ನವದೆಹಲಿ: ಭಾರತದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದು, ಚೀನಾದ ಶ್ರೀಮಂತ ಉದ್ಯಮಿ ಜಾಕ್ ಮಾ ಅವರನ್ನು ಹಿಂದಿಕ್ಕಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.
ಪ್ರತಿಷ್ಠಿತ ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹತ್ತನೇ ಸ್ಥಾನ ಪಡೆದಿದ್ದಾರೆ. ಅಮರಿಕ, ಚೀನಾ ನಂತರ ಭಾರತ ಅತೀ ಹೆಚ್ಚು ಕೋಟ್ಯಧೀಶರನ್ನು ಹೊಂದಿರುವ ಮೂರನೇ ದೇಶವಾಗಿದೆ ಎಂದು ಉಲ್ಲೇಖಿಸಿದೆ.
ಪೋರ್ಬ್ಸ್ ಬಿಡುಗಡೆ ಮಾಡಿರುವ 35ನೇ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ ಕೋಟ್ಯಧೀಶ್ವರರಲ್ಲಿ ಅಮೆಜಾನ್ ಸಿಇಒ, ಸ್ಥಾಪಕ ಜೆಫ್ ಬೆಜೋಸ್ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಒಟ್ಟು ಆಸ್ತಿ ಮೌಲ್ಯ 177 ಬಿಲಿಯನ್ ಅಮೆರಿಕನ್ ಡಾಲರ್. ಪಟ್ಟಿಯಲ್ಲಿ ಸ್ಪೇಸ್ ಎಕ್ಸ್ ಸ್ಥಾಪಕ ಎಲೋನ್ ಮಸ್ಕ್ ಎರಡನೇ ಸ್ಥಾನ ಪಡೆದಿದ್ದಾರೆ.
ಏಷ್ಯಾದಲ್ಲಿ ಮುಕೇಶ್ ಅಂಬಾನಿ ದೇಶದ ನಂಬರ್ ವನ್ ಅತೀ ಶ್ರೀಮಂತ ವ್ಯಕ್ತಿಯಾಗಿದ್ದು, ಇವರ ಆಸ್ತಿಯ ಒಟ್ಟು ಮೌಲ್ಯ 84.5 ಬಿಲಿಯನ್ ಅಮೆರಿಕನ್ ಡಾಲರ್. ಪೋರ್ಬ್ಸ್ ನ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ ಎರಡನೇ ಸ್ಥಾನ ಪಡೆದಿದ್ದು, ಜಾಗತಿಕವಾಗಿ 24ನೇ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದೆ.
ವಿಶ್ವದ ಅತೀ ದೊಡ್ಡ ಲಸಿಕೆ ತಯಾರಿಕೆಯ ಸೇರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕ ಸೈರಸ್ ಪೂನಾವಾಲ್ಲಾ ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ 169ನೇ ಸ್ಥಾನ ಪಡೆದಿದ್ದು, ಏಷ್ಯಾದಲ್ಲಿ 7ನೇ ಸ್ಥಾನ ಪಡೆದಿರುವುದಾಗಿ ಪೋರ್ಬ್ಸ್ ಉಲ್ಲೇಖಿಸಿದೆ. ಎಚ್ ಸಿಎಲ್ ಟೆಕ್ನಾಲಜೀಸ್ ಸ್ಥಾಪಕ ಶಿವ್ ನಾಡಾರ್ ಭಾರತದ ಮೂರನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.