Advertisement

ಸರ್ಕಾರದಿಂದ ಜನರ ಜೀವನ ಮೂರಾಬಟ್ಟೆ : ಮುಜೀಬ್‌

10:47 AM Mar 21, 2022 | Team Udayavani |

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯಂತಹ ದಂಧೆಯ ಮೂಲಕ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿಸೈಯದ್‌ ಮುಜೀಬ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಗೆ ತಕ್ಕಂತೆ ಕಾರ್ಮಿಕರ ವೇತನ ಹೆಚ್ಚಳವಾಗಿಲ್ಲ. ಇಂಧನ ಒಳಗೊಂಡಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಗೊಂಡಿದ್ದಾರೆ. ಹಾಗಾಗಿ ಬೆಲೆ ಏರಿಕೆ ವಿರುದ್ಧ ಎಲ್ಲರು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದರು.

ಚುನಾವಣೆ ಸಮಯದಲ್ಲಿ ಸರ್ಕಾರಗಳು ನೀಡುವ ಭರವಸೆಗಳಿಗೂ ವಾಸ್ತವಕ್ಕೂ ಯಾವುದೇ ಸಂಬಂಧ ಇರುವುದೇ ಇಲ್ಲ. 2014ರ ಆದಾಯಕ್ಕೆ ಹೋಲಿಕೆ ಮಾಡಿ ನೋಡಿದರೆ ಎಲ್ಲವೂ ಹೆಚ್ಚಳವಾಗಿದೆ. ಸಮಸ್ಯೆಗಳು, ನೀತಿಗಳ ವಿರುದ್ಧ ಮಾತನಾಡಿದರೆ ದೇಶದ್ರೋಹ ಎನ್ನುವ ಪಟ್ಟಿಕಟ್ಟಿ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ದೂರಿದರು.

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ. ವಿಜಯಭಾಸ್ಕರ್‌ ಮಾತನಾಡಿ, ಕೇಂದ್ರ ಸರ್ಕಾರ ಮನುಸ್ಮೃತಿಯ ಸಂಸ್ಕೃತಿ ಹೇರಲು ಮುಂದಾಗುತ್ತಿದೆ. ರಾಜ್ಯ ಸರ್ಕಾರ ವಿದ್ಯಾರ್ಥಿ ಸಮೂಹದ ಮೇಲೆ ಭಗವದ್ಗೀತೆ ತರಲು ಹುನ್ನಾರ ನಡೆಸುತ್ತಿದೆ. ಹಿಂದೂ ರಾಷ್ಟ್ರ ಎಂದರೆ ಹಿಂದೂಗಳಿಗೆ ಎಲ್ಲವೂ ಸಿಗುವುದಿಲ್ಲ. ಮತ್ತೂಮ್ಮೆ ರಾಷ್ಟ್ರದಲ್ಲಿ ದಲಿತರು, ಶೂದ್ರರು ಎಂದು ವರ್ಗೀಕರಣ ಮಾಡಿ ಹೇಳುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡಲಾಗುತ್ತಿದೆ. ವಿನಾಕಾರಣ ಧರ್ಮ, ಜಾತಿಗಳ ಮಧ್ಯೆ ಜನರನ್ನು ಎತ್ತಿ ಕಟ್ಟಲಾಗುತ್ತಿದೆ. ದೇಶದ ಆರ್ಥಿಕತೆ ಉಳಿಸುವ ಬದಲು ಜನರ ಮಧ್ಯೆ ಕಂದಕವನ್ನು ಸೃಷ್ಟಿ ಮಾಡಲಾಗುತ್ತಿದೆ. ಜನ, ರೈತ, ಕಾರ್ಮಿಕ ವಿರೋಧಿ ಸರ್ಕಾರಗಳ ವಿರುದ್ಧ ಜನರು ಹೋರಾಟ ಮಾಡಿ ಕಂದಕ ಹೋಗಲಾಡಿಸಿ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಕಾರ್ಮಿಕ ವರ್ಗ ಅವಿರತವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ, ಯಾವುದೇ ಸರ್ಕಾರ ಕಾರ್ಮಿಕರು, ಜನ ಸಾಮಾನ್ಯರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಏಕಪಕ್ಷೀ ಯವಾಗಿ ಕಾನೂನು ಕಾಯ್ದೆ ತಿದ್ದುಪಡಿ ತರುವ ಮೂಲಕ ಹಕ್ಕುಗಳನ್ನೇ ದಮನ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಜನ, ಕಾರ್ಮಿಕ, ರೈತ, ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಮಾ. 28 ಮತ್ತು 29 ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಮುಷ್ಕರದ ಯಶಸ್ಸಿಗೆ ಸರ್ವರು ಸಹಕರಿಸಬೇಕು. ಎರಡು ದಿನಗಳ ಮುಷ್ಕರದಲ್ಲಿ 25 ಕೋಟಿ ಕಾರ್ಮಿಕರು ಭಾಗವಹಿಸುವರು. ಕಾಷ್ಮೀರಿ ಪಂಡಿತರ ಮೇಲಿನ ಘೋರ ಹತ್ಯಾಕಾಂಡಕ್ಕಿಂತಲೂ ಹೆಚ್ಚಿನದಾಗಿ ದಲಿತರು, ಶೋಷಿತರು, ಕಾರ್ಮಿಕರು, ದಮನಿತರ ನರಮೇಧಗಳಾಗಿವೆ. ಅವುಗಳ ಮೇಲೆ ಯಾವ ಫೈಲ್‌ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಕೆ.ಯು. ಭಟ್‌, ಅನಂದಮೂರ್ತಿ, ಆವರಗೆರೆ ಎಚ್‌.ಜಿ. ಉಮೇಶ್‌, ಆವರಗೆರೆ ಚಂದ್ರು, ರಾಜೇಂದ್ರ ಬಂಗೇರ, ಆನಂದರಾಜ್‌, ವಿ.ಲಕ್ಷ್ಮಣ್‌, ಮಂಜುನಾಥ್‌ ಕೈದಾಳೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next