ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸೇರಿದಂತೆ ಹಲವು ಕಂಪೆನಿಗಳಿಗೆ ನೂರಾರು ಕೋಟಿ ರೂ. ವಂಚಿಸಿದ್ದ ದೇವಾಸ್ ಮಲ್ಟಿಮೀಡಿಯಾ ಪ್ರೈವೈಟ್ ಲಿಮಿಟೆಡ್ ಕಂಪೆನಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದ ಜಾರಿ ನಿರ್ದೇಶನಾಲಯದ ಆದೇಶ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಅಕ್ರಮ ಹಣ ಲೇವಾದೇವಿ ಪ್ರಕರಣ( ಪಿಎಂಎಲ್‌ಎ) ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ಕಂಪೆನಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದ ಇಡಿ ಆದೇಶ ರದ್ದುಕೋರಿದ್ದ ದೇವಾಸ್ ಕಂಪೆನಿಯ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರಿದ್ದ ಏಕಸದಸ್ಯ ಪೀಠ, ಪಿಎಂಎಲ್‌ಇ ಕಾಯಿದೆ ಅಧಿಕಾರ ಬಳಸಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಕ್ರಮ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧದ ಆರೋಪಗಳು 2006ರಲ್ಲಿ ನಡೆದಿವೆ. ಆದರೆ 2009ರಲ್ಲಿ ಪಿಎಂಎಲ್‌ಎ ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, 2009ಕ್ಕಿಂತ ಮೊದಲಿನ ಪ್ರಕರಣಗಳಲ್ಲಿ ಕಾಯಿದೆ ಅನ್ವಯವಾಗುವುದಿಲ್ಲ. ಹೀಗಾಗಿ ಇಡಿ ಅಧಿಕಾರಿಗಳು ತಮ್ಮ ಆಸ್ತಿ ಜಪ್ತಿ ಮಾಡಿಕೊಂಡಿರುವ ಆದೇಶ ರದ್ದು ಪಡಿಸಬೇಕು ಎಂಬ ಕಂಪೆನಿ ಪರವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಇಡಿ ಅಧಿಕಾರಿಗಳು ಪಿಎಂಎಲ್ ಕಾಯಿದೆ ಅಡಿ ವಿವಿಧ ಕಲಂಗಳ ಅಡಿಯಲ್ಲಿರುವ ಅಧಿಕಾರ ಬಳಸಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ದೇಶದ ಆರ್ಥಿಕತೆಗೆ ಮಾರಕವಾಗುವ ಗಂಭೀರ ಪ್ರಕರಣ ಇದು ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣ ಏನು?: ಬಾಹ್ಯಾಕಾಶ ಕ್ಷೇತ್ರದ ವಿಶೇಷ ತಂತ್ರಜ್ಞಾನ ಹೊಂದಿರುವ ದೇವಾಸ್ ಕಂಪೆನಿ, ಇಸ್ರೋಗೆ ಅಗತ್ಯವಿರುವ ಮಲ್ಟಿಮೀಡಿಯಾ ಸೇವೆ ಒದಗಿಸಲು 2005ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಸುಳ್ಳು ದಾಖಲೆಗಳ ಆಧಾರದಲ್ಲಿಯೇ ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದ್ದ ದೇವಾಸ್ ಕಂಪೆನಿ ದೇಶ ಹಾಗೂ ವಿದೇಶಿ ಕಂಪೆನಿಗಳಿಂದ 580 ಕೋಟಿ ರೂ.ಸಂಗ್ರಹಿಸಿತ್ತು.
ಈ ಬಹುಕೋಟಿ ಹಗರಣದ ತನಿಖೆ ನಡೆಸಿದ್ದ ಸಿಬಿಐ, ಇಸ್ರೋ ಮಾಜಿ ನಿರ್ದೇಶಕ ಜಿ. ಮಾಧವನ್ ನಾಯರ್ ಸೇರಿದಂತೆ ಹಲವರ ವಿಚಾರಣೆ ನಡೆಸಿದೆ. ಅದೇ ರೀತಿ ಅಕ್ರಮ ಹಣ ಸಂಗ್ರಹ ಹಾಗೂ ವರ್ಗಾವಣೆ ಮಾಡಿದ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ಮಾರ್ಚ್‌ನಲ್ಲಿ ದೇವಾಸ್ ಕಂಪೆನಿಗೆ ಸೇರಿದ ಬೆಂಗಳೂರಿನಲ್ಲಿರುವ ಸುಮಾರು 79 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.