Advertisement

ಡಿ. 30ರ ಮೂಲ್ಕಿ ಸೀಮೆ ಅರಸು ಕಂಬಳಕ್ಕೆ  ಸರ್ವ ಸಿದ್ಧತೆ

05:34 AM Dec 29, 2018 | |

ಪಡುಪಣಂಬೂರು: ಕೃಷಿ ಮತ್ತು ಸಾಂಸ್ಕೃತಿಕ ಬದುಕಿನ ನೆರಳಾಗಿರುವ ಮೂಲ್ಕಿ ಸೀಮೆ ಅರಸು ಕಂಬಳವು ಡಿ. 30ರಂದು ಸಂಪ್ರದಾಯ ಬದ್ಧವಾಗಿ ಹಾಗೂ ಜನಾಕರ್ಷಣೆಯೊಂದಿಗೆ ನಡೆಸಲು ಸರ್ವ ಸಿದ್ಧತೆಯನ್ನು ನಡೆಸಲಾಗಿದೆ ಎಂದು ಮೂಲ್ಕಿ ಸೀಮೆ ಅರಸು ಕಂಬಳದ ಮಾರ್ಗದರ್ಶಕರಾದ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ತಿಳಿಸಿದರು.

Advertisement

ಪಡುಪಣಂಬೂರು ಮೂಲ್ಕಿ ಅರಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 400 ವರ್ಷಗಳ ಇತಿಹಾಸವಿರುವ ಕಂಬಳಕ್ಕೆ ಜೈನ ಮನೆತನ ಹಾಗೂ ಗುತ್ತು ಬರ್ಕೆಯ ಗೌರವ ನೀಡುತ್ತಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಬಪ್ಪನಾಡು, ಅರಮನೆಯ ಬಸದಿ, ನಾಗಬನ, ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಸನ್ನಿಧಾನದಲ್ಲಿ ಅರಮನೆಯ ಧರ್ಮಚಾವಡಿಯಲ್ಲಿನ ಗೌರವವದೊಂದಿಗೆ ಮೂಲ್ಕಿ ಸೀಮೆಯ ಒಂಭತ್ತು ಮಾಗಣೆಯ ಭಕ್ತರೊಂದಿಗೆ ಊರ-ಪರವೂರ ಕಂಬಳ ಪ್ರೇಮಿಗಳ ಸಮ್ಮುಖದಲ್ಲಿ ಕಂಬಳ ನಡೆಯಲಿದೆ ಎಂದರು. 

ಕಂಬಳ ಸಮಿತಿಯ ಅಧ್ಯಕ್ಷ ಕೋಲ್ನಾಡುಗುತ್ತು ರಾಮಚಂದ್ರ ನಾಯ್ಕ ಮಾಹಿತಿ ನೀಡಿ, ಜಿಲ್ಲಾ ಕಂಬಳ ಸಮಿತಿಯ ಎಲ್ಲ ನಿರ್ಣಯವನ್ನು ಪಾಲಿಸುವ ಮೂಲಕ ಕಂಬಳಕ್ಕೆ ತಯಾರಿ ನಡೆದಿದೆ. ಸುಮಾರು 150ಕ್ಕೂ ಹೆಚ್ಚು ಕಂಬಳ ಕೋಣದ ಯಜಮಾನರು ಭಾಗವಹಿಸಲಿದ್ದಾರೆ. ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್‌ ಅಧ್ಯಕ್ಷತೆಯಲ್ಲಿ ಕೆ.ಎಸ್‌. ನಿತ್ಯಾನಂದ, ರಂಗನಾಥ ಭಟ್‌, ವಿಕ್ಟರ್‌ ಡಿ’ಮೆಲ್ಲೋ, ವಿನಯಲಾಲ್‌ ಬಂಗೇರ ಅವರು ಕಂಬಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್‌ನ ಮಾಹಬಲೇಶ್ವರ ಭಟ್‌ ಅಧ್ಯಕ್ಷತೆಯಲ್ಲಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಬಹುಮಾನ ವಿತರಿಸಲಿದ್ದು, ಸಾಧಕರನ್ನು ಸಮ್ಮಾನಿಸಲಿದ್ದಾರೆ. ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ಕುಮಾರ್‌ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್‌, ಐವನ್‌ ಡಿ’ಸೋಜಾ, ಕೋಟ ಶ್ರೀನಿವಾಸ ಪೂಜಾರಿ, ಹರೀಶ್‌ ಕುಮಾರ್‌ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಮೂಲ್ಕಿ ಅರಮನೆಯ ಗೌತಮ್‌ ಜೈನ್‌, ಸಾಹುಲ್‌ ಹಮೀದ್‌ ಕದಿಕೆ, ಶಶೀಂದ್ರ ಎಂ. ಸಾಲ್ಯಾನ್‌, ಉಮೇಶ್‌ ಪೂಜಾರಿ ಪಿ., ದಿನೇಶ್‌ ಸುವರ್ಣ, ನವೀನ್‌ಕುಮಾರ್‌ ಶೆಟ್ಟಿ ಎಡ್ಮೆಮಾರ್‌, ಕೆ.ವಿಜಯಕುಮಾರ್‌ ಶೆಟ್ಟಿ, ಹೆಚ್‌. ಮನ್ಸೂರ್‌ ಕಾರ್ನಾಡು, ರಮೇಶ್‌ ಸುವರ್ಣ, ನವೀನ್‌ ಕುಮಾರ್‌, ರಂಜಿತ್‌ ಕೆ.ಪುತ್ರನ್‌ ಉಪಸ್ಥಿತರಿದ್ದರು.

Advertisement

ಏಕಮುಖ ಸಂಚಾರ ವ್ಯವಸ್ಥೆ
ಕಂಬಳವನ್ನು ವೀಕ್ಷಿಸಲು ಸುಮಾರು 40 ಸಾವಿರಕ್ಕಿಂತಲೂ ಹೆಚ್ಚು ಮಂದಿ ಆಗಮಿಸುವುದರಿಂದ ರಾಷ್ಟ್ರೀಯ ಹೆದ್ದಾರಿಯ ಪಡುಪಣಂಬೂರು ಗ್ರಾ.ಪಂ.ನ ಮೂಲಕ ಶನೈಶ್ಚರ ಮಂದಿರ ರಸ್ತೆಯಲ್ಲಿ ಒಳ ಬಂದು, ಹಳೆಯಂಗಡಿ ಸಂತೆಕಟ್ಟೆಯಾಗಿ, ಒಳ ರಸ್ತೆಯ ಮೂಲಕ ಹೊರ ಹೋಗುವ ಏಕಮುಖ ರಸ್ತೆಯನ್ನಾಗಿ ಕಂಬಳದಂದು ಪರಿವರ್ತಿಸಲಾಗಿದೆ. ಸವಾರರು ಸಹಕರಿಸಿದಲ್ಲಿ ಯಾವುದೇ ಸಂಚಾರದ ಒತ್ತಡ ಇರುವುದಿಲ್ಲ.
ಗೌತಮ್‌ ಜೈನ್‌, ಮೂಲ್ಕಿ ಅರಮನೆ

Advertisement

Udayavani is now on Telegram. Click here to join our channel and stay updated with the latest news.

Next