ನವದೆಹಲಿ : ಗ್ಯಾಂಗ್‍ಸ್ಟರ್ ಮುಖ್ತಾರ್ ಅನ್ಸಾರಿ ಪತ್ನಿ ಅಫ್ಸಾನ್ ಅನ್ಸಾರಿ ತನ್ನ ಗಂಡನಿಗೆ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ತನ್ನ ಪತಿಯ ಜೀವದ ಬಗ್ಗೆ ಭಯವಾಗುತ್ತಿದ್ದು, ನಕಲಿ ಎನ್‍ಕೌಂಟರ್ ಮಾಡಿ ಕೊಲ್ಲದಂತೆ ಉತ್ತರ ಪ್ರದೇಶದ ಪೊಲೀಸರಿಗೆ ನಿರ್ದೇಶನ ನೀಡುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿರುವ ಅಫ್ಸಾನ್, ಮುಕ್ತ ಹಾಗೂ ನ್ಯಾಯಯುತ ವಿಚಾರಣೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ.
ಅನ್ಸಾರಿಯನ್ನು ಪಂಜಾಬ್ ನಿಂದ ಉತ್ತರ ಪ್ರದೇಶದ ಬಂಧಿಖಾನೆಗೆ ಸ್ಥಳಾಂತರಿಸುವಂತೆ ಮಾರ್ಚ್ 26 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಪಂಜಾಬ್‍ನ ರುಪ್‍ನಗರ ಜೈಲಿನಿಂದ ಉತ್ತರ ಪ್ರದೇಶದ ಬಂಡಾ ಸೆರೆಮನೆಗೆ ಅನ್ಸಾರಿಯನ್ನು ಸ್ಥಳಾಂತರಿಸಲು ಒಂದು ವಾರದ ಕಾಲಾವಕಾಶ ನೀಡಿತ್ತು. ಅದರಂತೆ ಇಂದು ಉತ್ತರ ಪ್ರದೇಶದ ಪೊಲೀಸರು ಅನ್ಸಾರಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಇನ್ನು ಮಾರ್ಚ್ 31 ರಂದು ಅಫ್ಸಾನ್ ಅನ್ಸಾರಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು, ಪಂಜಾಬ್‌ನಿಂದ ಉತ್ತರ ಪ್ರದೇಶಕ್ಕೆ ತಮ್ಮ ಪತಿಯನ್ನು ವರ್ಗಾಯಿಸುವ ವೇಳೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಗ್ಯಾಂಗ್‍ಸ್ಟರ್ ಆಗಿದ್ದ ಅನ್ಸಾರಿ ನಂತರ ರಾಜಕಾರಣಿಯಾಗಿ ಮವು ಪ್ರದೇಶದ ಬಿಎಸ್‌ಪಿ ಶಾಸಕ ಆಗಿದ್ದಾನೆ. ಮುಖ್ತಾರ್ ಅನ್ಸಾರಿಯನ್ನು 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶ ಜೈಲಿಗೆ ವರ್ಗಾವಣೆ ಮಾಡಬೇಕು ಎಂದು ರೈ ಪತ್ನ ಅಲ್ಕಾ ರೈ ಕಾನೂನು ಹೊರಾಟ ನಡೆಸಿದ್ದರು. ಅನ್ಸಾರಿ ವಿರುದ್ಧ ಉತ್ತರ ಪ್ರದೇಶದಲ್ಲಿ ಸುಮಾರು 52 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.