Advertisement

20 ನುಸುಳು ಮಾರ್ಗ ಪತ್ತೆ

12:50 AM Oct 02, 2019 | Team Udayavani |

ಹೊಸದಿಲ್ಲಿ/ಜಮ್ಮು: ಸಶಸ್ತ್ರ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸಿ ಭಾರತದ ಮಣ್ಣಲ್ಲಿ ನೆತ್ತರ ಹೊಳೆ ಹರಿಸಲು ಪಾಕಿಸ್ತಾನ ಹವಣಿಸುತ್ತಿರುವ ನಡುವೆಯೇ ಅಂತಾರಾಷ್ಟ್ರೀಯ ಗಡಿಯಲ್ಲಿ ಬರೋಬ್ಬರಿ 20 ನುಸುಳು ಮಾರ್ಗಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಉಗ್ರರು ಒಳನುಸುಳಲು ಇದೇ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವ ಕಾರಣ, ಈ ಎಲ್ಲ ಮಾರ್ಗಗಳಲ್ಲೂ ಬಹುಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Advertisement

ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಈಗಾಗಲೇ ಸುಮಾರು 60 ಸಶಸ್ತ್ರ ಉಗ್ರರು ಭಾರತದೊಳಕ್ಕೆ ನುಸುಳಿದ್ದಾರೆ ಎಂದು ಹೇಳಲಾಗಿದ್ದು, ಇನ್ನೂ 20ರಷ್ಟು ನುಸುಳುಕೋರರು ದಕ್ಷಿಣ ಪೀರ್‌ ಪಾಂಚಾಲ್‌ ಪ್ರದೇಶದಲ್ಲಿ ನುಸುಳಲು ಸಿದ್ಧವಾಗಿದ್ದಾರೆ. ಇದರ ನಡುವೆಯೇ 20 ನುಸುಳು ಮಾರ್ಗಗಳು ಪತ್ತೆಯಾಗಿದ್ದು, ಉಗ್ರರು ದೇಶ ಪ್ರವೇಶಿಸದಂತೆ ತಡೆಯಲು ಈ ಎಲ್ಲ ಮಾರ್ಗಗಳಲ್ಲೂ ಭದ್ರತೆ ಬಿಗಿಗೊಳಿಸಲಾಗಿದೆ.

ಎಲ್ಲೆಲ್ಲಿದೆ ಈ ಮಾರ್ಗಗಳು?: ಕಥುವಾ, ಸಾಂಬಾ, ಜಮ್ಮು, ರಜೌರಿ, ಪೂಂಛ…, ಬಾರಾಮುಲ್ಲಾ, ಬಂಡಿಪೋರಾ ಮತ್ತು ಕುಪ್ವಾರಾ ಜಿಲ್ಲೆಗಳ ಎಲ್‌ಒಸಿ ಹಾಗೂ ಅಂತಾರಾಷ್ಟ್ರೀಯ ಗಡಿಗಳಲ್ಲಿ ಈ ನುಸುಳು ಮಾರ್ಗಗಳಿವೆ ಎಂದು ಮೂಲಗಳು ಹೇಳಿವೆ.

2ರಿಂದ 3 ಹಂತದ ಭದ್ರತೆ: ನುಸುಳು ನಿಗ್ರಹ ವ್ಯವಸ್ಥೆ ಸೇರಿದಂತೆ ಎರಡರಿಂದ ಮೂರು ಹಂತದ ಭದ್ರತೆಯನ್ನು ಈ ಪ್ರದೇಶಗಳಲ್ಲಿ ಏರ್ಪಡಿಸಲಾಗಿದೆ. ಸೇನೆ ಮತ್ತು ಬಿಎಸ್‌ಎಫ್ನ ಭದ್ರತೆಯಲ್ಲದೆ, ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯಾದ್ಯಂತ ಗ್ರಾಮ ರಕ್ಷಣಾ ಸಮಿತಿಗಳಿಗೆ ಅಲರ್ಟ್‌ ಆಗಿರುವಂತೆ ಸೂಚಿಸಲಾಗಿದೆ.

ಮಧ್ಯಸ್ಥಿಕೆಯ ಆವಶ್ಯಕತೆ ಇಲ್ಲ
ವಾಷಿಂಗ್ಟನ್‌: ಕಾಶ್ಮೀರ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಮೂರನೇ ರಾಷ್ಟ್ರದ ಮಧ್ಯಪ್ರವೇಶವನ್ನು ಭಾರತ ಮತ್ತೂಮ್ಮೆ ತಳ್ಳಿ ಹಾಕಿದೆ. ಈ ಬಗ್ಗೆ ಭಾರತ ಹೊಂದಿರುವ ನಿಲುವು ದಶಕಗಳಿಂದಲೂ ಒಂದೇ ಆಗಿದ್ದು, ಅದರಲ್ಲಿ ಬದಲಾವಣೆ ಇಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಂಗಳವಾರ ವಾಷಿಂಗ್ಟನ್‌ನಲ್ಲಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ನಡುವೆ ವಿವಿಧ ರಾಷ್ಟ್ರಗಳ ಮುಖಂಡರ ಜತೆಗಿನ ಮಾತುಕತೆ ವೇಳೆ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದೇಕೆ ಎಂಬ ವಿವರಣೆಯನ್ನು ನೀಡಲಾಯಿತು. ಆ.5ರ ಬಳಿಕ ಕಣಿವೆ ರಾಜ್ಯದಲ್ಲಿ ಏನಾಗಿದೆ ಎನ್ನುವುದನ್ನೂ ವಿಶ್ವ ನಾಯಕರಿಗೆ ವಿವರಿಸಲಾಗಿದೆ ಎಂದಿದ್ದಾರೆ ಜೈಶಂಕರ್‌.

Advertisement

ಆಂತರಿಕ ವಿಚಾರ: ಹ್ಯೂಸ್ಟನ್‌ನಲ್ಲಿ ಸೆ.25ರಂದು ನಡೆದ ಹೌಡಿ ಮೋಡಿ ಕಾರ್ಯಕ್ರಮದಲ್ಲಿ ಮೋದಿ ಅವರು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ಪರ ಪ್ರಚಾರ ಮಾಡುವಂತೆ ಮಾತನಾಡಿಲ್ಲ ಎಂದು ಜೈಶಂಕರ್‌ ಹೇಳಿದ್ದಾರೆ. ಪ್ರಧಾನಿ ಮೋದಿ “ಅಬ್‌ ಕಿ ಬಾರ್‌ ಟ್ರಂಪ್‌ ಕಿ ಸರ್ಕಾರ್‌’ ಎಂದು ಹೇಳಿದ್ದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಭಾರತ ಸರಕಾರ ಅಮೆರಿಕದ ಆಂತರಿಕ ರಾಜಕೀಯದಲ್ಲಿ ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜೈಶಂಕರ್‌ ಹೇಳಿದ್ದಾರೆ.

370ನೇ ವಿಧಿ ರದ್ದು: ನ.14ರಂದು ವಿಚಾರಣೆ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನ.14ಕ್ಕೆ ಮುಂದೂಡಿದೆ. ಮಂಗಳವಾರ ಅರ್ಜಿಗಳ ವಿಚಾರಣೆ ಆರಂಭಿಸಿದ ನ್ಯಾ| ಎನ್‌.ವಿ.ರಮಣ ನೇತೃತ್ವದ ಸಂವಿಧಾನ ಪೀಠ, ಅರ್ಜಿಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಲು ಕೇಂದ್ರ ಸರಕಾರ ಹಾಗೂ ಜಮ್ಮು-ಕಾಶ್ಮೀರ ಆಡಳಿತಕ್ಕೆ 4 ವಾರಗಳ ಕಾಲಾವಕಾಶ ನೀಡಿತು. ಸರಕಾರಕ್ಕೆ ಅಫಿದವಿತ್‌ಸಲ್ಲಿಸಲು 2 ವಾರಕ್ಕಿಂತ ಹೆಚ್ಚು ಕಾಲಾವಕಾಶ ನೀಡಬಾರದು ಎಂಬ ಅರ್ಜಿದಾರರ ಮನವಿಯನ್ನು ಪೀಠ ತಿರಸ್ಕರಿಸಿತು. ಸರಕಾರ ಪ್ರತಿ-ಅಫಿದವಿತ್‌ ಸಲ್ಲಿಸಿದ ಬಳಿಕ ಒಂದು ವಾರದೊಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರ ರಿಗೂ ಸೂಚಿಸಿತು. ಅಲ್ಲದೆ, 370ನೇ ವಿಧಿಗೆ ಸಂಬಂಧಿಸಿ ಹೊಸದಾಗಿ ಯಾರೂ ಅರ್ಜಿ ಸಲ್ಲಿಸಬಾರದು ಎಂಬ ಆದೇಶವನ್ನೂ ನ್ಯಾಯಪೀಠ ನೀಡಿತು.

ಸಮತೋಲನ ಅಗತ್ಯ: ವಿಚಾರಣೆ ವೇಳೆ, ಜಮ್ಮು-ಕಾಶ್ಮೀರ ಆಡಳಿತದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಕಣಿವೆ ರಾಜ್ಯದಲ್ಲಿ ಶೇ.100ರಷ್ಟು ಸ್ಥಿರ ದೂರವಾಣಿಗಳು ಕಾರ್ಯಾಚರಿಸುತ್ತಿವೆ ಮತ್ತು ಹಗಲಲ್ಲಿ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಒಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆಯ ನಡುವೆ ಸಮತೋಲನ ಇರಬೇಕು ಎಂದು ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next