ಮೂಲ್ಕಿ: ಬಾಟಲಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮೂವರು ವ್ಯಕ್ತಿಗಳಿದ್ದ ದರೋಡೆಕೋರರ ತಂಡ ಚೂರಿ ತೋರಿಸಿ ಮನೆಯಲ್ಲಿದ್ದ ಮಹಿಳೆಯನ್ನು ಬೆದರಿಸಿ ಅವರ ಕುತ್ತಿಗೆಯಲ್ಲಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿಯಾಗಿರುವ ಘಟನೆ ಕೊಲ್ನಾಡು ಚಂದ್ರಮೌಳೀಶ್ವರ ದೇವಸ್ಥಾನ ರಸ್ತೆಯ ಬಳಿ ರವಿವಾರ ನಡೆದಿದೆ.
ಪೆಟ್ರೋಲ್ ಮುಗಿದಿದೆ ಬಾಟಲಿ ಬೇಕೆಂದು ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಮಹಿಳೆ ವಸಂತಿ ಅವರಲ್ಲಿ ಕೇಳಿದ್ದಾರೆ. ಮಹಿಳೆ ಮನೆಯೊಳಗೆ ಹೋಗಿ ಬಾಟಲಿ ತಂದು ಕೊಟ್ಟಿದ್ದರು. ಅನಂತರ ಮತ್ತೆ ಬಂದ ಅದೇ ವ್ಯಕ್ತಿಗಳು ಇನ್ನೊಂದು ಬಾಟಲಿಯನ್ನು ಕೇಳಿದ್ದಾರೆ. ಮತ್ತೆ ಮನೆಯೊಳಗೆ ಹೋದ ಮಹಿಳೆ ಇನ್ನೊಂದು ಬಾಟಲಿಯನ್ನು ತರುವಷ್ಟರಲ್ಲಿ ಮೂವರು ದರೋಡೆಕೋರರ ಗುಂಪು ಚೂರಿ ತೋರಿಸಿ ಹೆದರಿಸಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಸೆಳೆದಿದ್ದಾರೆ. ಈ ವೇಳೆ ವಸಂತಿ ಅವರು ಜೋರಾಗಿ ಬೊಬ್ಬೆ ಹಾಕಿದಾಗ ಸ್ಥಳೀಯರು ಸೇರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದಾರೆ.