Advertisement
ಮಾನಸಿಕ ಮತ್ತು ದೈಹಿಕ ಹಿಂಸೆಗಳ ನಂತರ ವಿರೋಧಿಗಳು ತನ್ನನ್ನು ಕೊಲ್ಲುವ ಸಂಚನ್ನೂ ಹೆಣೆದಿರುವುದನ್ನು ಅರಿತ ಪೈಗಂಬರರು ಸತ್ಯ, ಮಾನವೀಯತೆ ಹಾಗೂ ನ್ಯಾಯದ, ಶಾಂತಿಯ ಜೀವನವ್ಯವಸ್ಥೆಯ ಸ್ಥಾಪನೆಗಾಗಿ ಅಂತಿಮವಾಗಿ ಮನೆ ಹಾಗೂ ನಾಡನ್ನೂ ತೊರೆದು ತ್ಯಾಗ ಬಲಿದಾನಗಳ ಅದ್ವಿತೀಯ ಉದಾಹರಣೆಯಾಗಿ ಮೆಕ್ಕಾದಿಂದ ವಲಸೆ ಹೋದರು. ತನ್ನ ಮೇಲಿನ ಅತೀವ ಪ್ರಾಮಾಣಿಕತೆಯ ವಿಶ್ವಾಸದಿಂದ ನೀಡಿದ್ದ ಶತ್ರು ಸಮೂಹದ್ದೇ ಅಮಾನತುಗಳನ್ನು ಸ್ವತ್ತುದಾರರಿಗೆ ಪಾವತಿಸುವಂತೆ ಸಹಕಾರಿಯಾಗಿದ್ದ ಅಲಿಯವರಿಗೆ ಒಪ್ಪಿಸುತ್ತಾರೆ.
Related Articles
Advertisement
ಮೋಸಸ್ ಮತ್ತು ಸಂಗಾತಿಗಳನ್ನು ಸಮುದ್ರವನ್ನು ಸೀಳಿ ದೇವನು ಪಾರುಗೊಳಿಸಿದುದು
ಇನ್ನೊಂದು ಪ್ರಮುಖ ಘಟನೆಯೂ ಈ ತಿಂಗಳಲ್ಲೇ ನಡೆದಿದೆ. ಈಜಿಪ್ತ್ ನ ಫರೋಹ ಬನೀ ಇಸ್ರಾಈಲ್ ಸಮುದಾಯವನ್ನು ತನ್ನ ಗುಲಾಮರಾಗಿಸಿಕೊಂಡಿದ್ದನು. ಪ್ರವಾದಿ ಮೂಸೆಸ್ ಅವರಿಗೆ ನ್ಯಾಯಒದಗಿಸಲಿಕ್ಕಾಗಿ ಆ ಸರ್ವಾಧಿಕಾರಿಯೊಂದಿಗೆ ದೀರ್ಘಕಾಲದವರೆಗೆ ಹೋರಾಡಿಕೊಂಡು ಬಂದಿದ್ದರು. ದಬ್ಬಾಳಿಕೆ ಹೆಚ್ಚಾದಾಗ ಬನೀ ಇಸ್ರಾಈಲ್ ಸಮುದಾಯವನ್ನು ಜೊತೆಗೂಡಿಸಿ ಮೋಸಸ್ ಈಜಿಪ್ತ್ ಬಿಟ್ಟು ಹೊರಡುತ್ತಾರೆ.
ಫರೋಹ ಸೇನೆಯೊಂದಿಗೆ ಬೆನ್ನಟ್ಟಿಕೊಂಡು ಬಂದಾಗ ಸಮುದ್ರ ಎದುರಾಗುತ್ತದೆ. ಮೋಸಸ್ ಮತ್ತು ಸಂಗಾತಿಗಳಿಗೆ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಪರಿಸ್ಥಿತಿ. ಆಗ ಮೋಸಸ್ ರಿಗೆ ಕೈಯಲ್ಲಿರುವ ಲಾಠಿಯನ್ನು ಸಮುದ್ರಕ್ಕೆ ಸ್ಪರ್ಶಿಸುವಂತೆ ದೇವನಿಂದ ಆದೇಶವಾಗುತ್ತದೆ. ಅದ್ಭುತ ಪವಾಡವಾಗಿ ಸಮುದ್ರದೊಳಗೆ ಹೋಳಾಗಿ ರಾಜರಸ್ತೆಯೇ ನಿರ್ಮಾಣವಾಗುತ್ತದೆ. ಆಗ ಮೋಸಸ್ ಮತ್ತು ಸಂಗಾತಿಗಳು ಆ ದಾರಿಯಲ್ಲಿ ಸಾಗಿ ಇನ್ನೊಂದು ದಡ ಸೇರುತ್ತಾರೆ. ಹಿಂಬಾಲಿಸಿ ಬಂದ ಫರೋಹ ಮತ್ತು ಸೇನೆ ಸಮುದ್ರದ ಮಧ್ಯ ತಲುಪಿದಾಗ ಸಮುದ್ರ ಒಂದಾಗುತ್ತದೆ.
ಕುರಾನ್ ಈ ರೀತಿ ಹೇಳುತ್ತದೆ: “ನಾವು ಬನೀಇಸ್ರಾಈಲರನ್ನು ಸಮುದ್ರ ದಾಟಿಸಿ ಕೊಂಡೊಯ್ದೆವು. ಅನಂತರ ಫಿರೌನನೂ ಅವನ ಸೇನೆಯೂ ದಂಗೆ ವಿದ್ವೇಶಗಳನ್ನು ಉದ್ದೇಶವಾಗಿರಿಸಿಕೊಂಡು ಅವರನ್ನು ಬೆನ್ನಟ್ಟಿದರು. ಕೊನೆಗೆ ಫಿರೌನನು ಮುಳುಗುತ್ತಿರುವಾಗ ಹೀಗೆಂದನು, ‘ಬನೀಇಸ್ರಾಈಲರು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು ನಾನು ಒಪ್ಪಿಕೊಂಡೆನು ಮತ್ತು ನಾನೂ ಶರಣಾಗುವವರಲ್ಲಾಗಿರುತ್ತೇನೆ. ‘ಈಗ ವಿಶ್ವಾಸವಿಡುತೀಯಾ? ವಸ್ತುತಃ ಇದಕ್ಕೆ ಮುಂಚಿನವರೆಗೂ ನೀನು ಆಜ್ಞೋಲ್ಲಂಘನೆ ಮಾಡುತ್ತಲಿದ್ದೆ ಮತ್ತು ಕಿಡಿಗೇಡಿಗಳಲ್ಲಾಗಿದ್ದೆ. ನಿಶ್ಚಯವಾಗಿಯೂ ನಮ್ಮ ನಿದರ್ಶನಗಳ ಬಗ್ಗೆ ಅಲಕ್ಷರಾಗಿರುವವರು ಬಹುಸಂಖ್ಯೆಯಲ್ಲಿದ್ದರೂ ನೀನು ಮುಂದಿನ ತಲೆಮಾರುಗಳಿಗೆ ಎಚ್ಚರಿಕೆಯ ದ್ಯೋತಕವಾಗಿರುವಂತೆ ನಾವಿನ್ನು ನಿನ್ನ ಶವವನ್ನು ಮಾತ್ರ ಸುರಕ್ಷಿತರಾಗಿಸುವೆವು (10 : 90 – 92). ಈಜಿಪ್ತ್ ನ ವಸ್ತುಸಂಗ್ರಹದಲ್ಲಿ ಮೃತದೇಹವು ಸುರಕ್ಷಿತವಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಸಿ ಅನ್ಯಾಯ ದೌರ್ಜನ್ಯ ಮಿತಿಮೀರಿದಾಗ ಇಂತಹ ಪರಿಣಾಮಗಳನ್ನು ಚರಿತ್ರೆಯಲ್ಲಿ ಕಾಣಬಹುದಾಗಿದೆ.
ಯಹೂದಿಯರು ಫರೋಹನ ದಾಸ್ಯದಿಂದ ಮತ್ತು ಪವಾಡಸದೃಷವಾಗಿ ಪಾರುಗೊಳಿಸಿದುದರ ಕೃತಜ್ಞತೆಯಾಗಿ ಒಂದು ದಿನದ ಉಪವಾಸ ಆಚರಿಸುತ್ತಾರೆಂದು ಪ್ರವಾದಿಯವರಿಗೆ ತಿಳಿದಾಗ, ಹಾಗಾದರೆ ನಾವು ಎರಡು ದಿನ ಉಪವಾಸ ಅಚರಿಸೋಣ, ಮೋಸಸ್ ರು ನಮಗೆ ಹೆಚ್ಚಿನ ಪ್ರಸ್ತುತರೆಂದರು. ವಿವಿಧ ವಿಶೇಷತೆಗಳಿರುವುದರಿಂದ ಆ ದಿವಸಗಳ ಸ್ಮರಣೆಗಾಗಿ ಮುಸ್ಲಿಮರು ಉಪವಾಸವಿಡುತ್ತಾರೆ. ರಮಝಾನ್ ನ ಮುಂಚೆ ಆಶೂರದ ಈ ಉಪವಾಸ ಕಡ್ಡಾಯವಾಗಿತ್ತು.
ಎಲ್ಲೆಲ್ಲಿ ಅಶಾಂತಿ ಇದೆಯೋ ಅದರ ಏಕೈಕ ಕಾರಣ ಅನ್ಯಾಯವೆಂಬುದನ್ನು ಸ್ಪಷ್ಟ ಮತ್ತು ವ್ಯಕ್ತವಾಗಿ ಗಮನಿಸಬಹುದಾಗಿದೆ. ನ್ಯಾಯದ ಬುನಾದಿ ಮೇಲಿರುವ ಜೀವನ ವ್ಯವಸ್ಥೆಯು ಅಖಂಡ ಭೂಮಂಡಲ ಮತ್ತು ಅದರಲ್ಲಿರುವ ಚರಾಚರಗಳನ್ನು ಸೃಷ್ಟಿಸಿದ ಏಕೈಕ ಒಡೆಯ ನೀಡಿರುವ ಸಮಗ್ರ ಜೀವನ ಪದ್ಧತಿಯಾಗಿದೆ. ಅನ್ಯಾಯವನ್ನು ಅಳಿಸಿ ನ್ಯಾಯದ, ಮಾನವೀಯತೆ, ಶಾಂತಿಯ ಯಶಸ್ವೀ ಜೀವನವ್ಯವಸ್ಥೆಯ ಸ್ಥಾಪನೆ ಎಲ್ಲಾ ಪ್ರವಾದಿಗಳ ಮತ್ತು ಮಹಾಪುರುಷರುಗಳ ಅಭಿಯಾನವಾಗಿತ್ತು. ಶ್ರೇಷ್ಠ ಉದ್ದೇಶಕ್ಕಾಗಿ ತ್ಯಾಗ ಬಲಿದಾನಗಳು ಅನಿವಾರ್ಯವೆಂಬುದನ್ನು ಆದರ್ಶ ನಾಯಕರ ಮಾದರಿಯಾಗಿದೆಯೆಂಬುದು ಇತ್ತೀಚೆಗಷ್ಟೇ ಹಿಜರಿಶಕೆಯ ಆಂತ್ಯದಲ್ಲಿ ಕಳೆದ ಬಕ್ರೀದ್ ನ ಪ್ರವಾದಿ ಅಬ್ರಹಾಮ್ ಮತ್ತು ಇಸ್ಮಾಯಿಲ್ ರ ಜೀವನದ ಸಂದೇಶದಲ್ಲೂ ಸ್ಮರಿಸಿದೆವು. ಹಿಜರಿಶಕೆಯ ಆರಂಭವೂ ಅಂತ್ಯವೂ ತ್ಯಾಗ ಬಲಿದಾನದ ಬದ್ಧತೆಯ ಆದರ್ಶವನ್ನು ನಮಗೆ ನೀಡುತ್ತದೆ. ಸಮಾಜದ ನಿರ್ಮಾಣದಲ್ಲಿ, ನ್ಯಾಯದ, ಮಾನವೀಯತೆಯ, ಶಾಂತಿಯ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ತಂತಮ್ಮ ಶಕ್ತ್ಯಾನುಸಾರ ತ್ಯಾಗಬಲಿದಾನದಿಂದ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕಾಗಿದೆ.
ಆರೆಮ್ ಸಿದ್ದೀಕ್, ಉಡುಪಿ