Advertisement

ಬಹುಬಗೆಯ ರೈಸ್‌ಬಾತ್‌

07:21 PM Dec 10, 2019 | mahesh |

ಮನೆ ಮಂದಿಗೆಲ್ಲಾ ಇಷ್ಟವಾಗುವಂಥ ಬೆಳಗ್ಗಿನ ತಿಂಡಿ ಯಾವುದು ಎಂಬ ಪ್ರಶ್ನೆ ಮನೆಯೊಡತಿಯನ್ನು ಕಾಡುತ್ತಲೇ ಇರುತ್ತದೆ. ಉದ್ಯೋಗಸ್ಥೆಯರಿಗಂತೂ ಅದೊಂದು ದೊಡ್ಡ ಸವಾಲು. ಬೆಳಗ್ಗೆಯೂ ತಿಂದು, ಮಧ್ಯಾಹ್ನ ಬಾಕ್ಸ್‌ಗೂ ತೆಗೆದುಕೊಂಡು ಹೋಗಬಹುದಾದ ತಿನಿಸೆಂದರೆ “ರೈಸ್‌ ಐಟಮ್ಸ್‌’. ಅದರಲ್ಲೂ, ಚಿತ್ರಾನ್ನ, ಪುಳಿಯೋಗರೆ, ಪಲಾವ್‌ ಅಷ್ಟೇ ವೆರೈಟಿ ಇರುವುದು ಅನ್ನುವವರಿಗಾಗಿ, ಕೆಲವು ರೆಸಿಪಿಗಳು.

Advertisement

1.ಕೊತ್ತಂಬರಿ ಸೊಪ್ಪಿನ ರೈಸ್‌
ಬೇಕಾಗುವ ಸಾಮಗ್ರಿ: ಬಾಸುಮತಿ ಅಕ್ಕಿ- ಒಂದೂವರೆ ಕಪ್‌, ತುಪ್ಪ- 2 ಚಮಚ, ಈರುಳ್ಳಿ-1, ಟೊಮೇಟೊ- 1, ಬೀನ್ಸ್‌, ಬಟಾಣಿ- ಅರ್ಧ ಕಪ್‌, ಕ್ಯಾರೆಟ್‌- ಒಂದು, ಆಲೂಗಡ್ಡೆ- ಒಂದು, ಕ್ಯಾಪ್ಸಿಕಂ- ಅರ್ಧ, ಉಪ್ಪು ರುಚಿಗೆ, ನೀರು- 3 ಕಪ್‌. ರುಬ್ಬಿ ಕೊಳ್ಳಲು: ಈರುಳ್ಳಿ-1, ಲವಂಗ, ಚಕ್ಕೆ, ಕಾಳು ಮೆಣಸು, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಒಂದು ಹಿಡಿ (ಎಲ್ಲವನ್ನೂ ನುಣ್ಣಗೆ ರುಬ್ಬಿ)

ಮಾಡುವ ವಿಧಾನ: ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಪಲಾವ್‌ ಎಲೆ, ಗೋಡಂಬಿಯನ್ನು ಹಾಕಿ. ನಂತರ ಈರುಳ್ಳಿಯನ್ನು ಹಾಗಾಗಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಟೊಮೇಟೊ ಹಾಕಿ ಬಾಡಿಸಿ. ಹೆಚ್ಚಿದ ತರಕಾರಿಗಳನ್ನು ಹಾಕಿ ಮಿಶ್ರಣ ಮಾಡಿ. ಉಪ್ಪು ಮತ್ತು ರುಬ್ಬಿಕೊಂಡ ಮಸಾಲೆ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಅಕ್ಕಿಯನ್ನು ಹಾಕಿ, ಒಂದು ನಿಮಿಷ ಹುರಿದು, ಮೂರು ಕಪ್‌ ನೀರು ಹಾಕಿ ಕುಕ್ಕರ್‌ ಮುಚ್ಚಳ ಮುಚ್ಚಿ. ಎರಡು ವಿಷಲ್‌ ನಂತರ ಒಲೆ ಆರಿಸಿ.

2. ಕ್ಯಾಪ್ಸಿಕಂ ಬಾತ್‌
ಬೇಕಾಗುವ ಸಾಮಗ್ರಿ: ಒಂದು ಕಪ್‌ ಅಕ್ಕಿ ಅನ್ನ, ತೆಂಗಿನ ತುರಿ- ಅರ್ಧ ಕಪ್‌, ಶೇಂಗಾ ಬೀಜ, ಕಡಲೆಬೇಳೆ, ಉದ್ದಿನಬೇಳೆ, ಧನಿಯಾ- ಎರಡು ಚಮಚ, ಜೀರಿಗೆ- ಒಂದು ಚಮಚ, ಎಳ್ಳು- ಎರಡು ಚಮಚ, ಮೆಣಸಿನಕಾಯಿ- ಐದಾರು, ಎಣ್ಣೆ/ ತುಪ್ಪ- ನಾಲ್ಕು ಚಮಚ, ಸಾಸಿವೆ, ಕರೀಬೇವು, ಈರುಳ್ಳಿ- ಎರಡು, ಕ್ಯಾಪ್ಸಿಕಂ ಕೆಂಪು, ಹಳದಿ ಮತ್ತು ಹಸಿರು ಒಂದೊಂದು ಉದ್ದುದ್ದ ಹೆಚ್ಚಿದ್ದು, ಅರಿಶಿಣ- ಅರ್ಧ ಚಮಚ, ಗರಂ ಮಸಾಲೆ- ಅರ್ಧ ಚಮಚ, ಉಪ್ಪು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಅನ್ನವನ್ನು ಉದುರು ಉದುರಾಗಿ ಮಾಡಿ ಆರಲು ಬಿಡಿ. ಬಾಣಲೆಗೆ ಎಣ್ಣೆ ಹಾಕದೆ ಶೇಂಗಾ ಹುರಿಯಿರಿ. ಅದರೊಂದಿಗೆ ಕಡಲೆಬೇಳೆ, ಉದ್ದಿನಬೇಳೆ,ಧನಿಯಾ, ಜೀರಿಗೆ, ಎಳ್ಳು ಹಾಗೂ ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ. ಹುರಿದ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ಬಿಸಿ ಮಾಡಿ, ಸಾಸಿವೆ ಮತ್ತು ಕರೀಬೇವಿನ ಒಗ್ಗರಣೆ ಹಾಕಿ. ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಗರಂಮಸಾಲೆ,ಅರಿಶಿಣ ಮತ್ತು ಪುಡಿ ಮಾಡಿದ ಪದಾರ್ಥಗಳನ್ನು ಹಾಕಿ, ತೆಂಗಿನ ತುರಿಯನ್ನು ಸೇರಿಸಿ. ತಣಿದ ಅನ್ನವನ್ನು ಹಾಕಿ ಅದರೊಂದಿಗೆ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಎರಡು ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಕ್ಯಾಪ್ಸಿಕಂ ರೈಸ್‌ ರೆಡಿ.

Advertisement

3.ಕ್ಯಾಬೇಜ್‌ ಅನ್ನ
ಬೇಕಾಗುವ ಸಾಮಗ್ರಿ: ಕ್ಯಾಬೇಜ್‌ ಅರ್ಧ ಕಿಲೋ (ಸಣ್ಣದಾಗಿ ಹೆಚ್ಚಿಕೊಳ್ಳಿ), ಕ್ಯಾರೆಟ್‌ ತುರಿ ಸ್ವಲ್ಪ, ಕ್ಯಾಪ್ಸಿಕಂ ಸ್ವಲ್ಪ, ಈರುಳ್ಳಿ- ಎರಡು, ಅನ್ನ-ಒಂದು ಕಪ್‌, ಹಸಿ ಮೆಣಸು- ಎರಡು, ಬಾದಾಮಿ, ಗೋಡಂಬಿ, ಕರೀಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ- ಒಂದು ಚಮಚ, ಖಾರದ ಪುಡಿ- ಅರ್ಧ ಚಮಚ, ಅರಿಶಿಣ, ಗರಂ ಮಸಾಲೆ- ಅರ್ಧ ಚಮಚ, ಉಪ್ಪು, ತೆಂಗಿನ ತುರಿ- ಕಾಲು ಕಪ್‌, ಲಿಂಬೆರಸ, ಸಕ್ಕರೆ (ಬೇಕಿದ್ದರೆ)- ಒಂದು ಚಮಚ, ಒಗ್ಗರಣೆಗೆ ತುಪ್ಪ ಅಥವಾ ಎಣ್ಣೆ.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ/ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ, ಬಾದಾಮಿ, ಗೋಡಂಬಿ, ಹಸಿ ಮೆಣಸು ಮತ್ತು ಕರೀಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ. ಈರುಳ್ಳಿಯನ್ನು ಹಾಕಿ ಬಾಡಿಸಿ. ಹೆಚ್ಚಿಕೊಂಡ ತರಕಾರಿಗಳನ್ನು ಹಾಕಿ ಮಿಶ್ರಣ ಮಾಡಿ. ಗರಂಮಸಾಲೆ, ಖಾರದ ಪುಡಿ, ಅರಿಶಿಣ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆರಸ, ಸಕ್ಕರೆ ಹಾಕಿ ಮೂರು ನಿಮಿಷ ಮುಚ್ಚಿ ಬೇಯಿಸಿ. ಬೆಂದ ನಂತರ, ಅನ್ನ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ, ಎರಡು ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ.ನಂತರ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.

4.ಕ್ಯಾರೆಟ್‌ ರೈಸ್‌
ಬೇಕಾಗುವ ಸಾಮಗ್ರಿ: ಅನ್ನ- 3 ಕಪ್‌, ಎಣ್ಣೆ ಅಥವಾ ತುಪ್ಪ- 4 ಚಮಚ, ಸಾಸಿವೆ, ಜೀರಿಗೆ, ಗೋಡಂಬಿ, ಉದ್ದಿನ ಬೇಳೆ, ಕಡಲೆ ಬೇಳೆ, ಉಪ್ಪು, ಕರಿಬೇವು, ಅರಿಶಿಣ, ಕ್ಯಾರೆಟ್‌- 2, ಕಾಳುಮೆಣಸಿನ ಪುಡಿ, ತೆಂಗಿನ ತುರಿ- 1/2ಕಪ್‌, ಬಟಾಣಿ ಅಥವಾ ಕಾರ್ನ್- 1/2ಕಪ್‌, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು- 1.

ಮಾಡುವ ವಿಧಾನ: ಅನ್ನವನ್ನು ಉದುರಾಗಿ ಮಾಡಿಕೊಂಡು ಆರಲು ಬಿಡಿ. ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಗೋಡಂಬಿ ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕರಿಬೇವು, ಅರಿಶಿಣ ಮತ್ತು ಹಸಿಮೆಣಸನ್ನು ಹಾಕಿ. ನಂತರ, ಕ್ಯಾರೆಟ್‌ ತುರಿ ಮತ್ತು ಬಟಾಣಿ ಹಾಕಿ ಸ್ವಲ್ಪ ಹೊತ್ತು ಬೇಯಿಸಿ. ಬೆಂದ ಪದಾರ್ಥಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ. ಉರಿಯನ್ನು ಕಡಿಮೆ ಮಾಡಿ, ಅನ್ನವನ್ನು ಬೆರೆಸಿ. ಕೊನೆಯಲ್ಲಿ ಲಿಂಬೆರಸವನ್ನು ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

-ವೇದಾವತಿ ಎಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next