Advertisement

ಅಂಕತ್ತಡ್ಕ-ಮಂಜುನಾಥನಗರ ರಸ್ತೆ ಅಭಿವೃದ್ಧಿಗೆ ಮುಹೂರ್ತ

10:08 PM Oct 22, 2019 | mahesh |

ಸವಣೂರು: ಬೆಳಂದೂರು ಜಿ.ಪಂ. ವ್ಯಾಪ್ತಿಯ ಸವಣೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಅಂಕತ್ತಡ್ಕ- ಬಂಬಿಲ- ಮಂಜುನಾಥನಗರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕೊನೆಗೂ ದಿನ ಕೂಡಿ ಬಂದಿದೆ. ಆದರೆ ರಸ್ತೆ ಅಭಿವೃದ್ಧಿ ಆಗುವವರೆಗೆ ಸಮಸ್ಯೆ ತಪ್ಪಿದ್ದಲ್ಲ.

Advertisement

ಇದು 3ನೇ ಬಾರಿಗೆ ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಅವರ ಹುಟ್ಟೂರಿನ ರಸ್ತೆ. ಹೀಗಾಗಿ, ಈ ಭಾಗದ ಜನರು ನಮ್ಮ ಊರಿನವರೇ ಸಂಸದರಾಗಿದ್ದರೂ ರಸ್ತೆ ಸುಧಾರಣೆ ಆಗಿಲ್ಲ ಎನ್ನುವ ಅಳಲು ತೋಡಿಕೊಳ್ಳುತ್ತಿದ್ದರು.

ಇದಕ್ಕಾಗಿ ಲೋಕೋಪಯೋಗಿ ಇಲಾಖೆಯ 5-50 ಅಪೆಂಡಿಕ್ಸ್‌-ಇ ಯೋಜನೆಯ ಮೂಲಕ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಳೆದ ಫೆ. 17ರಂದು ಸಂಸದ ನಳಿನ್‌ ಕುಮಾರ್‌ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಲೋಕಸಭಾ ಚುನಾವಣೆ ಘೋಷಣೆಯಾಯಿತು. ನೀತಿ ಸಂಹಿತೆಯ ಕಾರಣದಿಂದ ಕಾಮಗಾರಿ ಆರಂಭವಾಗಲಿಲ್ಲ. ಬಳಿಕ ರಾಜ್ಯ ಸರಕಾರವೂ ಬದಲಾವಣೆಯಾಯಿತು. ಕೆಲವು ತಾಂತ್ರಿಕ ಕಾರಣಗಳಿಂದ ರಸ್ತೆ ಅಭಿವೃದ್ಧಿ ಆಗದೇ ಹಾಗೆಯೇ ಉಳಿದಿತ್ತು. ಜನರು ಅದೇ ಕೆಸರುಮಯ ರಸ್ತೆಯಲ್ಲೇ ಸಾಗಬೇಕಾಗಿತ್ತು. ಈ ರಸ್ತೆ ಇಂಗು ಗುಂಡಿಯಂತಹ ಹೊಂಡಗಳಿಂದ ಕೂಡಿತ್ತು. ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಭಾಗದ ಪ್ರಮುಖ ಸಂಪರ್ಕ ರಸ್ತೆಯಾಗಿರುವುದರಿಂದ ಈ ರಸ್ತೆಯು ಬೆಳ್ಳಾರೆ, ಮಾಡಾವು, ಕುಂಬ್ರ ಪೇಟೆಯನ್ನು ಹಾಗೂ ಅಂಕತ್ತಡ್ಕ ಭಾಗದವರು ಸವಣೂರು ಸಂಪರ್ಕಿಸಲು ಇದೇ ರಸ್ತೆಯನ್ನು ಬಳಸುತ್ತಿದ್ದಾರೆ.

ತಾತ್ಕಾಲಿಕ ದುರಸ್ತಿಯಲ್ಲೇ ತೃಪ್ತಿ
ಮಳೆಗಾಲದಲ್ಲಿ ಈ ರಸ್ತೆಯೂ ಸಂಪೂರ್ಣವಾಗಿ ಹದೆಗೆಟ್ಟು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿತ್ತು. ಪ್ರತೀ ಬಾರಿಯೂ ಮಳೆಗಾಲದಲ್ಲಿ ಊರಿನ ಪ್ರಮುಖರು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಕೆಂಪು ಕಲ್ಲು, ದಪ್ಪ ಮರಳು ತಂದು ಹೊಂಡ ಮುಚ್ಚಿಸಿ, ರಸ್ತೆ ದುರಸ್ತಿಪಡಿಸುವ ಮೂಲಕ ಸಾರ್ವಜನಿಕರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಅವರ ಮುಂದಾಳತ್ವದಲ್ಲಿಯೂ ದುರಸ್ತಿ ಮಾಡಲಾಗಿತ್ತು.

2 ಕೋಟಿ ರೂ. ಬಿಡುಗಡೆ
ಈ ಭಾಗದ ಪ್ರಮುಖರ ಹಾಗೂ ಸಾರ್ವಜನಿಕರ ಬೇಡಿಕೆಯಂತೆ ಸಂಸದ ನಳಿನ್‌ ಕುಮಾರ್‌ ಅವರ ಶಿಫಾರಸಿನಂತೆ ಶಾಸಕ ಎಸ್‌. ಅಂಗಾರ ಅವರು 2 ಕೋಟಿ ರೂ. ಅನುದಾನವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಬಿಡುಗಡೆ ಮಾಡಿದ್ದಾರೆ.

Advertisement

ಪ್ರಧಾನ ಮಂತ್ರಿ ಗ್ರಾಮ ಸಡಕ್‌
ಈ ರಸ್ತೆಯ ಅಂಕತ್ತಡ್ಕದಿಂದ ಬೇರಿಕೆ ತಿರುವಿನವರೆಗೆ ಈ ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಗ್ರಾಮ ಸಡಕ್‌ ಯೋಜನೆಯಲ್ಲಿ ಡಾಮರು ಕಾಮಗಾರಿ ನಡೆಸಲಾಗಿತ್ತು. ಬಂಬಿಲ ಕ್ರಾಸ್‌ನಿಂದ ಮಂಜುನಾಥನಗರ ವರೆಗೆ ಸುವರ್ಣ ಗ್ರಾಮ ಯೋಜನೆ, ಸಂಸದರ ಅನುದಾನದಲ್ಲಿ ಡಾಮರು ಹಾಕಲಾಗಿತ್ತು. ಬೇರಿಕೆ ತಿರುವಿನಿಂದ ಮಂಜುನಾಥನಗರದ ವರೆಗಿನ ರಸ್ತೆ ಡಾಮರು ಆಗದೆ ಹಾಗೆಯೇ ಉಳಿದುಕೊಂಡಿತ್ತು.

ಅಭಿವೃದ್ಧಿಗೆ ಪೂರಕ
ಈ ರಸ್ತೆ ಅಭಿವೃದ್ಧಿಯಾದರೆ ಗ್ರಾಮದ ಬೆಳವಣಿಗೆಗೆ ಪೂರಕವಾಗಲಿದೆ. ಪಾಲ್ತಾಡಿ ಗ್ರಾಮಕ್ಕೆ ಸವಣೂರು ಗ್ರಾ.ಪಂ. ಹಾಗೂ ಕಡಬ ನಾಡ ಕಚೇರಿಯಾದರಿಂದ ಈ ರಸ್ತೆಯ ಮೂಲಕವೇ ಹಾದು ಹೋಗಬೇಕಾಗಿದೆ. ರಸ್ತೆಯ ಸಮಸ್ಯೆಯಿಂದ ಸುತ್ತು ಬಳಸಿ ಹೋಗುವಂತಾಗಿತ್ತು. ಮಂಜುನಾಥ ನಗರದ ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವವರಿಗೂ ಅನುಕೂಲವಾಗಲಿದೆ. ಜತೆಗೆ ಮಂಜುನಾಥನಗರದಿಂದ ಬೆಳ್ಳಾರೆ, ಮಾಡಾವು, ಪುತ್ತೂರು ಹೋಗುವವರಿಗೂ ಅನುಕೂಲವಾಗಲಿದೆ.

ಪರಿಶೀಲನೆ
ಕಾಮಗಾರಿಗೆ ಪೂರ್ವಭಾವಿಯಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಅ. 17ರಂದು ಪರಿಶೀಲನೆ ನಡೆಸಿದರು. ಇದರಿಂದಾಗಿ ಈ ಭಾಗದ ಜನರ ಪ್ರಮುಖ ಬೇಡಿಕೆ ಈಡೇರಲಿದೆ.

ಬಸ್‌ ಬೇಡಿಕೆ
ಈ ರಸ್ತೆಯಲ್ಲಿ ಸರಕಾರಿ ಬಸ್‌ ಓಡಿಸುವಂತೆ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಬಳಿಕ ಗ್ರಾ.ಪಂ. ಮೂಲಕ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಗೂ ಮನವಿ ಮಾಡಲಾಗಿತ್ತು. ರಸ್ತೆಯ ಸಮಸ್ಯೆಯಿಂದ ಬಸ್‌ ಓಡಾಟಕ್ಕೆ ಕಷ್ಟಕರವಾಗುವ ಸಾಧ್ಯತೆಯಿಂದ ಬಸ್‌ ಓಡಾಟ ಪ್ರಕ್ರಿಯೆಯೂ ಅಲ್ಲಿಗೆ ನಿಂತಿತ್ತು. ಈಗ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡು ಟೆಂಡರ್‌ ಪ್ರಕ್ರಿಯೆಯಲ್ಲಿರುವುದರಿಂದ ರಸ್ತೆಯ ಅಭಿವೃದ್ಧಿಯಾಗಲಿರುವುದರಿಂದ ಬಸ್‌ ಬೇಡಿಕೆ ಮತ್ತೂಮ್ಮೆ ಜೀವ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next