Advertisement

‘ಕೋಟಿಲಿಂಗ’ಕ್ಕೆ ಮುಜರಾಯಿ ತೂಗುಗತ್ತಿ!

07:28 AM Feb 06, 2019 | Team Udayavani |

ಕೋಲಾರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೋಟಿಲಿಂಗೇಶ್ವರ ದೇಗುಲ ಮೇಲ್ವಿಚಾರಣೆ ನಿರ್ವಹಣೆ ಕುರಿತಂತೆ ವಿವಾದ ಬಗೆಹರಿಸಿಕೊಳ್ಳದಿದ್ದರೆ ದೇಗುಲವನ್ನು ಸರ್ಕಾರದಿಂದ ಮುಟ್ಟುಗೋಲು ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ.

Advertisement

ದೇಗುಲ ನಿರ್ಮಾತೃ ಶ್ರೀಸಾಂಭವಶಿವಮೂರ್ತಿ ನಿಧನದ ನಂತರ ದೇಗುಲ ಮೇಲುಸ್ತುವಾರಿ ನೋಡಿಕೊಳ್ಳುವ ವಿಚಾರದಲ್ಲಿ ದೇಗುಲದ ಕಾರ್ಯದರ್ಶಿ ಕುಮಾರಿ ಹಾಗೂ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಡುವೆ ತಗಾದೆ ಏರ್ಪಟ್ಟಿತ್ತು. ಈ ಎರಡೂ ಗುಂಪುಗಳ ತಿಕ್ಕಾಟದಲ್ಲಿ ದೇಗುಲಕ್ಕೆ ಬೀಗ ಜಡಿಯಲಾಗಿತ್ತು. ಎರಡೂ ಕಡೆ ದೂರುಗಳು ದಾಖಲಾಗಿ ಪೊಲೀಸ್‌ ಮೆಟ್ಟಿಲೇರುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಕೋಟಿಲಿಂಗೇಶ್ವರ ದೇಗುಲದ ವಿವಾದ ಶಮನಗೊಳಿಸಲು ಮಧ್ಯಸ್ಥಿಕೆ ಸಂಸದ ಕೆ.ಎಚ್.ಮುನಿಯಪ್ಪ ಮಧ್ಯಸ್ಥಿಕೆ ವಹಿಸಿದ್ದರು.

ಸಮಾಧಾನ ಮಾಡಿದ್ದರು: ಕಳೆದ ಶನಿವಾರ ಮಧ್ಯರಾತ್ರಿ 2 ಗಂಟೆವರೆಗೂ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಸಂಸದ ಕೆ.ಎಚ್.ಮನಿಯಪ್ಪ, ಕೋಟಿಲಿಂಗೇಶ್ವರ ದೇಗುಲಕ್ಕೆ ಸಂಬಂಧಪಟ್ಟಂತೆ ಗುಂಪುಗಾರಿಕೆ ನಡೆಸುತ್ತಿರುವ ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ಗುಂಪುಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದರು. ಸೋಮವಾರ ಟ್ರಸ್ಟ್‌ ಬೈಲಾ ತಯಾರಿಸಿ ನೋಂದಣಿಗೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಸಿ.ಎಸ್‌.ದ್ವಾರಕಾನಾಥ್‌ರಿಗೆ ವಹಿಸಲಾಗಿತ್ತು.

ದೇಗುಲದ ಬ್ಯಾಂಕ್‌ ಖಾತೆಯನ್ನು ಡಾ.ಶಿವಪ್ರಸಾದ್‌ ಮತ್ತು ಕುಮಾರಿ ಹೆಸರಿನಲ್ಲಿ ಜಂಟಿಯಾಗಿ ತೆರೆಯಲು ಸೂಚಿಸಲಾಗಿತ್ತು. ಅಗತ್ಯಬಿದ್ದರೆ ಟ್ರಸ್ಟಿನಲ್ಲಿ ಇನ್ನಿಬ್ಬರು ಗಣ್ಯ ವ್ಯಕ್ತಿಗಳನ್ನು ಸೇರಿಸಲಾಗುವುದು ಎಂದು ಸಂಸದ ಕೆ.ಎಚ್.ಮುನಿಯಪ್ಪ ಸೂಚಿಸಿದ್ದರು. ಅಂದು ಸಭೆಯಲ್ಲಿ ಹಾಜರಿದ್ದವರು ಈ ನಿರ್ಧಾರವನ್ನು ಸ್ವಾಗತಿಸಿ ಸಮ್ಮತಿಸಿದ್ದರು.

ಮತ್ತೂಂದು ಸಭೆ: ಸೋಮವಾರ ದಿಢೀರ್‌ ನಡೆದ ಈ ಘಟನಾವಳಿ ಗಮನಿಸಿದ ಸಂಸದ ಕೆ.ಎಚ್.ಮುನಿಯಪ್ಪ ಸೋಮವಾರ ರಾತ್ರಿ ಮತ್ತೇ ತಮ್ಮ ನಿವಾಸದಲ್ಲಿ ನಿಯೋಜಿತ ಟ್ರಸ್ಟಿಗಳು ಹಾಗೂ ಇನ್ನಿತರೇ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿದರು. ಈ ವೇಳೆ ಏಕಾಏಕಿ ದೇಗುಲದ ಬೀಗ ಒಡೆಸಿದ ಡಾ.ಶಿವಪ್ರಸಾದ್‌ರ ವರ್ತನೆಯನ್ನು ಸಂಸದರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

Advertisement

ಯಾವುದೇ ಕಾರಣಕ್ಕೂ ದೇಗುಲವನ್ನು ಒಬ್ಬರ ಆಸ್ತಿಯನ್ನಾಗಿಸಲು ಬಿಡುವುದಿಲ್ಲ. ಸಾರ್ವಜನಿಕರ ಆಸ್ತಿಯನ್ನಾ ಗಿಯೇ ಉಳಿಸಬೇಕು. ಸ್ವಂತ ಆಸ್ತಿ ಮಾಡಿ ಕೊಳ್ಳುವ ಹಾಗೂ ದೇಗುಲದ ಆಸ್ತಿ ಮೇಲೆ ಕಣ್ಣಿಟ್ಟು ಯಾರೇ ಏನೇ ಪ್ರಯತ್ನ ನಡೆಸಿದರೆ ದೇಗುಲವನ್ನು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಮುಜರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ಸೂಚಿಸಬೇಕಾಗುತ್ತದೆ ಎಂದು ಕಠಿಣವಾಗಿ ಎಚ್ಚರಿಸಿದ್ದಾರೆ.

ಈ ವೇಳೆ ಸಂಸದರು ಶ್ರೀಸಾಂಭವಶಿವಮೂರ್ತಿ ನಿಧನದ ಮೊದಲು ಆನಂತರದ ಬೆಳವಣಿಗೆಗಳನ್ನು ಮೆಲುಕು ಹಾಕಿದ್ದಲ್ಲದೆ ಎರಡೂ ಗುಂಪುಗಳು ನಡೆಸುತ್ತಿರುವ ತಗಾದೆ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.

ಶಿವರಾತ್ರಿ ಸಿದ್ಧತೆ: ಇಂದಿನಿಂದ ಆರಂಭವಾಗಿರುವ ಮಾಘಮಾಸ ಮತ್ತು ಶಿವರಾತ್ರಿ ಸಂದರ್ಭಗಳಲ್ಲಿ ವಿಶೇಷ ಪೂಜೆಗೆ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ. ನಿಯೋಜಿತ ಟ್ರಸ್ಟಿಗಳು ಒಟ್ಟಾಗಿ ಕುಳಿತು ಹಿಂದಿನ ಕಾರ್ಯದರ್ಶಿ ಕುಮಾರಿ ಅನುಭವದ ಸಲಹೆ ಮೇರೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕು.

ಟ್ರಸ್ಟಿನ ಹೊಸ ಸದಸ್ಯರು ಯಾವುದೇ ತಗಾದೆ ಮಾಡಿಕೊಳ್ಳದೆ ಶಿವರಾತ್ರಿಗೆ ಒಂದು ವಾರ ಇರುವಂತೆ ಸಭೆ ಸೇರಬೇಕು. ಶಿವರಾತ್ರಿಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತಂತೆ ಚರ್ಚಿಸಿ ಯಾವುದೇ ಲೋಪವಾಗದಂತೆ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಸಿದ್ಧತೆ ಕೈಗೊಳ್ಳಬೇಕು. ಈ ವೇಳೆ ಟ್ರಸ್ಟಿಗಳಾಗುವವರ ಜೊತೆಗೆ ಮುಖಂಡ ರಾದ ಬಿಸೇಗೌಡ ಹಾಗೂ ರಾಮಪ್ರಸಾದ್‌, ವಕೀಲ ಶ್ರೀನಿವಾಸ್‌ ಇದ್ದರು.

ಸಂಸದರ ಸಭೆಯಲ್ಲಿ ಕೈಗೊಂಡ ತೀರ್ಮಾನ
* ದೇಗುಲ ಮೇಲುಸ್ತುವಾರಿಯನ್ನು ಡಾ.ಶಿವ ಪ್ರಸಾದ್‌ ಹಾಗೂ ಕುಮಾರಿ ಅಲ್ಲದೆ ಶ್ರೀಗಳ ಸಹೋದರರಾಗಿರುವ ನಾರಾಯಣಮೂರ್ತಿ ಅವರು ಒಂದು ತಿಂಗಳ ಮಟ್ಟಿಗೆ ನೋಡಿಕೊಳ್ಳಬೇಕು.

* ಬುಧವಾರ ಫೆ.6 ರಿಂದ ದೇಗುಲದಲ್ಲಿ ಬೀಗ ತೆಗೆಸಿ ಸಾಂಗವಾಗಿ ಪೂಜೆ ಪುನಸ್ಕಾರಗಳು ನಡೆಯುವಂತೆ ಮಾಡಬೇಕು.

* ದೇಗುಲಕ್ಕೆ ಹೊಸದಾಗಿ ಸೇರಿಸಿಕೊಂಡಿರುವ ಇಬ್ಬರು ವ್ಯಕ್ತಿಗಳನ್ನು ಕೆಲಸದಿಂದ ತೆಗೆದು ಹಾಕ ಬೇಕು. ಈ ಹಿಂದೆ ಈ ಇವರ ಸ್ಥಾನದಲ್ಲಿ ಯಾರು ಕೆಲಸ ಮಾಡುತ್ತಿದ್ದರೋ ಅವರನ್ನೇ ಮುಂದುವರಿಸಬೇಕು.

* ಟ್ರಸ್ಟ್‌ ಬೈಲಾ ರೂಪಿಸಿ ಟ್ರಸ್ಟಿನ ಬ್ಯಾಂಕ್‌ ಖಾತೆ ಯನ್ನು ಡಾ.ಶಿವಪ್ರಸಾದ್‌ ಹಾಗೂ ಕುಮಾರಿ ಜಂಟಿ ಹೆಸರಿನಲ್ಲಿ ತೆರೆಯಬೇಕು.

* ದೇಗುಲದ ಪ್ರತಿ ನಿತ್ಯದ ಆದಾಯವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿ ಖರ್ಚುಗಳನ್ನು ಬ್ಯಾಂಕ್‌ ಖಾತೆ ಮೂಲಕ ನಿರ್ವಹಿಸಿ ಲೆಕ್ಕ ಇಡಬೇಕು.

* ಒಂದು ತಿಂಗಳ ನಂತರ ದೇಗುಲದ ಆದಾಯ, ಖರ್ಚು ವೆಚ್ಚಗಳನ್ನು ಪರಿಶೀಲಿಸುವ ಮೂಲಕ ಟ್ರಸ್ಟಿಗಳ ಜವಾಬ್ದಾರಿಗಳನ್ನು ದೇಗುಲ ಮೇಲುಸ್ತುವಾರಿ ಹಾಗೂ ನಿರ್ವಹಣೆ ಕುರಿತಂತೆ ನಿರ್ಧರಿಸಲಾಗುವುದು.

* ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next