒಂದೊಳ್ಳೆಯ ತಂಡದಲ್ಲಿ ಕೆಲಸ ಮಾಡಿದ್ದನ್ನು ಖುಷಿಯಿಂದ ಹೇಳಿಕೊಳ್ಳುವ ಶಿವರಾಜ್‌ಕುಮಾರ್‌, ಕನ್ನಡದಲ್ಲಿ ಇದು ಹೊಸಬಗೆಯ ಸಿನಿಮಾ ಎಂಬ ಮಾತು ಹೊರಹಾಕುತ್ತಾರೆ. ನಿರ್ದೇಶಕ ಮಂಜುಸ್ವರಾಜ್‌ಗೆ ಈ ಚಿತ್ರ ಚಾಲೆಂಜಿಂಗ್‌ ಆಗಿತ್ತಂತೆ. ಎಲ್ಲರ ಸಹಕಾರ ಮತ್ತು ನಿರ್ಮಾಪಕರ ಪ್ರೋತ್ಸಾಹದಿಂದ “ಶ್ರೀಕಂಠ’ ನನ್ನ ಕಲ್ಪನೆಯಂತೆಯೇ ಮೂಡಿಬಂದಿದೆ. ಇಲ್ಲಿ ಅನೇಕ ಕಲಾವಿದರ ದಂಡು ಇದ್ದು, ಎಲ್ಲರೂ ನನ್ನ ಕಲ್ಪನೆಯ ಪಾತ್ರಗಳಿಗೆ ಜೀವ ತುಂಬಿದ್ದಾರೆಂಬುದು ಮಂಜುಸ್ವರಾಜ್‌ ಮಾತು. ಅಂದಹಾಗೆ, ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸುರೇಶ್‌ಬಾಬು ಕ್ಯಾಮೆರಾ ಹಿಡಿದಿದ್ದಾರೆ.

ಲೀಡರ್‌
“ರೋಸ್‌’ ಚಿತ್ರ ನಿರ್ದೇಶಿಸಿದ್ದ ಸಹನಾಮೂರ್ತಿ ನಿರ್ದೇಶನದ “ಲೀಡರ್‌’ ಕೂಡ ಇತ್ತೀಚೆಗೆ ಮುಹೂರ್ತ ಆಚರಿಸಿಕೊಂಡಿದೆ. ಈ ಚಿತ್ರಕ್ಕೆ ನಾಯಕ ಶಿವರಾಜ್‌ಕುಮಾರ್‌. ಇಲ್ಲೂ ಸಹ ವಿಜಯರಾಘವೇಂದ್ರ ಶಿವರಾಜ್‌ಕುಮಾರ್‌ ಜತೆ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಲೂಸ್‌ಮಾದ ಯೋಗೇಶ್‌ ಕೂಡ ನಟಿಸುತ್ತಿದ್ದಾರೆ ಎಂಬುದು ವಿಶೇಷ. ವಿಜಯರಾಘವೇಂದ್ರ ಅವರಿಗೆ ಶಿವರಾಜ್‌ಕುಮಾರ್‌ ಅವರ ಜತೆ “ಲೀಡರ್‌’ ಮೂರನೇ ಸಿನಿಮಾವಾದರೆ, ಲೂಸ್‌ ಮಾದ ಯೋಗೇಶ್‌ಗೆ ಇದು ಶಿವರಾಜ್‌ಕುಮಾರ್‌ ಜತೆ ಮೊದಲ ಸಿನಿಮಾ. ಇನ್ನು, ಈ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದಾರೆ. 

ಮೊದಲಿನಿಂದಲೂ ಶಿವರಾಜ್‌ಕುಮಾರ್‌ ಸಿನಿಮಾ ನಿರ್ಮಿಸಬೇಕು ಅಂತ ಸಾಕಷ್ಟು ಸಲ ಪ್ರಯತ್ನಿಸಿದ್ದ ತರುಣ್‌ ಶಿವಪ್ಪ ಅವರು, ಒಳ್ಳೆಯ ಕಥೆಯ ಮೂಲಕವೇ ಶಿವರಾಜ್‌ಕುಮಾರ್‌ ಅವರನ್ನು ಭೇಟಿಯಾಗಿ, ಅವರು ಕಥೆಯ ಎಳೆ ಕೇಳಿ ಒಪ್ಪಿಕೊಂಡಿದ್ದರಿಂದಲೇ, “ಲೀಡರ್‌’ ಪೂಜೆ ಕಂಡಿದೆ. ಇನ್ನು, ಈ ಚಿತ್ರಕ್ಕೆ ಪ್ರಣೀತಾ ನಾಯಕಿ. ಪ್ರಣೀತಾ ಕನ್ನಡ ಚಿತ್ರವೊಂದರಲ್ಲಿ ನಟಿಸದೆ ಒಂದು ವರ್ಷವೇ ಆಗಿತ್ತು. ಕಳೆದ ವರ್ಷ ಬಿಡುಗೆಡಯಾದ ಅಜೇಯ್‌ ರಾವ್‌ ಅಭಿನಯದ “ಎ ಸೆಕೆಂಡ್‌ ಹ್ಯಾಂಡ್‌ ಲವರ್‌’ ಚಿತ್ರವೇ ಅವರು ನಟಿಸಿದ ಕೊನೆಯ ಕನ್ನಡ ಚಿತ್ರ. ಆ ನಂತರ ಅವರ ಅಭಿನಯದ ಯಾವೊಂದು ಚಿತ್ರವೂ ಕನ್ನಡದಲ್ಲಿ ಸೆಟ್ಟೇರಿರಲಿಲ್ಲ. ಈಗ ಒಂದು ವರ್ಷದ ನಂತರ ಪ್ರಣೀತಾ “ಲೀಡರ್‌’ ನಾಯಕಿಯಾಗುತ್ತಿದ್ದಾರೆ. ಪ್ರಣೀತಾಗೆ ಇದು ಶಿವರಾಜ್‌ಕುಮಾರ್‌ ಜತೆ ಮೊದಲ ಸಿನಿಮಾ. ಈ ಹಿಂದೆ ಪ್ರಣೀತಾ ಕೂಡ ಶಿವರಾಜ್‌ಕುಮಾರ್‌ ಜತೆ ನಟಿಸಬೇಕು ಎಂಬ ಆಸೆಯನ್ನು ಹೊರಹಾಕಿದ್ದರು. ಕಾಕತಾಳೀಯ ಎಂಬಂತೆಯೇ, “ಲೀಡರ್‌’ ಪ್ರಣೀತಾ ಪಾಲಾಗಿದೆ! ಇವರೊಂದಿಗೆ ಹಿರಿಯ ನಟ ಜಗ್ಗೇಶ್‌ ಅವರ ಮಗ ಗುರು ಕೂಡ ಇಲ್ಲಿ  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಅವರೊಂದಿಗೆ ಹಾರ್ದಿಕ್‌ ಶೆಟ್ಟಿ ಸಹ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು, ಚಿತ್ರಕ್ಕೆ ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಐದು ಹಾಡುಗಳನ್ನು ಕೊಟ್ಟಿದ್ದಾರೆ.  ಈಗಾಗಲೇ ಹಾಡುಗಳು ಪೂರ್ಣಗೊಂಡಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಷ್ಟೇ. ಗುರುಪ್ರಶಾಂತ್‌ ರೈ ಚಿತ್ರಕ್ಕೆ ಛಾಯಾಗ್ರಾಹಕರು.

ಟಗರು
ನಿರ್ದೇಶಕ ಸೂರಿ “ಕಡ್ಡಿಪುಡಿ’ ನಂತರ ಶಿವರಾಜ್‌ಕುಮಾರ್‌ ಅವರಿಗೊಂದು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದರ ಬಗ್ಗೆ ಯಾವ ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಕೊನೆಗೆ ಅದಕ್ಕೆ “ಟಗರು’ ಎಂಬ ನಾಮಕರಣ ಮಾಡಿದ್ದೇ ತಡ, ಆ ಬಗ್ಗೆ ಜೋರು ಸುದ್ದಿಯಾಯ್ತು. “ಟಗರು’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಹೀರೋ ನಿಜ. ಆದರೆ, ಇವರೊಂದಿಗೆ ಮತ್ತೂಬ್ಬ ಹೀರೋ ಧನಂಜಯ್‌ ನಟಿಸುತ್ತಿರುವುದು ವಿಶೇಷ. ಇಲ್ಲಿ ಧನಂಜಯ್‌ ಅವರು ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ವಿಶೇಷ. ಇನ್ನು, ವಸಿಷ್ಠ ಕೂಡ ವಿಲನ್‌ ಆಗಿದ್ದಾರೆ. ಕೆ.ಪಿ.ಶ್ರೀಕಾಂತ್‌ ಈ ಚಿತ್ರದ ನಿರ್ಮಾಪಕರು. “ಟಗರು’ ಚಿತ್ರಕ್ಕೆ ಮಾನ್ವಿತಾ ನಾಯಕಿ. ಸೂರಿ “ಕೆಂಡ ಸಂಪಿಗೆ’ ಮೂಲಕ ಈ ಮಾನ್ವಿತಾ ಎಂಬ ಹುಡುಗಿಯನ್ನು ಕನ್ನಡಕ್ಕೆ ಪರಿಚಯಿಸಿದ್ದರು. ಮಾನ್ವಿತಾಗೆ ಇದು ಸೂರಿ ನಿರ್ದೇಶನದ ಎರಡನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಇನ್ನುಳಿದಂತೆ, “ಟಗರು’ ಚಿತ್ರದಲ್ಲಿ ಇನ್ನೊಬ್ಬ ನಾಯಕಿಯೂ ಇರಲಿದ್ದಾರೆ. ಆದರೆ, ಅವರ್ಯಾರು ಎಂಬುದನ್ನು ಮಾತ್ರ ಸೂರಿ ಇನ್ನೂ ಗುಟ್ಟು ರಟ್ಟು ಮಾಡಿಲ್ಲ. ಈಗಾಗಲೇ ಚಿತ್ರಕ್ಕೆ ಅದ್ಧೂರಿ ಮುಹೂರ್ತ ನಡೆದಿದೆ. ಸೂರಿ ಈ ಬಾರಿಯೂ ಸಹ ಶಿವರಾಜ್‌ಕುಮಾರ್‌ ಕೈಯಲ್ಲಿ ಲಾಂಗ್‌ ಕೊಟ್ಟಿದ್ದಾರೆ. ಲಾಂಗ್‌ ಹಿಡಿದಿರುವ ಶಿವಣ್ಣ ಅವರಿಗೆ “ಟಗರು’ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಂತೂ ಇದೆ.

“ಟಗರು’ – ಮೈ ತುಂಬಾ ಪೊಗರು ಎಂಬ ಟ್ಯಾಗ್‌ಲೈನ್‌ ಇರುವ ಈ ಚಿತ್ರದ ಪೋಸ್ಟರ್ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. “ಟಗರು’ ಒಂದು ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾವಾಗಿದ್ದು, ಸೂರಿ ಹಾಗೂ ಶಿವಣ್ಣ ಕಾಂಬಿನೇಶನ್‌ ಮತ್ತೂಮ್ಮೆ ಮೋಡಿ ಮಾಡುತ್ತದೆ ಎಂಬ ವಿಶ್ವಾಸ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಅವರಿಗಿದೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಅದ್ಧೂರಿಯಾಗಿ ಯಾವ ಚಿತ್ರದ ಮುಹೂರ್ತ ಕೂಡಾ ನಡೆದಂತಿಲ್ಲ. ಅಷ್ಟರ ಮಟ್ಟಿಗೆ ಅದ್ಧೂರಿಯಾಗಿ ಶಿವರಾಜಕುಮಾರ್‌ ಅವರ “ಟಗರು’ ಚಿತ್ರದ ಮುಹೂರ್ತ ಗವಿಪುರಂ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದಿದೆ. ನಟ ರವಿಚಂದ್ರನ್‌ ಚಿತ್ರಕ್ಕೆ ಕ್ಲಾéಪ್‌ ಮಾಡಿ ಶುಭ ಕೋರಿದ್ದಾರೆ.  ಸೂರಿ ಹೇಳುವಂತೆ, ರೌಡಿಸಂ ಹಿನ್ನೆಲೆಯಿಂದ ಸಾಗುವ ಈ ಕಥೆ ತುಂಬಾ ವಿಭಿನ್ನವಾಗಿದ್ದು, ಈ ಸಿನಿಮಾವನ್ನು ಮೊದಲು ಮಾಡಬೇಕೆಂಬ ಕಾರಣಕ್ಕೆ “ಕಾಗೆ ಬಂಗಾರ’ವನ್ನು ಮುಂದಕ್ಕೆ ಹಾಕಿದರಂತೆ. “ಟಗರು’ ಕೂಡಾ ಅಭಿಮಾನಿಗಳಿಗಾಗಿ ಮಾಡುತ್ತಿರುವ ಸಿನಿಮಾವಾಗಿದ್ದು, ಶಿವಣ್ಣನನ್ನು ಅಭಿಮಾನಿಗಳು ಯಾವ ರೀತಿ ನೋಡಲು ಇಷ್ಟಪಡುತ್ತಾರೋ ಆ ಅಂಶಗಳೇ ಸಿನಿಮಾದಲ್ಲಿ ಪ್ರಮುಖವಾಗಿರುತ್ತವಂತೆ. ಮಾಸ್‌ ಫೀಲ್‌ನೊಂದಿಗೆ ಸಾಗುವ ಈ ಸಿನಿಮಾದಲ್ಲಿ ಶಿವಣ್ಣ ಅವರ ಬಾಡಿಲಾಂಗ್ವೇಜ್‌, ಅಟಿಟ್ಯೂಡ್‌ ಎಲ್ಲವೂ ಭಿನ್ನವಾಗಿರುತ್ತದೆ ಎಂಬುದು ಸೂರಿ ಮಾತು. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣವಿದೆ. ಚರಣ್‌ ರಾಜ್‌ ಸಂಗೀತವಿದೆ. ಬೆಂಗಳೂರು, ಬೆಳಗಾಂ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ನಡೆಯಲಿದೆ.

ವಿಲನ್‌
ಸುದೀಪ್‌ ಮತ್ತು ಶಿವರಾಜ್‌ಕುಮಾರ್‌ ಅವರು “ಕಲಿ’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಆ ಚಿತ್ರವನ್ನು ಜೋಗಿ ಪ್ರೇಮ್‌ ನಿರ್ದೇಶಿಸುತ್ತಾರೆ ಎಂಬ ವಿಷಯವನ್ನೂ ಹೇಳಲಾಗಿತ್ತು. ಆದರೆ, ಅದೇಕೋ ಏನೋ ಆ ಚಿತ್ರ ಅರ್ಧಕ್ಕೆ ಸ್ಟಾಪ್‌ ಆಯ್ತು. ಆದರೆ, ಪ್ರೇಮ್‌ ಮಾತ್ರ ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಅವರನ್ನು ಬಿಡದೆ, ಮತ್ತೂಂದು ಚಿತ್ರದಲ್ಲಿ ತೋರಿಸಲು ರೆಡಿಯಾಗುತ್ತಿದ್ದಾರೆ.  ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಮತ್ತೂಂದು ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿರುವ ಚಿತ್ರ “ವಿಲನ್‌’. ಈ ಹಿಂದೆ ಸುದೀಪ್‌ ನಿರ್ದೇಶಿಸಿದ್ದ “ಶಾಂತಿ ನಿವಾಸ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸಿದ್ದರು. ಡಾ.ವಿಷ್ಣುವರ್ಧನ್‌ ಕೂಡ ನಟಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅದೇನೆ ಇರಲಿ, ಪ್ರೇಮ್‌ “ವಿಲನ್‌’ ಮೂಲಕ ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಅವರಿಬ್ಬರನ್ನೂ ಜತೆಗೂಡಿಸಿದ್ದಾರೆ. ಇವರೊಂದಿಗೆ ಇನ್ಯಾರು ಇರುತ್ತಾರೆ ಎಂಬದು ಗೌಪ್ಯ. ಈಗಾಗಲೇ “ವಿಲನ್‌’ ಚಿತ್ರಕ್ಕೆ ಪೂಜೆ ನೆರವೇರಿದೆ. ಚಿತ್ರೀಕರಣ ಯಾವಾಗ ಅನ್ನೋದಕ್ಕೆ ಪ್ರೇಮ್‌ ಬಳಿ ಉತ್ತರವಿಲ್ಲ. ಪ್ರೇಮ್‌ ಮೊದಲ ಸಲ ಸುದೀಪ್‌ ಮತ್ತು ಶಿವರಾಜ್‌ಕುಮಾರ್‌ ಇಬ್ಬರನ್ನೂ ಒಂದೇ ಪರದೆಯ ಮೇಲೆ ಕಾಣುವಂತೆ ಮಾಡುತ್ತಿರುವುದರಿಂದ ಸಹಜವಾಗಿಯೇ ಈ ಇಬ್ಬರು ಸ್ಟಾರ್‌ ನಟರ ಅಭಿಮಾನಿಗಳಿಗೂ ಕುತೂಹಲವಿದೆ. ಇಲ್ಲಿ ವಿಲನ್‌ ಯಾರು, ಹೀರೋ ಯಾರು ಅನ್ನೋದು ಆಮೇಲಿನ ಪ್ರಶ್ನೆ. ಈ ಇಬ್ಬರು ನಟರು ಪ್ರೇಮ್‌ ಹೇಳಿದ ಕಥೆ ಕೇಳಿ ಓಕೆ ಮಾಡಿದ್ದಾರೆಂದ ಮೇಲೆ, ಸ್ಕ್ರಿಪ್ಟ್ನಲ್ಲಿ ಏನೋ ಇದೆ ಎಂದರ್ಥ. ಸದ್ಯಕ್ಕೆ ತಂತ್ರಜ್ಞರು, ಉಳಿದ ಕಲಾವಿದರ ಆಯ್ಕೆ ಬಗ್ಗೆ ಪ್ರೇಮ್‌ ತಲೆಕೆಡಿಸಿಕೊಂಡಿಲ್ಲ. ಪ್ರೇಮ್‌ “ಗಾಂಧಿಗಿರಿ’ ಎಂಬ ಚಿತ್ರ ಮಾಡುತ್ತಿದ್ದಾರೆ. ಆ ಚಿತ್ರ ಮುಗಿದ ಬಳಿಕ “ವಿಲನ್‌’ ಬಗ್ಗೆ ಮತ್ತೆ ತಲೆಕೆಡಿಸಿಕೊಳ್ಳಲಿದ್ದಾರೆ. ಅತ್ತ, ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳೂ ಇವೆ. ಆದರೆ, ಈ “ವಿಲನ್‌’ ಯಾವಾಗ ಬರ್ತಾನೆ ಅನ್ನೊದಕ್ಕೆ ಇನ್ನೂ ಬಹಳ ಸಮಯ ಕಾಯಲೇಬೇಕು ಬಿಡಿ.

ಮುಕುಂದ ಮುರಾರಿ
ಉಪೇಂದ್ರ ಮತ್ತು ಸುದೀಪ್‌ ಒಂದು ಸಿನಿಮಾದಲ್ಲಿ ನಟಿಸುತ್ತಾರೆ ಅಂದಾಗ, ಅದು ದೊಡ್ಡದ್ದಾಗಿ ಸುದ್ದಿಯಾಗಿದ್ದು ಸುಳ್ಳಲ್ಲ. ಅಂತಹ ಸ್ಟಾರ್‌ ನಟರನ್ನು ಒಂದೇ ಪರದೆ ಮೇಲೆ ತೋರಿಸುವಂತಹ ಧೈರ್ಯ ಮಾಡಿದ್ದು ಬೇರಾರೂ ಅಲ್ಲ, ಅದು ನಂದಕಿಶೋರ್‌. ಹೌದು, ನಿರ್ದೇಶಕ ನಂದಕಿಶೋರ್‌ “ಮುಕುಂದ ಮುರಾರಿ’ ಚಿತ್ರದ ಮೂಲಕ ಸುದೀಪ್‌ ಹಾಗೂ ಉಪೇಂದ್ರ ಇವರಿಬ್ಬರನ್ನೂ ನಿರ್ದೇಶಿಸೋಕೆ ಅಣಿಯಾದರು. ನಿರ್ಮಾಪಕ ಎನ್‌.ಕುಮಾರ್‌ ಕೂಡ ನಂದಕಿಶೋರ್‌ ಅವರಿಗೆ ಸಾಥ್‌ ಕೊಟ್ಟು, ಪ್ರೋತ್ಸಾಹಿಸಿದರು. ಈಗ “ಮುಕುಂದ ಮುರಾರಿ’ ಚಿತ್ರ ಮುಗಿದಿದ್ದು, ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅಂದಹಾಗೆ, ಇದು ಹಿಂದಿಯ “ಓ ಮೈ ಗಾಡ್‌’ ಚಿತ್ರದ ರಿಮೇಕ್‌. ಹಿಂದಿಯಲ್ಲಿ ಸೂಪರ್‌ ಹಿಟ್‌ ಆಗಿದ್ದ ಈ ಚಿತ್ರವನ್ನು ನಂದಕಿಶೋರ್‌, ಇಲ್ಲಿ ಕನ್ನಡೀಕರಣಗೊಳಿಸಿದ್ದಾರೆ. ಈಗಾಗಲೇ ಈ ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ತೆರೆಗೆ ಬರಬೇಕಿದೆಯಷ್ಟೇ. ಇದೇ ಮೊದಲ ಸಲ ಉಪೇಂದ್ರ ಮತ್ತು ಸುದೀಪ್‌ ಜತೆಯಾಗಿ ಕ್ಯಾಮೆರಾ ಮುಂದೆ ನಿಂತಿದ್ದಾರೆಂಬುದು ವಿಶೇಷ. ಅಲ್ಲಿಗೆ ಉಪ್ಪಿ, ಕಿಚ್ಚನ ಅಭಿಮಾನಿಗಳಿಗೆ ಈ ಚಿತ್ರ ಡಬ್ಬಲ್‌ ಧಮಾಕ ಅನ್ನೋದು ಗ್ಯಾರಂಟಿ.
ನಂದಕಿಶೋರ್‌ ಈ ಹಿಂದೆ ಸುದೀಪ್‌ ಅಭಿನಯದ “ರನ್ನ’ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ, ಉಪೇಂದ್ರ ಅವರನ್ನು ಇದೇ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಒಟ್ಟೊಟ್ಟಿಗೆ ಇಬ್ಬರು ಸ್ಟಾರ್‌ ನಿರ್ದೇಶಿಸಿರುವ ಖುಷಿ ನಂದಕಿಶೋರ್‌ಗೆ ಇದೆ. ಇದೊಂದು ಪಕ್ಕಾ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಅನ್ನೋದಂತೂ ದಿಟ. ಅದರಲ್ಲೂ ಉಪೇಂದ್ರ, ಸುದೀಪ್‌ ಇದ್ದಾರೆಂದಮೇಲೆ, ಅದು ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾವಿಲ್ಲ.

ಚಕ್ರವರ್ತಿ
ದರ್ಶನ್‌ “ಜಗ್ಗುದಾದಾ’ ಬಳಿಕ ಯಾವ ಚಿತ್ರ ಮಾಡುತ್ತಾರೆ ಅಂತ ಮೊದಲೇ ಎಲ್ಲರಿಗೆ ಗೊತ್ತಿತ್ತು. ದರ್ಶನ್‌ ಚಿತ್ರಗಳಿಗೆ ಹೆಚ್ಚು ಸಂಭಾಷಣೆ ಬರೆಯುತ್ತಿದ್ದ ಚಿಂತನ್‌ ಅವರೊಂದು ಕಥೆ ಹೇಳಿದ್ದನ್ನು ಒಪ್ಪಿಕೊಂಡಿದ್ದ ದರ್ಶನ್‌, ಆ ಚಿತ್ರ ಮಾಡೋಕೆ ಮುಂದಾದರು. ಅದಕ್ಕೆ ಚಿಂತನ್‌ “ಚಕ್ರವರ್ತಿ’ ಅಂತ ಹೆಸರಿಟ್ಟರು. ಈ ಚಿತ್ರ ಮೊದಲು ಬೇರೆ ಯಾರೋ ನಿರ್ಮಿಸಬೇಕಿತ್ತು. ಆದರೆ, ಅದು ನಿರ್ಮಾಪಕ ಅಣಜಿ ನಾಗರಾಜ್‌ ಅವರ ಮಡಿಲಿಗೆ ಬಂತು. ಅಣಜಿ ನಾಗರಾಜ್‌ಗೆ “ಚಕ್ರವರ್ತಿ’ ಸಿಕ್ಕಿದ್ದೇ ತಡ, ತಡಮಾಡದೆಯೇ ಚಿತ್ರೀಕರಣಕ್ಕೆ ಅಣಿಯಾದರು. ಸದ್ಯ ಈ ಚಿತ್ರ ಶೇ.50 ರಷ್ಟು ಮುಗಿದಿದೆ. ಇನ್ನೂ ಶೇ.50 ರಷ್ಟು ಬಾಕಿ ಇದೆ. ಸದ್ಯಕ್ಕೆ ಸಿಂಗಾಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ, ಈ ಚಿತ್ರದಲ್ಲಿ ದರ್ಶನ್‌ ಜತೆ ನಟ ಆದಿತ್ಯ ನಟಿಸಿದ್ದಾರೆ. ಈ ಹಿಂದೆ ಕೂಡ “ಸ್ನೇಹನಾ ಪ್ರೀತಿನಾ’ ಚಿತ್ರದಲ್ಲಿ ದರ್ಶನ್‌ ಜತೆ ಆದಿತ್ಯ ನಟಿಸಿದ್ದರು. ದರ್ಶನ್‌ ಮತ್ತು ಆದಿತ್ಯ ಅಭಿನಯದ ಈ ಚಿತ್ರಕ್ಕೂ ಅಣಜಿನಾಗರಾಜ್‌ ನಿರ್ಮಾಪಕರಾಗಿದ್ದರು. ಬಹಳ ಗ್ಯಾಪ್‌ ಬಳಿಕ ದರ್ಶನ್‌ ಅವರೊಂದಿಗೆ ಆದಿತ್ಯ ಇಲ್ಲಿ ನಟಿಸುತ್ತಿದ್ದಾರೆ. ಇನ್ನು, ಇವರೊಂದಿಗೆ ಸೃಜನ್‌ ಕೂಡ ನಟಿಸುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ದಿನಕರ್‌ ತೂಗುದೀಪ ಕೂಡ ಮೊದಲ ಸಲ ವಿಲನ್‌ ಆಗಿ ದರ್ಶನ್‌ ಜತೆ ನಟಿಸುತ್ತಿದ್ದಾರೆ.

ಮಫ್ತಿ
ಶ್ರೀಮುರಳಿ ಅವರು “ಉಗ್ರಂ’ ಬಳಿಕ ಒಂದೊಳ್ಳೆಯ ಮೈಲೇಜ್‌ ಪಡೆದರು ಎಂಬುದನ್ನಿಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಅದಾದ ಬಳಿಕ ಅವರು “ರಥಾವರ’ ಎಂಬ ಚಿತ್ರ ಮಾಡಿ ಒಂದಷ್ಟು ಸುದ್ದಿಯಾಗಿದ್ದೂ ಉಂಟು. ಆಮೇಲೆ ಯಾವ ಚಿತ್ರ ಮಾಡುತ್ತಾರೆ ಎಂಬ ಬಗ್ಗೆ ಎಲ್ಲೂ ಸುದ್ದಿ ಬಿಟ್ಟುಕೊಟ್ಟಿರಲಿಲ್ಲ. ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ದಿನ ಬಿಟ್ಟು ದಿನ ಒಂದೊಂದು ಸ್ಟೇಟಸ್‌ ಹಾಕುತ್ತಲೇ ಇದ್ದರು. ಒಂದು ಕಥೆ ಕೇಳಿದೆ, ಅದು ಫೈನಲ್‌ ಆಗಿದೆ, ಹೊಸ ಟೀಮ್‌… ಹೀಗೆ ಸ್ಟೇಟಸ್‌ ಹಾಕುತ್ತಿದ್ದವರು. ಒಂದು ದಿನ ಆ ಚಿತ್ರಕ್ಕೆ “ಮಫ್ತಿ’ ಎಂಬ ಶೀರ್ಷಿಕೆ ಇಡಲಾಗಿದೆ ಅಂತಾನೂ ಸುದ್ದಿ ಹರಿಬಿಟ್ಟರು. ಆ “ಮಫ್ತಿ’ ಚಿತ್ರದಲ್ಲಿ ಶ್ರೀಮುರಳಿ ಅವರೊಂದಿಗೆ ಶಿವರಾಜ್‌ಕುಮಾರ್‌ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಸದ್ಯಕ್ಕೆ ಈ ಚಿತ್ರ ಮಾಡುತ್ತಿರುವ ತಂಡ ಹೊಸಬರದ್ದು. ಹಾಗಾಗಿ, ಈ ಸಿನಿಮಾ ಎಲ್ಲಿಗೆ ಬಂದಿದೆ, ಏನೇನು ನಡೆಯುತ್ತಿದೆ. ಯಾರೆಲ್ಲಾ ಇದ್ದಾರೆ ಎಂಬುದು ಗೌಪ್ಯ. ಶಿವರಾಜ್‌ಕುಮಾರ್‌ ಈ ಚಿತ್ರದಲ್ಲಿ ಇದ್ದಾರೆ ಅನ್ನೋದೇ ದೊಡ್ಡ ಸುದ್ದಿ. ಅದರ ಹೊರತಾಗಿ ಇನ್ಯಾವ ಸುದ್ದಿಯೂ ಹೊರಬಿದ್ದಿಲ್ಲ. ಎಲ್ಲಾ ಮಾಹಿತಿ ಸಿಗಬೇಕಾದರೆ, ಇನ್ನಷ್ಟು ದಿನ ಕಳೆಯಬೇಕು.

ಜಾನ್‌ ಜಾನಿ ಜನಾರ್ದನ್‌
 ನಿರ್ದೇಶಕ ಗುರುದೇಶಪಾಂಡೆ ಅವರ “ಜಾನ್‌ ಜಾನಿ ಜನಾರ್ದನ್‌’ ಚಿತ್ರದಲ್ಲಿ ಅಜೇಯ್‌ರಾವ್‌, ಯೋಗಿ, ಮದರಂಗಿ ಕೃಷ್ಣ’ ಹೀರೋಗಳು. ಈ ಮೂವರು ನಟರು ಮೊದಲ ಸಲ ಒಟ್ಟಿಗೆ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರ ಹಿನ್ನೆಲೆ ಸಂಗೀತದಲ್ಲಿದ್ದು, ನವೆಂಬರ್‌ನ ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್‌ ಆಗುವ ಸಾಧ್ಯತೆ ಇದೆ. ಇದು ಮಲಯಾಳಂನ “ಅಮರ್‌ ಅಕºರ್‌ ಆಂಟೋನಿ’ ಚಿತ್ರದ ರಿಮೇಕ್‌.  ಎಂ.ಆರ್‌. ಬ್ಯಾನರ್‌ನಲ್ಲಿ ಚಿತ್ರ ತಯಾರಾಗುತ್ತಿದೆ. ಪದ್ಮನಾಭ್‌, ಶಶಿಕಿರಣ್‌ ಹಾಗು ಗಿರೀಶ್‌ ಚಿತ್ರದ ನಿರ್ಮಾಪಕರು. ಈ ಮೂವರಿಗೂ ಇದು ಮೊದಲ ನಿರ್ಮಾಣದ ಚಿತ್ರ. ಯೋಗಿ, ಕೃಷ್ಣ, ಆಜೇಯ್‌ ಚಿತ್ರದ ಹೀರೋಗಳು. ಈ ಮೂವರಿಗೂ ಕಾಮ್ನಾ ರಣಾವತ್‌ ನಾಯಕಿ. ಮಾಲಾಶ್ರೀ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ. “ಫ‌ಸ್ಟ್‌ರ್‍ಯಾಂಕ್‌ ರಾಜು’ ಖ್ಯಾತಿಯ ಗುರುನಂದನ್‌ ಕೂಡ ಇಲ್ಲಿ ಅತಿಥಿ.  ಮದರಂಗಿ ಕೃಷ್ಣ. ಜಾನ್‌ ಪಾತ್ರ ಮಾಡುತ್ತಿದ್ದಾರೆ. ಯೋಗಿ, ಜಾನಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅಜೇಯ್‌ ಇಲ್ಲಿ ಜನಾರ್ಧನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಸಂತೋಷ್‌ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದಾರೆ. ಮೋಹನ್‌ ಬಿ.ಕೆರೆ ಕಲಾನಿರ್ದೇಶಕರು.

ಚೌಕ
ತರುಣ್‌ ಸುಧೀರ್‌ ಚೊಚ್ಚಲ ನಿರ್ದೇಶನದ “ಚೌಕ’ ಚಿತ್ರದಲ್ಲಿ ನಾಲ್ವರು ಹೀರೋಗಳು. ಪ್ರೇಮ್‌, ವಿಜಯರಾಘವೇಂದ್ರ, ದಿಗಂತ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಇವರೆಲ್ಲರೂ ಒಟ್ಟಿಗೆ ಸೇರಿ ನಟಿಸುತ್ತಿರುವ ಮೊದಲ ಚಿತ್ರ ಅನ್ನೋದು ವಿಶೇಷ. ಈಗಾಗಲೇ ಚಿತ್ರ ಡಬ್ಬಿಂಗ್‌ ನಡೆಯುತ್ತಿದ್ದು, ರಿಲೀಸ್‌ಗೆ ಸಿದ್ಧಗೊಂಡಿದೆ. ಹಿರಿಯ ನಟ, ನಿರ್ಮಾಪಕ ಹಾಗು ನಿರ್ದೇಶಕ ದ್ವಾರಕೀಶ್‌ ಅವರ ಬ್ಯಾನರ್‌ನಲ್ಲಿ 50 ನೇ ಚಿತ್ರವಾಗಿ “ಚೌಕ’ ತಯಾರಾಗಿದೆ. ತರುಣ್‌ ಸುಧೀರ್‌ ಸುಮ್ಮನೆ “ಚೌಕ’ ಚಿತ್ರ ಮಾಡಿ, ಏನೋ ಕಥೆಯೊಂದನ್ನು ಹೆಣೆದು, ಅದನ್ನು ಸುತ್ತುತ್ತಿಲ್ಲ. ಇದೊಂದು ವಿಶೇಷ ಚಿತ್ರವಾಗಿ ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ಚಿತ್ರದ ತಂತ್ರಜ್ಞರ ವಿಷಯದಲ್ಲೂ ತುಂಬಾ ಕಾಳಜಿ ವಹಿಸಿದ್ದಾರಂತೆ. ಚಿತ್ರದಲ್ಲಿ  ಗುರುಕಿರಣ್‌, ಹರಿಕೃಷ್ಣ, ಅರ್ಜುನ್‌ಜನ್ಯ, ಶ್ರೀಧರ್‌ಸಂಭ್ರಮ,ಅನೂಪ್‌ಸೀಳಿನ್‌ ಐವರು ಸಂಗೀತ ನಿರ್ದೇಶಕರು ತಲಾ ಒಂದು ಗೀತಗಳಿಗೆ ರಾಗ ಸಂಯೋಜನೆ ಮಾಡಿ¨ªಾರೆ. ಇನ್ನು, ಐವರು ಪ್ರಸಿದ್ದ ಛಾಯಾಗ್ರಾಹಕರಾದ ಸತ್ಯ ಹೆಗಡೆ, “ಮುಂಗಾರು ಮಳೆ’ ಕೃಷ್ಣ, ಸಂತೋಷ್‌ ರೈ ಪಾತಾಜೆ, ಸುಧಾಕರ್‌ ರಾಜ್‌ ಮತ್ತು ಶೇಖರ್‌ ಚಂದ್ರು ಈ ಐವರು “ಚೌಕ’ ಚಿತ್ರದ ಒಂದೊಂದು ಟ್ರಾಕ್‌ ಸೆರೆ ಹಿಡಿದಿದ್ದಾರೆ. ಐವರು ಕಲಾ ನಿರ್ದೇಶಕರುಗಳು ಮತ್ತು ಐವರು ಸಂಭಾಷಣೆಗಾರರು ಇಲ್ಲಿ ಕೆಲಸ ಮಾಡಿ¨ªಾರಂತೆ. ಇನ್ನೊಂದು ವಿಶೇಷವೆಂದರೆ, ಇದೇ ಮೊದಲ ಸಲ ಬ್ಯಾಗ್‌ಪೈಪರ್‌ ಸೋಡ ಕನ್ನಡ ಚಿತ್ರಕ್ಕೆ ಹಣ ತೊಡಗಿಸಿದೆ. ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ದ್ವಾರಕೀಶ್‌ ಪುತ್ರ ಯೋಗೀಶ್‌ ವಹಿಸಿಕೊಂಡಿ¨ªಾರೆ. ಐಂದ್ರಿತಾರೇ, ಪ್ರಿಯಾಮಣಿ, ದೀಪಾಸನ್ನಿಧಿ, ಭಾವನಾ ಇತರರು ಇದ್ದಾರೆ.

ಹ್ಯಾಪಿ ನ್ಯೂ ಇಯರ್‌
ನಾಗಾಭರಣ ಅವರ ಮಗನ ಮೊದಲ ಚಿತ್ರ “ಹ್ಯಾಪಿ ನ್ಯೂ ಇಯರ್‌’ ಕೂಡ ಮಲ್ಟಿಸ್ಟಾರರ್‌ ಸಿನಿಮಾ. ಈ ಚಿತ್ರದಲ್ಲಿ ದಿಗಂತ್‌, ವಿಜಯರಾಘವೇಂದ್ರ ಮತ್ತು ಧನಂಜಯ್‌ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಮುಹೂರ್ತ ಆಚರಿಸಿಕೊಂಡಿದೆ. ಸದ್ಯಕ್ಕೆ ಸ್ಟಾರ್‌ ನಟರೆಲ್ಲರೂ ಒಂದೇ ಚಿತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಒಬ್ಬಟ್ಟು ರುಚಿ ಕಾಣಿಸುವ ಉತ್ಸಾಹದಲ್ಲಿದ್ದಾರೆ. ಪುನೀತ್‌ರಾಜ್‌ಕುಮಾರ್‌ ಮತ್ತು ಶಿವರಾಜ್‌ಕುಮಾರ್‌ ಅವರೂ ಕೂಡ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇನ್ನೂ ಜೀವಂತವಾಗಿದೆ. ಇಂದಲ್ಲ, ನಾಳೆ ಈ ಇಬ್ಬರು ಸ್ಟಾರ್‌ ಸಿನಿಮಾ ಬಂದರೂ ಅಚ್ಚರಿಯಿಲ್ಲ. ಗಣೇಶ್‌, ದುನಿಯಾ ವಿಜಯ್‌ ಕೂಡ ಮುಂದೊಂದು ದಿನ ಇತರೆ ಸ್ಟಾರ್‌ ನಟರ ಜತೆ ನಟಿಸುವ ದಿನಗಳು ದೂರವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next