Advertisement

ಮೂಲ್ಕಿ-ಪೊಳಲಿ-ಕಟೀಲು-ಮುಡಿಪು-ತೊಕ್ಕೊಟ್ಟು ಚತುಷ್ಪಥ ರಸ್ತೆ

02:41 AM Jul 24, 2019 | sudhir |

ಮಂಗಳೂರು: ದ.ಕ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಪ್ರಸ್ತಾವಿತ 2,800 ಕೋ.ರೂ. ವೆಚ್ಚದ ಚತುಷ್ಪಥ ಮಾದರಿ ವರ್ತುಲ ರಸ್ತೆಯ ಮಾರ್ಗನಕ್ಷೆಗೆ ಆಕ್ಷೇಪ ಎದುರಾಗಿದ್ದು, ಮರು ಸರ್ವೆ ನಡೆಸಿ ವರದಿ ಪಡೆಯಲು
ರಾ. ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

Advertisement

ಮೂಲ್ಕಿಯಿಂದ ಕಿನ್ನಿಗೋಳಿ, ಕಟೀಲು, ಕೈಕಂಬ, ಪೊಳಲಿ, ಬಿ.ಸಿ. ರೋಡ್‌, ಮುಡಿಪು ಮೂಲಕ ತೊಕ್ಕೊಟ್ಟು ಜಂಕ್ಷನ್‌ ಸೇರುವ ಉದ್ದೇಶಿತ ವರ್ತುಲ ರಸ್ತೆಗೆ ಅಧಿಕ ವೆಚ್ಚ ತಗುಲುವುದರಿಂದ ಪ್ರತ್ಯೇಕ ಮಾರ್ಗನಕ್ಷೆ ಸಿದ್ದಪಡಿಸಲು ಪ್ರಾಧಿಕಾರ ಯೋಚಿಸಿತ್ತು. ಇದರಂತೆ ಹೆಜಮಾಡಿ, ಏಳಿಂಜೆ, ತೋಡಾರ್‌, ಹೊಸಬೆಟ್ಟು, ನರಿಕೊಂಬು, ಮೆಲ್ಕಾರ್‌, ಇರಾ, ಬಾಳೆಪುಣಿ, ಸೋಮೇಶ್ವರ ಮೂಲಕ ಹೊಸ ವರ್ತುಲ ರಸ್ತೆಗೆ ಉದ್ದೇಶಿಸಲಾಗಿತ್ತು. ಆದರೆ ಈ ಬದಲಾ ವಣೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಎರಡೂ ರಸ್ತೆಗಳ ಮರು ಸರ್ವೆ ನಡೆಸಿ ಪೂರ್ಣ ವರದಿ ನೀಡುವಂತೆ ರಾ.ಹೆ. ಪ್ರಾಧಿಕಾರವು ಸೂಚಿಸಿದೆ.

ವಿಶೇಷವೆಂದರೆ ಈ ಹಿಂದೆ ಗೊತ್ತು ಪಡಿಸಿ ಡಿಪಿಆರ್‌ ಸಿದ್ಧವಾಗಿದ್ದ ಈ ವರ್ತುಲ ರಸ್ತೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾ. 5ರಂದು ಶಿಲಾನ್ಯಾಸವನ್ನೂ ನಡೆಸಿದ್ದರು.

ರಾ.ಹೆ. ಪ್ರಾಧಿಕಾರದ ವಾದವೇನು?
ಈಗಾಗಲೇ ಡಿಪಿಆರ್‌ ಸಿದ್ಧಪಡಿಸಿ ರುವ ಮಾರ್ಗನಕ್ಷೆ ಪ್ರಕಾರ ಹಾಲಿ ರಸ್ತೆಗಳನ್ನೇ ಅಗಲಗೊಳಿಸಲಾಗುತ್ತದೆ. ಹೀಗಾಗಿ ಭೂಸ್ವಾಧೀನ ವೆಚ್ಚ ಅಧಿಕ. ಅಭಿವೃದ್ಧಿ ಆದ ಪ್ರದೇಶವೇ ಮತ್ತೆ ಅಭಿವೃದ್ಧಿ ಆಗಲಿದೆ. ಕಾನೂನು ಸಮಸ್ಯೆಗಳು ಕೂಡ ಅಧಿಕ. ಇದರ ಬದಲು “ಗ್ರೀನ್‌ ಬೆಲ್ಟ್’ ಆಧಾರದಲ್ಲಿ ಹೊಸ ರಸ್ತೆ ಮಾಡಿದರೆ ಅಭಿವೃದ್ಧಿಗೆ ಅವಕಾಶ ಹೆಚ್ಚು ಮತ್ತು ಹಸಿರು ಪ್ರದೇಶಗಳಲ್ಲಿ ಹಾದುಹೋಗುವ ಕಾರಣ ವೆಚ್ಚ ಕಡಿಮೆ ಎಂಬುದು ಪ್ರಾಧಿಕಾರದ ಲೆಕ್ಕಾಚಾರ.

ಹಾಲಿ ಸಿದ್ಧವಿರುವ ಡಿಪಿಆರ್‌ ನಕ್ಷೆ
ಯೋಜನೆಯ ಸಲಹೆಗಾರ ಸಂಸ್ಥೆ ಸ್ತೂಪ್‌ ಕನ್ಸಲ್ಟೆಂಟ್ಸ್‌ ಈ ಹಿಂದೆ ನಿರ್ಧರಿ ಸಿದ ಪ್ರಕಾರ ಮೂಲ್ಕಿಯಿಂದ ಕಟೀಲು, ಪೊಳಲಿ, ಮುಡಿಪು ಮೂಲಕ ವರ್ತುಲ ರಸ್ತೆಯು ತೊಕ್ಕೊಟ್ಟು ಜಂಕ್ಷನ್‌ ಸಂಧಿಸಲಿದೆ. ಪಡುಪಣಂಬೂರು ಬಳಿ ಪ್ರಾರಂಭಗೊಂಡು ಕಿನ್ನಿಗೋಳಿ ಮೂಲಕ ಕಟೀಲಿಗೆ ಬರಲಿದೆ.

Advertisement

ಕಿನ್ನಿಗೋಳಿಯಲ್ಲಿ ಪೇಟೆಗೆ ತೊಂದರೆಯಾಗದಂತೆ ಸುಮಾರು 1.5 ಕಿ.ಮೀ. ಉದ್ದದ ಫ್ಲೈಓವರ್‌ ಇರಲಿದೆ. ಮೂರುಕಾವೇರಿ ಜಂಕ್ಷನ್‌ನಲ್ಲಿ ಬಲಕ್ಕೆ ಹೊರಳಿ ರಸ್ತೆ ಮುಂದುವರಿಯಲಿದೆ. ಕಟೀಲಿನಲ್ಲಿ ಪ್ರತ್ಯೇಕ ಸೇತುವೆ, ಬಜಪೆಯಲ್ಲಿ ಫ್ಲೈಓವರ್‌ ಇರಲಿದೆ. ಅಲ್ಲಿಂದ ಕೈಕಂಬ ಸೇರಲಿದ್ದು, ಎನ್‌ಎಚ್‌ 169ರ ಮೇಲ್ಸೇತುವೆಯೂ ಇರಲಿದೆ. ಅಡೂxರಿನಿಂದ ಪ್ರಾರಂಭಗೊಂಡು ಪೊಳಲಿ ಮೂಲಕ ಬಿ.ಸಿ. ರೋಡ್‌ನ‌ ಹೊಸ ಸೇತುವೆಯ ಬಳಿ ಎನ್‌ಎಚ್‌ 66ಕ್ಕೆ “ಟ್ರಂಪೆಟ್‌ ಇಂಟರ್‌ಚೇಂಜ್‌’ ಶೈಲಿಯಲ್ಲಿ ಕೂಡಿಕೊಳ್ಳಲಿದೆ. ಇಲ್ಲಿ ರಸ್ತೆ ಎನ್‌ಎಚ್‌ 264ನ್ನು ಹಾಯುವಲ್ಲಿ ಅಂಡರ್‌ ಪಾಸ್‌ ಇರಲಿದೆ. ಮೆಲ್ಕಾರ್‌ನಿಂದ ಮುಡಿಪು-ಅಲ್ಲಿಂದ ತೊಕ್ಕೊಟ್ಟು ಅಥವಾ ಕೋಟೆಕಾರಿಗೆ ಸೇರಬಹುದು ಎಂದು ಅಂದಾಜಿಸಲಾಗಿತ್ತು.

ಎರಡು ರಸ್ತೆಯ ಪ್ರಸ್ತಾವ-ಆಕ್ಷೇಪ!
ಹೊಸದಿಲ್ಲಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ರಾ.ಹೆ. ಪ್ರಾಧಿಕಾರದ ಉನ್ನತ ಮಟ್ಟದ ಸಭೆಯಲ್ಲಿ ಮಾರ್ಗನಕ್ಷೆ ಬದಲಿಸುವ ಚರ್ಚೆ ನಡೆದಿತ್ತು. ಹೊಸ ಮಾರ್ಗದ ಡಿಪಿಆರ್‌ ಮಾಡುವುದು ಉತ್ತಮ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದರು. ಆದರೆ ಹಳೆಯ ಮಾರ್ಗನಕ್ಷೆ ಬದಲಿಸಲು ಸಾಧ್ಯವಿಲ್ಲ ಎಂದು ಸಂಸದರು ಆಕ್ಷೇಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಮಾರ್ಗ ಗಳ ಪೂರ್ಣ ಮಟ್ಟದ ಅಧ್ಯಯನ ಕೈಗೊಂಡು, ನಿರ್ಮಾಣ ವೆಚ್ಚ, ಖಾಸಗಿ ಭೂಮಿ, ಮನೆ, ಕಟ್ಟಡ ಕಳೆದುಕೊಳ್ಳುವ ಸಂಖ್ಯೆ ಸಹಿತ ಸಂಪೂರ್ಣ ವಿವರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಮಾರ್ಗನಕ್ಷೆ ಬದಲಿಸುವುದಿಲ್ಲ
ಮೂಲ್ಕಿಯಿಂದ ಕಟೀಲು, ಪೊಳಲಿ, ಮುಡಿಪು ತೊಕ್ಕೊಟ್ಟು ಜಂಕ್ಷನನ್ನು ಸೇರುವ ಪ್ರಸ್ತಾವಿತ ನೂತನ ವರ್ತುಲ ರಸ್ತೆಯ ಮಾರ್ಗನಕ್ಷೆ (ಅಲೈನ್‌ಮೆಂಟ್‌)ಯನ್ನು ಬದಲಿಸಿ ಹೊಸ ಮಾರ್ಗನಕ್ಷೆ ರಚಿಸಿ ರಾ.ಹೆ. ಪ್ರಾಧಿಕಾರವು ಹೊಸ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅದನ್ನು ಒಪ್ಪಲಾಗದು ಎಂದು ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಈ ಮೊದಲು ನಿರ್ಧರಿಸಿದ ಪ್ರಕಾರವೇ ನೂತನ ವರ್ತುಲ ರಸ್ತೆ ನಡೆಸುವಂತೆ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ವರ್ತುಲ ಹೆದ್ದಾರಿ ಮಾರ್ಗನಕ್ಷೆ ಬದಲಿಸುವುದಿಲ್ಲ.
– ನಳಿನ್‌ ಕುಮಾರ್‌ ಕಟೀಲು ಸಂಸದರು-ದಕ್ಷಿಣ ಕನ್ನಡ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next