ಮುಗಳಖೋಡ: ಜ್ಞಾನ, ಭಕ್ತಿ ಇವೆರಡು ಕೂಡಲಸಂಗಮವಾಗಿದ್ದು, ಮಾನವ ಬದುಕಿನಲ್ಲಿ ಗುರುವಿನ ಅನುಗ್ರಹ ಪಡೆದು ಭಕ್ತಿ ಮಾರ್ಗದಲ್ಲಿ ನಡೆಯಬೇಕು ಎಂದು ಡಾ.ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಸುಕ್ಷೇತ್ರ ಬೃಹನ್ಮಠದಲ್ಲಿ ಯಲ್ಲಾಲಿಂಗೇಶ್ವರ ಮಹಾರಾಜರ 34ನೇ ಪುಣ್ಯಾರಾಧನೆ ನಿಮಿತ್ತ ನಡೆದ ಯಲ್ಲಾಲಿಂಗೇಶ್ವರ, ಸಿದ್ಧಲಿಂಗೇಶ್ವರ ಹಾಗೂ ಸಿದ್ಧರಾಮೇಶ್ವರ ಕರ್ತೃ ಗದ್ದುಗೆಗೆ ಮಹಾಭಿಷೇಕ, ಶ್ರೀಗಳಿಗೆ ಪುಷ್ಪವೃಷ್ಟಿ, ಸಿಂಹಾಸನರೂಢ ಸುವರ್ಣ ಕಿರೀಟಧಾರಣೆ, ಪಾದಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಚಿಂತೆ ಮಾಡುವುದನ್ನು ಬಿಟ್ಟು ದೇವಸ್ಥಾನಗಳಲ್ಲಿ ಭಕ್ತಿಯಿಂದ ನಡೆದುಕೊಳ್ಳುವ ಕರ್ತವ್ಯ ಮೊದಲಾಗಬೇಕು. ಮನುಷ್ಯನ ಭಾವನೆಗಳನ್ನು ಪವಿತ್ರಗೊಳಿಸಿ ಅಂತರಂಗ ಶುದ್ಧೀಕರಿಸಲು ಸದ್ಗುರುವಿನ ಮಾರ್ಗದರ್ಶನ ಮುಖ್ಯವಾಗಿದೆ ಎಂದರು.
ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಜೀವನಕ್ಕೆ ಮುಕ್ತಿ ಸಿಗುತ್ತದೆ. ನಾವು ಜ್ಞಾನ ಮಾಡುವ ಕಾಲಕ್ಕೆ ಮನಸ್ಸು ಪರಿ ಶುದ್ಧವಾಗಿರಬೇಕು. ಮಹಾತ್ಮರ ವಚನಗಳು ನಮ್ಮನ್ನು ಸತ್ಯದ ಮಾರ್ಗಕ್ಕೆ ಒಯ್ಯುತ್ತವೆ. ಆದರೆ ಬದುಕಿನ ಬಹುತೇಕ ಘಟ್ಟಗಳು ಕಷ್ಟ-ಸುಖಗಳಿಂದ ಕೂಡಿರುತ್ತವೆ. ಸುಖ-ದುಃಖವನ್ನು ಸಮನಾಗಿ ಸ್ವೀಕರಿಸುವ ಧೈರ್ಯ ಹಾಗೂ ದಾರಿ ತೋರಲು ಗುರುವಿನ ಅಗತ್ಯತೆ ಪ್ರತಿಯೊಬ್ಬರಿಗೂ ಇದೆ ಎಂದರು. ಈ ವೇಳೆ ಜೇವರ್ಗಿ ಸುಭಾಷ ಗುತ್ತೇದಾರ, ಕುಡಚಿ ಶಾಸಕ ಪಿ.ರಾಜೀವ್, ಮಾಜಿ ಶಾಸಕ ಅಜಯಸಿಂಗ್, ರಾಜಣ್ಣ, ಪ್ರವಚನಕಾರರು, ಸಾಧು ಶರಣರು, ಸಂತರು, ಅನೇಕ ಭಕ್ತರು ಪಾಲ್ಗೊಂಡಿದ್ದರು.