ಹುಣಸೂರು: ಹುಣಸೂರು-ಮುಳ್ಳೂರು ಮಾರ್ಗವಾಗಿ ಕೆ.ಆರ್.ನಗರ ಹಾಗೂ ಹೆಜ್ಜೊಡ್ಲು-ರಾಯನಹಳ್ಳಿ-ಮಂಟಿಕೊಪ್ಪಲು ಮಾರ್ಗಕ್ಕೆ ಶಾಸಕ ಎಚ್.ವಿಶ್ವನಾಥ್ ಗಾವಡಗೆರೆ ಹೋಬಳಿಯ ಮುಳ್ಳೂರಿನಲ್ಲಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಭಾಗದ ಬಹು ದಿನಗಳ ಬೇಡಿಕೆಯಂತೆ ಕೆ.ಆರ್.ನಗರ ಡಿಪೋದಿಂದ ಮುಳ್ಳೂರು, ತೊಂಡಾಳು, ಉಂಡುವಾಡಿ ಮಾರ್ಗ ಹುಣಸೂರು ಹಾಗೂ ಹುಣಸೂರು ಡಿಪೋದಿಂದ ಕೆ.ಆರ್.ನಗರ-ಹೆಜ್ಜೊಡ್ಲು-ರಾಯನಹಳ್ಳಿ-ಮಂಟಿಕೊಪ್ಪಲು ಮಾರ್ಗ ಹುಣಸೂರಿಗೆ ಸಂಪರ್ಕ ಕಲ್ಪಿಸುವ ಬಸ್‌ಗಳನ್ನು ನಿತ್ಯ ಬೆಳಿಗ್ಗೆ-ಸಂಜೆ ಎರಡು ಬಾರಿ ಒಡಾಡಲಿದೆ. ಜನರು ಟಿಕೆಟ್ ಪಡೆದು ಪ್ರಯಾಣಿಸಬೇಕೆಂದು ಮನವಿ ಮಾಡಿದರು.
ಶಾಸಕರ ಬಸ್ ಪ್ರಯಾಣ: ಮುಳ್ಳೂರಿನಲ್ಲಿ ಹೊಸ ಬಸ್ ಮಾರ್ಗಕ್ಕೆ ಚಾಲನೆ ನೀಡಿದ ಶಾಸಕರು ತಮ್ಮ ಬೆಂಬಲಿಗರು, ಗ್ರಾಮಸ್ಥರೊಂದಿಗೆ ಟಿಕೇಟ್ ಪಡೆದು ಹೊಜ್ಜೊಡ್ಲು, ರಾಯನಹಳ್ಳಿ ಹಾಗೂ ಮಂಟಿಕೊಪ್ಪಲಿನವರೆಗೆ ತೆರಳಿ, ಬಸ್‌ನಲ್ಲೇ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು.
ಕೆರೆ ಒತ್ತುವರಿ ತೆರವು: ಸಭೆಯಲ್ಲಿ ರೈತರು ಈ ಭಾಗದ ಕೆರೆಗಳ ಒತ್ತುವರಿ ಸಾಕಷ್ಟಾಗಿದ್ದು, ತೆರವುಗೊಳಿಸಿರೆಂಬ ಒತ್ತಾಯಕ್ಕೆ ಕೆರೆ ಒತ್ತುವರಿ ವಿಚಾರದಲ್ಲಿ ರಾಜಿ ಇಲ್ಲ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಮುಳ್ಳೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಸ್ಪಂದಿಸುತ್ತೇನೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಖುದ್ದು ಭೇಟಿ ನೀಡಿ ಪರಿಹರಿಸಿಕೊಳ್ಳಿ.
ಗ್ರಾಮದ ಅಭಿವೃದ್ಧಿಯಲ್ಲಿ ದೇವರಾಜೇ ಅರಸರ ಆಪ್ತ ಗ್ರಾಮದ ಶಂಕರರಾವ್ ಕದಂ ಅನೇಕ ಕೊಡುಗೆ ನೀಡಿದ್ದನ್ನು ಸ್ಮರಿಸಿದರು. ಚುನಾಯಿತರಾದ ನಂತರ ಮುಳ್ಳೂರು ಗ್ರಾಮಕ್ಕಾಗಮಿಸಿದ ಶಾಸಕ ವಿಶ್ವನಾಥರನ್ನು ಮಂಗಳವಾದ್ಯಗಳೊಂದಿಗೆ ಸ್ವಾಗತಿಸಿದ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು. ಇದೇ ವೇಳೆ ವಿನಾಯಕ ಯುವ ಸೇನೆ ಎಂಬ ಸಂಘವನ್ನು ಶಾಸಕರು ಉದ್ಘಾಟಿಸಿದರು.
ಸಮಾರಂಭದಲ್ಲಿ ಗ್ರಾಮದ ವಿಠಲ್‌ರಾವ್‌ಜಗತಾಪ್, ಬಸವರಾಜು, ಮಹದೇವು, ಮಂಜು, ಸತ್ಯನಾರಾಯಣ್, ರಾಜ್ ಕಿರಣ್, ಮಹದೇವರಾಜು, ಗಾವಡಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಅಣ್ಣಯ್ಯನಾಯ್ಕ ಮತ್ತಿತರ ಮುಖಂಡರು ಹಾಗೂ ಸೆಸ್ಕ್ ಎಇಇ ಸಿದ್ದಪ್ಪ, ಕೆಎಸ್‌ಆರ್‌ಟಿಸಿಯ ಡಿಟಿಒ ದಶರಥ, ಎ.ಟಿ.ಎಸ್.ಕೃಷ್ಣಮೂರ್ತಿ ಭಾಗವಹಿಸಿದ್ದರು.