Advertisement

ರಸ್ತೆ ಕಾಮಗಾರಿ ಕ‌ಳಪೆ-ಆರೋಪ

04:43 PM May 20, 2019 | Team Udayavani |

ಮುದಗಲ್ಲ: ಸಮೀಪದ ನಾಗಲಾಪುರ ಗ್ರಾಪಂ ವ್ಯಾಪ್ತಿಯ ನಾಗಲಾಪುರ-ಹಡಗಲಿ ಮುಖ್ಯ ರಸ್ತೆಯಿಂದ ಕನ್ನಾಳ ಹಡಗಲಿ ಮಾರ್ಗದವರೆಗೆ ನಿರ್ಮಿಸಿದ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

2018-19ನೇ ಸಾಲಿನ ನರೇಗಾ ಕನ್ವರ್ಜೆನ್ಸಿ ಕಾಮಗಾರಿಯಲ್ಲಿ ಸುಮಾರು 8 ಲಕ್ಷ ರೂ. ಮಂಜೂರಾಗಿದೆ. ಶಾಸಕ ಡಿ.ಎಸ್‌. ಹೂಲಗೇರಿ ಹಿಂಬಾಲಕರು ಕಾಮಗಾರಿ ನಿರ್ವಹಿಸಿದ್ದಾರೆ. ಇದರಲ್ಲಿ ನರೇಗಾ ಯೋಜನೆಯಡಿ ಶೇ.90, ಶಾಸಕರ ಅನುದಾನದಡಿ ಶೇ.10ರಷ್ಟು ಅನುದಾನ ಒಗ್ಗೂಡಿಸಿ ಪಂಚಾಯತ ರಾಜ್‌ ಇಲಾಖೆಯಲ್ಲಿ ಎನ್‌ಎಂಆರ್‌ ಅಳವಡಿಸುವ ಮೂಲಕ ಕಾಮಗಾರಿ ನಿರ್ವಹಿಸಲಾಗಿದೆ. ಹೊಲದಿಂದ ಹೊಲಕ್ಕೆ ಹೋಗುವ ರಸ್ತೆ ಇದಾಗಿದೆ. ಅಂದಾಜು ಪತ್ರಿಕೆಯಲ್ಲಿರುವಂತೆ ರಸ್ತೆಯ ಎರಡೂ ಬದಿಯಲ್ಲಿ ಟ್ರಂಚ್ ಹಾಕಿ ರಸ್ತೆ ಎತ್ತರಿಸಬೇಕು. ನಂತರ ಮಣ್ಣು ಹಾಕಿ, ನೀರು ಸಿಂಪಡಿಸಿ ರೂಲರ್‌ ಹಾಯಿಸಬೇಕು. ಆದರೆ ಒಂದು ದಿನ 1 ಜೆಸಿಬಿ, 4 ಟ್ರ್ಯಾಕ್ಟರ್‌ ಮೂಲಕ 150 ಟ್ರಿಪ್‌ ಮಣ್ಣು ಹಾಕಿಸಿ ಮರಂ ಅರವಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸವಾಗಿಲ್ಲ. ಕಚ್ಚಾ ರಸ್ತೆ ಅಕ್ಕಪಕ್ಕದಲ್ಲಿ ರೈತರು ತಮ್ಮ ಹೊಲದಲ್ಲಿನ ಕಲ್ಲು ಹಾಕಿದ್ದು ಹಾಗೆಯೇ ಉಳಿದಿವೆ. ರಸ್ತೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ರಸ್ತೆ ಕಾಮಗಾರಿ ಗುಣಮಟ್ಟದ ಬಗ್ಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಮಾತ್ರ ಶಾಸಕರು ಹೇಳಿದ್ದಾರೆ ನಾವು ಏನೂ ಮಾಡಲು ಬರುವುದಿಲ್ಲ ಎನ್ನುತ್ತಾರೆಂದು ಕನ್ನಾಳ ಗ್ರಾಮದ ಮುಖಂಡರೊಬ್ಬರು ದೂರಿದ್ದಾರೆ. ಇಲಾಖೆ ಹಿರಿಯ ಅಧಿಕಾರಿಗಳು ರಸ್ತೆ ಕಾಮಗಾರಿ ಪರಿಶೀಲಿಸಿ ಗುತ್ತಿಗೆದಾರರ ಬಿಲ್ ಪಾವತಿ ತಡೆಹಿಡಿದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ ನಿಯಮಗಳಂತೆ ಕನ್ವರ್ಜೆನ್ಸಿ ಕಾಮಗಾರಿ ನಡೆದಿಲ್ಲ. ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ಕಾಮಗಾರಿ ಗುಣಮಟ್ಟದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ದೂರು ನೀಡುತ್ತೇನೆ.
ಶ್ವೇತಾ ವೆಂಕನಗೌಡ,
ತಾಪಂ ಅಧ್ಯಕ್ಷೆ, ಲಿಂಗಸುಗೂರು

ಕಾಮಗಾರಿ ಪರಿಶೀಲಿಸಿ ಕೆಲಸ ಎಷ್ಟಾಗಿದೆಯೋ ಅಷ್ಟು ಮಾತ್ರ ಬಿಲ್ ಪಾವತಿಸುತ್ತೇವೆ.
ಎಸ್‌.ಆರ್‌.ಮಿಣಜಗಿ,
ಎಇಇ ಪಂಚಾಯತ್‌ ರಾಜ್‌ ಇಲಾಖೆ ಲಿಂಗಸುಗೂರ 

Advertisement

Udayavani is now on Telegram. Click here to join our channel and stay updated with the latest news.

Next