ಮಲ್ಟಿಪ್ಲೆಕ್ಸ್‌ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚು ಶೋಗಳನ್ನು ಕೊಡಲ್ಲ, ಕೊಟ್ಟರೂ ಯಾವುದೋ ಒಂದು ಸಮಯದ ಶೋ ಕೊಡುತ್ತವೆ ಎಂಬ ದೂರುಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಸ್ಟಾರ್ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸಮಸ್ಯೆಯಾಗಲ್ಲ ಎಂಬ ಮಾತಿದೆ. ಆದರೆ, ಕನ್ನಡ ಚಿತ್ರರಂಗದ ಬಹುತಾರಾಗಣದ, ಅದ್ಧೂರಿ ಬಜೆಟ್‌ನ “ಕುರುಕ್ಷೇತ್ರ’ ಚಿತ್ರಕ್ಕೂ ಹೆಚ್ಚಿನ ಶೋ ಕೊಡಲು ಮಲ್ಟಿಪ್ಲೆಕ್ಸ್‌ಗಳು ಹಿಂದೇಟು ಹಾಕುತ್ತಿವೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು.
ಈ ಮಾತನ್ನು ಬೇರಾರು ಹೇಳುತ್ತಿಲ್ಲ, ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ವಿತರಕ ರಾಕ್‌ಲೈನ್ ವೆಂಕಟೇಶ್ ಹೇಳುತ್ತಿದ್ದಾರೆ. “ಕುರುಕ್ಷೇತ್ರ’ ಚಿತ್ರದ ವಿತರಣೆಯನ್ನು ರಾಕ್‌ಲೈನ್ ವೆಂಕಟೇಶ್ ಪಡೆದಿದ್ದಾರೆ. ಸಿನಿಮಾ ನೋಡಿದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕೆಲವು ಮಲ್ಟಿಪ್ಲೆಕ್ಸ್‌ಗಳು “ಕುರುಕ್ಷೇತ್ರ’ ಚಿತ್ರಕ್ಕೆ ಶೋ ಹೆಚ್ಚಿಸಲು ಹಿಂದೇಟು ಹಾಕುತ್ತಿವೆಯಂತೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ, “ಕುರುಕ್ಷೇತ್ರ’ ಚಿತ್ರದ ವಿತರಕ ರಾಕ್‌ಲೈನ್ ವೆಂಕಟೇಶ್, “ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ, ಫ್ಯಾಮಿಲಿ ಆಡಿಯನ್ಸ್ ಹೆಚ್ಚೆಚ್ಚು ಬರುತ್ತಿದ್ದಾರೆ.
ಆದರೆ, “ಕುರುಕ್ಷೇತ್ರ’ ಸಿನಿಮಾಕ್ಕೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋ ಹೆಚ್ಚಿಸಿ ಎಂದು ಕೇಳುವ ಪರಿಸ್ಥಿತಿ ಬಂದಿದೆ. 50 ಶೋ ಸಾಮರ್ಥ್ಯದ ಒರಾಯನ್ ಮಾಲ್‌ನಲ್ಲಿ “ಕುರುಕ್ಷೇತ್ರ’ ಚಿತ್ರಕ್ಕೆ ಕೇವಲ 11 ಶೋ ಕೊಟ್ಟಿದ್ದಾರೆ. ಅದರಲ್ಲಿ ಒಂದು ಬೆಳಗ್ಗೆ 7.45 ಶೊ, ಇನ್ನೊಂದು 8.15 ಶೋ. ಹಾಗಾಗಿ, ಅವರನ್ನು ನಾನು, ಇಂತಹ ಸಿನಿಮಾಗಳಿಗೆ ಶೋ ಕೊಡದೇ ಇದ್ದರೆ ಇನ್ಯಾವ ಸಿನಿಮಾಕ್ಕೆ ಕೊಡ್ತೀರಿ. ಸಿನಿಮಾಪ್ರೇಮಿಗಳು, ಅಭಿಮಾನಿಗಳು ಗಲಾಟೆ ಮಾಡುವ ಮುಂಚೆ ಇದನ್ನು ಸರಿಪಡಿಸಿ ಎಂದು ಅವರನ್ನು ಮನವಿ ಮಾಡಿದ್ದೇನೆ’ ಎನ್ನುವುದು ರಾಕ್‌ಲೈನ್ ಮಾತು.
ಆಯಾಯ ಭಾಷೆಗೆ ತಕ್ಕಂತೆ ಸಿನಿಮಾ ಅವಧಿ: ಈಗಾಗಲೇ “ಕುರುಕ್ಷೇತ್ರ’ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ವರ್ಶನ್‌ಗೆ ಹೋಲಿಸಿದರೆ, ಅಲ್ಲಿನ ಸಿನಿಮಾ ಅವಧಿ ಕಡಿಮೆ ಇದೆ. 25 ನಿಮಿಷ ಟ್ರಿಮ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಮಾತನಾಡುವ ರಾಕ್‌ಲೈನ್ ವೆಂಕಟೇಶ್, “ಆಯಾಯ ಭಾಷೆಗೆ ತಕ್ಕಂತೆ ಸಿನಮಾದ ಅವಧಿ ನಿಗದಿ ಮಾಡಿದ್ದೇವೆ. ಇದು ಹೊಸದಾಗಿ ಇವತ್ತು ಮಾಡಿದ್ದಲ್ಲ, ಸಿನಿಮಾ ಮಾಡುವಾಗಲೇ ನಿರ್ಧಾರವಾಗಿತ್ತು. ಬಿಡುಗಡೆಯಾದ ಮೇಲೆ ಟ್ರಿಮ್ ಮಾಡಲು ಹೋಗಿಲ್ಲ’ ಎನ್ನುತ್ತಾರೆ.
ಹೋಲಿಕೆ ಬೇಡ: ತೆಲುಗಿನಲ್ಲೂ “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್ ಭರ್ಜರಿಯಾಗಿದೆ. ತೆಲುಗಿನಲ್ಲಿ “ಕೆಜಿಎಫ್’ ಚಿತ್ರದ ಕಲೆಕ್ಷನ್ ರೆಕಾರ್ಡ್ ಅನ್ನು “ಕುರುಕ್ಷೇತ್ರ’ ಮುರಿದು ಮುನ್ನುಗ್ಗುತ್ತಿದೆ ಎಂಬ ಸುದ್ದಿ ತೆಲುಗಿನ ಕೆಲವು ವೆಬ್‌ಸೈಟ್, ವಾಹಿನಿಗಳಲ್ಲಿ ಓಡಾಡುತ್ತಿದೆ. ಈ ಬಗ್ಗೆಯೂ ಮಾತನಾಡುವ ರಾಕ್‌ಲೈನ್ ವೆಂಕಟೇಶ್, “ಒಂದು ಸಿನಿಮಾವನ್ನು ಮತ್ತೂಂದು ಸಿನಿಮಾಕ್ಕೆ ಹೋಲಿಕೆ ಮಾಡೋದು ಸರಿಯಲ್ಲ. ಅದನ್ನು ನಾವು ಮೊದಲು ಬಿಡಬೇಕು.
ಆಯಾಯ ಕಾಲಕ್ಕೆ ಆ ಸಿನಿಮಾ ದೊಡ್ಡದಾಗಿರುತ್ತದೆ. ಅದರ ನಂತರ ಮತ್ತೂಂದು ಸಿನಿಮಾ ದೊಡ್ಡದಾಗಿ ಹೊರಹೊಮ್ಮಬಹುದು. ಈ ಹಿಂದಿನ ಸಿನಿಮಾದ ರೆಕಾರ್ಡ್ ಅನ್ನು ಯಾವುದೇ ಒಂದು ಸಿನಿಮಾ ಬ್ರೇಕ್ ಮಾಡಬಹುದು, ಚಿತ್ರರಂಗದಲ್ಲಿ ಅದು ಸಹಜ ಮತ್ತು ಆ ತರಹದ ಆಗುತ್ತಿರಬೇಕು. ಆಗಲೇ ಯಾವುದೇ ಚಿತ್ರರಂಗವಾದರೂ ಬೆಳೆಯೋದು. ಹೋಲಿಕೆ ಮಾಡೋದನ್ನು ಬಿಟ್ಟು ಸಿನಿಮಾವನ್ನು ಎಂಜಾಯ್ ಮಾಡಬೇಕು’ ಎನ್ನುತ್ತಾರೆ.