ಬೆಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ “ಮುದ್ರಾಧಾರಣೆ’ ಸಹಿತ ಆಚರಣೆಯಲ್ಲಿರುವ ಆಗಮ ಶಾಸ್ತ್ರ, ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಸಂಪ್ರದಾಯ ಮತ್ತು ಆಚರಣೆಗಳನ್ನು ನಿಷೇಧಿಸುವ ರಾಜ್ಯ ಧಾರ್ಮಿಕ ಪರಿಷತ್ ಕೈಗೊಂಡಿರುವ ನಿರ್ಣಯದಂತೆ ಧಾರ್ಮಿಕ ದತ್ತಿ ಇಲಾಖೆಯ ಆಯಕ್ತರು ಹೊರಡಿಸಿರುವ ಸುತ್ತೋಲೆ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಸುತ್ತೋಲೆಗೆ ವೈಷ್ಣವ ಸಂಪ್ರದಾಯದ ಮಾಧ್ವರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಸುತ್ತೋಲೆಯನ್ನು ಹಿಂಪಡೆಯುವಂತೆ ಭಾರೀ ಒತ್ತಡ ವ್ಯಕ್ತವಾಗುತ್ತಿದೆ. ಈ ಮಧ್ಯೆ, ರಾಜ್ಯ ಧಾರ್ಮಿಕ ಪರಿಷತ್‌ನ ನಿರ್ಣಯದಂತೆ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಸಮಸ್ಯೆ ಅಥವಾ ವಿವಾದವಾಗುತ್ತಿದ್ದರೆ ಮರು ಪರಿಶೀಲಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ದೇವಾಲಯದಲ್ಲಿ ನಡೆದು ಬಂದಿರುವ ಪದ್ಧತಿಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು, ನಾಮಫಲಕ, ಫೋಟೋ ಇತ್ಯಾದಿಗಳನ್ನು ಅಳವಡಿಸುತ್ತಿರುವ ಬಗ್ಗೆ ಆಕ್ಷೇಪ ಹಾಗೂ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ 2022ರ ನ.2ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾಗಿ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಆಚರಣೆಯಲ್ಲಿರುವ ಪದ್ಧತಿ-ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು, ಮುದ್ರಾಧಾರಣೆ ಮಾಡುತ್ತಿರುವುದು, ಜಯಂತಿಗಳನ್ನು ಆಚರಿಸುವುದು, ಭಾವಚಿತ್ರಗಳನ್ನು ಅಳವಡಿಸುತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಹಾಗಾಗಿ ಆಯಾ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಧಾರ್ಮಿಕ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾದ ಆಚರಣೆ ಅನುಸರಿಸುವುದು, ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವುದು, ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದನ್ನು ನಡೆಸದಂತೆ ಹಾಗೂ ಇದಕ್ಕೆ ವಿರುದ್ಧವಾಗಿ ಈಗಾಗಲೇ ನಡೆಸಲಾಗಿರುವ ಭಾವಚಿತ್ರ, ಬೋರ್ಡ್‌ಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಅದರಂತೆ, ರಾಜ್ಯ ಧಾರ್ಮಿಕ ಪರಿಷತ್ತಿನ ತೀರ್ಮಾನದಂತೆ ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-1997ರ ಸೆಕ್ಷನ್ 58ರಂತೆ ಇನ್ನು ಮುಂದೆ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಆಚರಣೆಯಲ್ಲಿರುವ ಆಗಮ, ಶಾಸ್ತ್ರ, ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು, ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದು, ಭಾವಚಿತ್ರಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ ಹಾಗೂ ಇದಕ್ಕೆ ಅವಕಾಶ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಅದಕ್ಕೆ ವಿರೋಧ ವ್ಯಕ್ತವಾಗಿದೆ.