Advertisement

ಭವಿಷ್ಯದಲ್ಲಿ ಸಿರಿಧಾನ್ಯಕ್ಕೆ ಬಹು ಬೇಡಿಕೆ

01:16 PM Jan 26, 2020 | Suhan S |

ಬೆಳಗಾವಿ: ವಿಷಪೂರಿತ ಆಹಾರದ ಬಗ್ಗೆ ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದಲ್ಲಿ ತಿರಸ್ಕಾರ ಭಾವನೆ ಮೂಡುತ್ತಿದ್ದು, ಭವಿಷ್ಯದಲ್ಲಿ ಸಾವಯವ-ಸಿರಿಧಾನ್ಯ ಉತ್ಪನ್ನಗಳಿಗೆ ಬಹು ಬೇಡಿಕೆ ಹಾಗೂ ಉತ್ತಮ ಮಾರುಕಟ್ಟೆ ಲಭಿಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತೋಟಗಾರಿಕೆ, ಕೃಷಿಕ ಸಮಾಜ, ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ನಗರದ ಎಸ್‌.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಸಾವಯವ-ಸಿರಿಧಾನ್ಯ ಮೇಳ ಹಾಗೂ 62ನೇ ಫಲಪುಷ್ಪ ಪ್ರದರ್ಶನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸಿರಿಧಾನ್ಯಗಳಿಗೆ ಹೆಚ್ಚು ಒತ್ತು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣದಿಂದ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯ.ಈ ಹಿನ್ನೆಲೆಯಲ್ಲಿ ಸಾವಯವ-ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತಿದೆ. ಜನರಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗುವಂತೆ ಮಾಡಬೇಕು ಎಂದರು. ರೈತ ಸಮುದಾಯ ಸಿರಿ ಸಂಪತ್ತಿಗೆ ಬೆನ್ನತ್ತದೇ ತಮ್ಮನ್ನೇ ಅವಲಂಬಿಸಿರುವ ಸಮಾಜದ ಆರೋಗ್ಯದ ದೃಷ್ಟಿಯಿಂದ ಸಾವಯವ-ಸಿರಿಧಾನ್ಯಗಳಿಗೆ ಆದ್ಯತೆ ನೀಡಬೇಕು. ಆರೋಗ್ಯದ ಮೇಲೆ ಪರಿಣಾಮ ಬೀರುವ ರಾಸಾಯನಿಕ ಬಳಕೆ ನಿಲ್ಲಿಸಬೇಕು ಎಂದು ಹೇಳಿದರು.

ಎಷ್ಟೇ ದುಡ್ಡು, ಸಿರಿಸಂಪತ್ತು ಇದ್ದರೂ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ. ಬೆಳೆಗೆ ವಿಷವುಣಿಸಿ ಜನರಿಗೆ ಅದನ್ನು ನೀಡುತ್ತಿರುವುದು ದೊಡ್ಡ ಪಾಪದ ಕೆಲಸವಾಗಿದೆ. ಅನ್ನದಾತ ಎನ್ನುವ ಪದಕ್ಕೆ ಅಪಮಾನ ಆಗದಂತೆ ನಾವು ರೈತರು ನಡೆದುಕೊಳ್ಳಬೇಕಿದೆ. ಉತ್ತಮ ಬೆಳೆಯನ್ನು ಸಮಾಜಕ್ಕೆ ನೀಡುವುದು ನಮ್ಮ ಮೊದಲ ಕರ್ತವ್ಯವಾಗಬೇಕು ಎಂದು ಹೇಳಿದರು.

ಹೆಚ್ಚುತ್ತಿರುವ ರಕ್ತದೊತ್ತಡ: ಪಿಜ್ಜಾ -ಬರ್ಗರ್‌ ಬಂದ ನಂತರ ಅತೀ ಹೆಚ್ಚು ರಾಸಾಯನಿಕ ಬಳಸಿ ಹೈಬ್ರಿಡ್‌ ಬೆಳೆ ಹೆಚ್ಚಾಗಿದೆ. ರಸಗೊಬ್ಬರ, ರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸಿ ಬೆಳೆದ ಬೆಳೆಯಿಂದ ಅತ್ಯಧಿಕ ಪ್ರಮಾಣದಲ್ಲಿ ಜನರಿಗೆ ರಕ್ತದೊತ್ತಡ, ಶೇ.17 ರಷ್ಟು ಜನರಿಗೆ ಹೃದಯಸಂಬಂಧಿ ತೊಂದರೆ, ವರ್ಷಕ್ಕೆ ಕೋಟಿ ಜನರು ಕ್ಯಾನ್ಸರ್‌ ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ನಮ್ಮ ದುರಾಸೆಯೇ ಕಾರಣವಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

Advertisement

ಕೃಷಿ ಸಾಧಕರನ್ನು ಗುರುತಿಸಿ ಅವರನ್ನು ಸರ್ಕಾರ ಸನ್ಮಾನಿಸುತ್ತಿದೆ. ಸಾವಯವ-ಸಿರಿಧಾನ್ಯಗಳಿಂದ ಉತ್ತಮ ಆರೋಗ್ಯ ರಕ್ಷಣೆ ಸಾಧ್ಯವಿದೆ. ಆಹಾರ ಪದ್ಧತಿಯ ಬದಲಾವಣೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ ಎಂದರು.

ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆಯುವುದರ ಜತೆಗೆ ಅವುಗಳ ಸಂಗ್ರಹಣೆ, ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ಸರ್ಕಾರ ಹತ್ತು ಲಕ್ಷ ರೂಪಾಯಿ ಧನ ಸಹಾಯನೀಡುತ್ತಿದ್ದು, ರೈತ ಸಮುದಾಯ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ರೈಲು ಹಾಗೂ ವಿಮಾನ ಸೇರಿದಂತೆ ಅತ್ಯುತ್ತಮ ಸಾರಿಗೆ ಸಂಪರ್ಕ ಹೊಂದಿರುವ ಬೆಳಗಾವಿ ಜಿಲ್ಲೆಗೆ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶಗಳಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆ ಉಪನಿರ್ದೇಶಕ ಡಾ.ಎಚ್‌.ಡಿ.ಕೋಳೇಕರ್‌, ಸಾವಯವ-ಸಿರಿಧಾನ್ಯಗಳ ಮಾರಾಟಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವುಗಳನ್ನು ಮಾರುಕಟ್ಟೆಯ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ವಿಶೇಷ ಆ್ಯಪ್‌ ಬಿಡುಗಡೆ: ಇದೇ ಸಂದರ್ಭದಲ್ಲಿ 42 ಕೋಟಿ ಅನುದಾನದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಜಲಾನಯನ ಯೋಜನೆ ಮೂಲಕ ಬರ ತಡೆಗಟ್ಟುವ ಯೋಜನೆಗೆ ಚಾಲನೆ ನೀಡಲಾಯಿತು. ಫಲಶ್ರೇಷ್ಠರು ಕಿರುಹೊತ್ತಿಗೆ ಹಾಗೂ ತೋಟಗಾರಿಕೆ ಬೆಳೆಗಾರರಿಗೆ ಎಸ್‌.ಎಂ.ಎಸ್‌ ಮೂಲಕ ಮಾಹಿತಿ ನೀಡುವ ವಿಶೇಷ ಆ್ಯಪ್‌ ಅನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಡುಗಡೆಗೊಳಿಸಿದರು.

ನಂತರ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವಿ., ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಎಫ್‌.ದೊಡ್ಡಗೌಡರ, ಸಾವಯವ ಕೃಷಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ತುಬಚಿ, ತೋಟಗಾರಿಕೆ ಸಂಘದ ಅಧ್ಯಕ್ಷ ಪ್ರಕಾಶ್‌ ಪಾಟೀಲ, ಕೃಷಿ ಇಲಾಖೆಯ ಅಪರ ನಿರ್ದೇಶಕ ಡಾ.ವಿ.ಜೆ.ಪಾಟೀಲ, ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next