ಮೂಲ್ಕಿ: ಸ್ವಚ್ಛ ಭಾರತ ಯೋಜನೆಯಡಿ ದೇಶದ ನೆಲ ಮತ್ತು ಪರಿಸರ ಸ್ವಚ್ಛವಾದರೆ ಸಾಲದು ಸರಕಾರದ ಆಡಳಿತ ವ್ಯವಸ್ಥೆಯೊಳಗೆ ಬೆಳೆದಿರುವ ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆಯಾಗಿ ಆಡಳಿತ ಸ್ವಚ್ಛವಾಗಬೇಕಾಗಿದೆ ಎಂದು ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಮೂಲ್ಕಿ ನಗರ ಪಂಚಾಯತ್ ಆಶ್ರಯದಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದರು. ಸರಕಾರದ ಯೋಜನೆಗಳನ್ನು ಪ್ರಾಮಾಣಿಕ ವಾಗಿ ತಲುಪಿಸುವ ಕೆಲಸ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಮೂಲಕ ಆಗಬೇಕಾಗಿದೆ ಎಂದರು.
ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆ ವಹಿಸಿ, ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ರೂ. 6 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ ಮುಂದಿನ ಆರು ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು. ಮೂಲ್ಕಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕಾರ್ನಾಡು ಸದಾಶಿವ ರಾವ್, ಡಾ| ಸಂಜೀವನಾಥ ಐಕಳ, ಬಪ್ಪನಾಡು ಶಂಭು ಶೆಟ್ಟಿ ಹಾಗೂ ಯು.ಬಿ. ರಾಮರಾವ್ ಅವರ ತ್ಯಾಗದಿಂದ ನಮಗೆ ದೊರಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸುವ ಎಂದು ಅವರು ಕರೆ ನೀಡಿದರು.
ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಶೀತಲ್ ಅಲಗೂರು, ಮೂಲ್ಕಿ ಚರ್ಚ್‌ನ ಧರ್ಮಗುರು ಫಾ| ಸಿಲ್ವೆಸ್ಟರ್, ಡಾ| ಎಂ.ಎ.ಆರ್. ಕುಡ್ವಾ, ವಿಜಯ ಕಾಲೇಜು ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ, ಡಾ|ಎ.ಎಸ್.ಜೆ. ಆರಾಹ್ನ, ನಗರ ಪಂಚಾಯತ್ ಉಪಾಧ್ಯಕ್ಷ ರಾಧಿಕಾ ಯಾದವ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಬಿ.ಎಂ.ಆಸೀಫ್, ಮೀನಾಕ್ಷಿ ಬಂಗೇರ, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕೆ.ಸಿ.ಮ್ಯಾಥ್ಯು ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ನ್ಯಾಯವಾದಿ ಎಂ.ಭಾಸ್ಕರ ಹೆಗ್ಡೆ ನಿರೂಪಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ವಂದಿಸಿದರು. ಶಾಸಕ ಉಮನಾಥ್ ಕೋಟ್ಯಾನ್ ಸಭೆಯಲ್ಲಿ ಹಸಿರು ಕರ್ನಾಟಕ ಪ್ರತಿಜ್ಞಾ ವಿಧಿ ನೆರವೇರಿಸಿದರು.