ನವದೆಹಲಿ: ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸುವ ದೇಶದ ಅತ್ಯಂತ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಕಂಪನಿಯ ಮುಕೇಶ್ ಅಂಬಾನಿ ಮತ್ತೆ ಮೊದಲಿಗರಾಗಿದ್ದಾರೆ. ಸತತ 12ನೇ ವರ್ಷ ಅವರು ಈ ಸ್ಥಾನ ಕಾಯ್ದು ಕೊಂಡದ್ದು ಅವರ ಹೆಗ್ಗಳಿಕೆ. ಹೊಸ ಪಟ್ಟಿಯ ವಿಶೇಷತೆಯೆಂದರೆ ಅದಾನಿ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಗೌತಮ್ ಅದಾನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಾಫ್ಟ್ವೇರ್ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್‌ಜಿ ಹಿಂದಿನ ಬಾರಿ ದ್ವಿತೀಯ ಸ್ಥಾನದಲ್ಲಿದ್ದವರು ಈ ಬಾರಿ 17ನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಂಪತ್ತಿನ ಕೆಲ ಅಂಶವನ್ನು ದಾನವಾಗಿ ನೀಡಿದ್ದರಿಂದ ಈ ಕುಸಿತ ಉಂಟಾಗಿದೆ.
ಮುಕೇಶ್ ಅಂಬಾನಿ ಅವರ ಸಂಪತ್ತಿನ ಒಟ್ಟು ಮೌಲ್ಯ 51.4 ಶತಕೋಟಿ ಡಾಲರ್ ಆಗಿದೆ. ದ್ವಿತೀಯ ಸ್ಥಾನದಲ್ಲಿರುವ ಗೌತಮ್ ಅದಾನಿ ಸಂಪತ್ತಿನ ಒಟ್ಟು ಮೌಲ್ಯ 15.7 ಶತಕೋಟಿ ಡಾಲರ್ ಆಗಿದೆ. ಹೀಗಾಗಿ, ಅಂಬಾನಿ ದೇಶದ ಸಿರಿವಂತರ ಪಟ್ಟಿಯಲ್ಲಿ ಅಗ್ರಜರಾಗಿದ್ದಾರೆ. ಹಿಂದೂಜಾ ಸಹೋದರರು, ನಿರ್ಮಾಣ ಕ್ಷೇತ್ರದ ಪ್ರಮುಖ ಪಲ್ಲೋಂಜಿ ಮಿಸ್ತ್ರಿ, ಬ್ಯಾಂಕರ್ ಉದಯ ಕೊಟಕ್, ಎಚ್‌ಸಿಎಲ್ ಸಂಸ್ಥಾಪಕ ಶಿವ ನಾಡಾರ್, ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್, ಕೈಗಾರಿಕೋದ್ಯಮಿ ಕುಮಾರ್ ಬಿರ್ಲಾ ಪಟ್ಟಿಯಲ್ಲಿರುವ ದೇಶದ ಇತರ ಉದ್ಯಮಿಗಳು. ದೇಶದಲ್ಲಿನ 100 ಶ್ರೀಮಂತರ ಪಟ್ಟಿಯಲ್ಲಿ ಈ ಬಾರಿ ಆರು ಹೊಸ ಮುಖಗಳ ಪ್ರವೇಶವಾಗಿದೆ. ಅವರೆಂದರೆ ಬೈಜು ರವೀಂದ್ರನ್, ಹಲ್ದೀರಾಮ್ಸ್ ಕಂಪನಿಯ ಮನೋಹರ್ ಲಾಲ್ ಮತ್ತು ಮಧುಸೂದನ್ ಅಗರ್ವಾಲ್, ಜಾಗ್ವಾರ್ ಬಾತ್‌ರೂಮ್ ಫಿಟ್ಟಿಂಗ್ಸ್‌ನ ರಾಜೇಶ್ ಮೆಹ್ರಾ ಪ್ರಮುಖರು.