ಶ್ರೀನಗರ: ನಟ ಅಮೀರ್ ಖಾನ್ ಮುಖ್ಯ ಪಾತ್ರದಲ್ಲಿರುವ ದಂಗಲ್ ಚಿತ್ರದಲ್ಲಿ ಗೀತಾ ಫೊಗಟ್ ಪಾತ್ರದಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿರುವ ಕಾಶ್ಮೀರಿ ಹುಡುಗಿ ಜೈರಾ ವಾಸಿಂ ಈಗ ವಿವಾದಕ್ಕೆ ತುತ್ತಾಗಿದ್ದಾರೆ. ದಂಗಲ್ ಯಶಸ್ಸಿನ ಹಿನ್ನೆಲೆಯಲ್ಲಿ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ಜೈರಾ ಭಾನುವಾರ ಭೇಟಿ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಜೈರಾ ಕ್ಷಮೆಯಾಚನೆ ಮಾಡಿದ್ದಾರೆ. ಇದು ಮತ್ತೂಂದು ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜೈರಾ ಕ್ಷಮೆಯಾಚಿಸಿದ್ದಾರೆ. “ನನ್ನನ್ನು ಆದರ್ಶ ಎಂದು ಬಿಂಬಿಸಲಾಗುತ್ತಿದೆ. ಅದು ತಪ್ಪು. ನಾನೂ ಯಾರಿಗೂ ಆದರ್ಶವಲ್ಲ ಹಾಗೆಯೇ ನನ್ನನ್ನು ಯಾರೂ ಅನುಸರಿಸುವ ಅಗತ್ಯವಿಲ್ಲ. ನನ್ನ ಇತ್ತೀಚೆ ಗಿನ ಕ್ರಮಗಳಿಂದ ಅಥವಾ ನಾನು ಕೆಲವು ವ್ಯಕ್ತಿಗಳನ್ನು ಇತ್ತೀಚೆಗೆ ಭೇಟಿ ಯಾಗಿದ್ದರಿಂದ ಹಲವರಿಗೆ ನೋವಾ ಗಿದೆ. ಆದ್ದರಿಂದ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ’ ಎಂದು 16 ವರ್ಷದ ನಟಿ ಹೇಳಿದ್ದಾರೆ.
ಮುಖ್ಯಮಂತ್ರಿಯನ್ನು ಭೇಟಿ ಮಾಡಿ ದ್ದಕ್ಕೆ ಆಕೆ ಕ್ಷಮೆ ಕೇಳಿದ್ದು ಹಲವರನ್ನು ಕೆರಳಿಸಿದೆ. ಆಕೆಯ ಮೇಲೆ ಒತ್ತಡ ಹೇರಿ ಕೆಲವು ಉಗ್ರಗಾಮಿ ಶಕ್ತಿಗಳು ಕ್ಷಮೆ ಕೇಳುವಂತೆ ಮಾಡಿರಬಹುದೆಂದು ಊಹಿಸಲಾಗಿದೆ. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಆಕೆಯನ್ನು ಕ್ಷಮೆ ಕೇಳುವಂತೆ ಒತ್ತಾಯಿಸುವುದು ತಪ್ಪು ಎಂದಿದ್ದಾರೆ. ಜೈರಾ ಪಾತ್ರಕ್ಕೆ ಸ್ಫೂರ್ತಿಯಾಗಿರುವ ಕಾಮನ್‌ವೆಲ್ತ್ ಚಿನ್ನ ವಿಜೇತ ಕುಸ್ತಿಪಟು ಗೀತಾ ಫೊಗಟ್ ಕೂಡ ಜೈರಾ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬಾಲಿವುಡ್‌ನ ಹಲವರು ಜೈರಾ ಬೆಂಬಲಕ್ಕೆ ಧಾವಿಸಿದ್ದಾರೆ. ಆದರೆ ನನ್ನ ಮೇಲೆ ಕ್ಷಮೆಯಾಚನೆಗೆ ಯಾರೂ ಒತ್ತಡ ಹೇರಿಲ್ಲ. ಸ್ವಂತ ವಿವೇಚನೆಯಿಂದ ಕ್ಷಮೆಯಾಚಿಸಿದ್ದೇನೆ ಎಂದು ಜೈರಾ ಸ್ಪಷ್ಟಪಡಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಜೈರಾ ಹೇಳಿದ್ದಿಷ್ಟು: “ನಾನು ಯಾರ್ಯಾರನ್ನು ಗೊತ್ತಿಲ್ಲದೇ ನೋಯಿಸಿದ್ದೇನೋ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಅವರ ಭಾವನೆಗಳನ್ನು ನಾನು ಅರ್ಥ ಮಾಡಿ ಕೊಳ್ಳುತ್ತೇನೆ. ವಿಶೇಷವಾಗಿ ಕಳೆದ 6 ತಿಂಗಳಿಂದ ಕಣಿವೆಯಲ್ಲಿ ಏನು ನಡೆಯುತ್ತಿದೆಯೋ ಆ ಹಿನ್ನೆಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಿದ್ದೇನೆ.’ “ಆದರೆ ಕೆಲವು ಸಂದರ್ಭಗಳಲ್ಲಿ ನಮ್ಮ ನಿಯಂತ್ರಣ ಮೀರಿ ಘಟನೆಗಳು ನಡೆಯುತ್ತವೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆಂಬ ಭರವಸೆ ಯಿದೆ. ನಾನು ಕೇವಲ 16 ವರ್ಷದ ಹುಡುಗಿ. ನನ್ನನ್ನು ಹಾಗೆಯೇ ನೀವು ಪರಿಗಣಿಸಬೇಕು. ನಾನು ಮಾಡಿದ್ದಕ್ಕೆ ಕ್ಷಮೆಯಿರಲಿ, ಆದರೆ ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿಲ್ಲ. ಇಲ್ಲಿಂದ ನಾನು ವಾದಗಳನ್ನು ಆರಂಭಿಸಲು ಬಯಸುತ್ತಿಲ್ಲ. ಇದು ಕೇವಲ ನನ್ನ ಕಡೆಯಿಂದ ನೀಡಿರುವ ತಪ್ಪೊಪ್ಪಿಗೆ.’