ಯಾವುದೇ ಕೆಲಸಕ್ಕೆ ಬಾರದೇ ಇರುವ ನಿಷ್ಪ್ರಯೋಜಕನಿಗೆ ವ್ಯಂಗ್ಯವಾಗಿ ಉಡುಪಿ ಮಂಗಳೂರಿನ ಭಾಗದಲ್ಲಿ “ನೀನು ಬಪ್ಪನಾಡು ಡೋಲು ಬಡಿಯಲಿಕ್ಕೆ ಹೋಗು’ ಎಂದು ಹೇಳುವುದಿದೆ. ನಾವು ಸಣ್ಣವರಾಗಿದ್ದಾಗಿನಿಂದ ಹಿಡಿದು ಈಗಲೂ ಈ ಮಾತು ಬಳಕೆಯಲ್ಲಿದೆ.
ಬಪ್ಪನಾಡು ಡೋಲು ಎಂಬ ಪದವೇ ಹೇಳುವಂತೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಬಹಳ ದೊಡ್ಡದಾದ ಡೋಲು ಇದು. ಇಲ್ಲಿನ ದುರ್ಗಾಪರಮೇಶ್ವರಿ ದೇವಿಗೆ ಡೋಲು, ವಾದ್ಯಗಳ ಸದ್ದು ಬಹಳ ಪ್ರಿಯಕರ ಎಂಬುದು ನಂಬಿಕೆ. ಇಲ್ಲಿನ ಒಂಬತ್ತು ಮಾಗಣಿಯ (ಒಂಬತ್ತು ಊರಿನವರು) ಕೊರಗ ಸಮುದಾಯದ ಜನರು ಜಾತ್ರಾ ಮಹೋತ್ಸವಕ್ಕೆ ಬಂದು ಅವರ ಡೋಲನ್ನು ರಾತ್ರಿಯಿಂದ ಬೆಳಗಿನ ವರೆಗೆ ಬಾರಿಸಬೇಕು. ಈ ಡೋಲಿನ ಶಬ್ದದೊಂದಿಗೆ ದೇವಿಯ ರಥೋತ್ಸವ ನಡೆಯುತ್ತದೆ. ತುಳುನಾಡಿನಲ್ಲಿ ದೈವ ದೇವರ ಕಾರ್ಯಗಳಿಗೆ ಈ ಸಮುದಾಯದ ಡೋಲು ಅತ್ಯಂತ ಆವಶ್ಯಕ.
ಬಪ್ಪನಾಡು ಡೋಲು ಬಾರಿಸುವುದು ಏಕೆ?
ಬಪ್ಪನಾಡಿನ ದೊಡ್ಡ ಡೋಲನ್ನು ಸಾಮಾನ್ಯ ಜನರು ಸಹ ಬಾರಿಸಲು ಅವಕಾಶವಿದೆ. ದೇವಿಗೆ ಡೋಲಿನ ನಾದ ಪ್ರಿಯವಾಗಿರುವುದರಿಂದ ಡೋಲನ್ನು ಮೂರು ಅಥವಾ ಐದು ಬಾರಿ ಬಾರಿಸಿದರೆ ತಮ್ಮಲ್ಲಿರುವ ಹೆದರಿಕೆ ಕಡಿಮೆಯಾಗುತ್ತದೆ ಹಾಗೂ ಇದನ್ನು ಒಂದು ಸೇವೆಯ ರೂಪದಲ್ಲಿಯೂ ಸಹ ದೇವಿಗೆ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂಬುದು ಇಲ್ಲಿನ ಭಕ್ತರ ಹಾಗೂ ಅರ್ಚಕರ ನಂಬಿಕೆ.
ಇನ್ನು ಕರಾವಳಿ ಭಾಗದಲ್ಲಿ ಬಹಳ ಬಳಕೆಯಲ್ಲಿರುವ ಮಾತು ಎಂದರೆ ಅದು “ಬಪ್ಪನಾಡಿಗೆ ಹೋಗಿ ಡೋಲು ಬಾರಿಸು’ ಎನ್ನುವುದು. ಈ ಮಾತು ಈಗಲೂ ಬಹಳಷ್ಟು ಬಳಕೆಯಲ್ಲಿದೆ. ಹೆಚ್ಚಾಗಿ ಈ ಮಾತನ್ನು ವಿದ್ಯಾರ್ಥಿಗಳಿಗೆ ಹೇಳುತ್ತಾರೆ. ಮಕ್ಕಳು ತಮ್ಮ ಪರೀಕ್ಷೆ ಅಥವಾ ಕಲಿಕೆಯಲ್ಲಿ ಹಿಂದೆ ಇದ್ದರೆ ಶಿಕ್ಷಕರು ಹಾಗೂ ಪೋಷಕರು ಹೆಚ್ಚಾಗಿ ಇದನ್ನು ಬಳಸುತ್ತಾರೆ. ಇನ್ನು ಯಾವುದೇ ಕೆಲಸಕ್ಕೆ ಬಾರದೇ ಇರುವ ಅಥವಾ ಹೇಳಿದ ಕೆಲಸ ಸರಿಯಾಗಿ ಮಾಡಿದೇ ಇರುವಾಗಲೂ ಈ ಮಾತನ್ನು ಉಪಯೋಗಿಸುತ್ತಾರೆ.
ಈ ಡೋಲು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ದಕ್ಷಿಣ ದಿಕ್ಕಿನಲ್ಲಿ ನೋಡಬಹುದು. ಒಮ್ಮೆ ಬಪ್ಪನಾಡು ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಬಪ್ಪನಾಡು ಡೋಲನ್ನು ನೋಡಿ, ಭಾರಿಸಿ.
-ಕಾರ್ತಿಕ್ ಮೂಲ್ಕಿ
ಎಸ್.ಡಿ.ಎಂ. ಕಾಲೇಜು, ಉಜಿರೆ