ಮುಧೋಳ: ಉತ್ತರ ಕರ್ನಾಟಕ ಭಾಗದ ಹೆಚ್ಚು ತಾಪಮಾನ ಹೊಂದಿರುವ ಪ್ರದೇಶಗಳ ಪೈಕಿ ಮುಧೋಳ ತಾಲೂಕೂ ಒಂದು. ಬೇಸಿಗೆ ಕಾಲದ ತಾಪಮಾನ ಕಡಿಮೆಗೊಳಿಸಲು ನಗರದಾದ್ಯಂತ ತಂಪು ಪಾನೀಯ ಹಾಗೂ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತದೆ.
ಈ ಬಾರಿ ಬೇಸಿಗೆ ಇನ್ನೂ ಒಂದು ತಿಂಗಳು ಇರುವಂತೆಯೇ ನಗರದ ಪ್ರಮುಖ ಬೀದಿಯಲ್ಲಿ ತಂಪು ಪಾನೀಯ ಹಾಗೂ ಕಲ್ಲಂಗಡಿ ವ್ಯಾಪಾರ ಜೋರಾಗಿ ಸಾಗುತ್ತಿದೆ. ಜನವರಿ ಕೊನೆಯ ವಾರದಿಂದಲೇ ಮಧ್ಯಾಹ್ನದ ವೇಳೆಯಲ್ಲಿ ಉರಿಬಿಸಿಲು ಆರಂಭಗೊಂಡಿರುವುದರಿಂದ ತಂಪು ಪಾನೀಯ ಹಾಗೂ ಕಲ್ಲಂಗಡಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಸದ್ಯ ನಿಗದಿತ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿರುವ ತಂಪು ಪಾನೀಯ ಹಾಗೂ ಕಲ್ಲಂಗಡಿ ವ್ಯಾಪಾರಿಗಳು ಬೇಸಿಗೆ ಸಮಯದಲ್ಲಿ ಇಡೀ ನಗರವನ್ನೆ ಸುತ್ತುವರಿಯುತ್ತಾರೆ.ಸಂಗೊಳ್ಳಿ ರಾಯಣ್ಣ ವೃತ್ತ, ಪ್ರಧಾನ ಗ್ರಂಥಾಲಯದ ಎದುರು, ಶಿವಾಜಿ ವೃತ್ತ, ಬಸವೇಶ್ವರ ವೃತ್ತದ ಎದುರು, ಕವಿಚಕ್ರವರ್ತಿ ರನ್ನ ವೃತ್ತ ಹಾಗೂ ತಾಲೂಕು ಕ್ರೀಡಾಂಗಣದ ಎದುರು ತಂಪು ಪಾನೀಯ ಹಾಗೂ ಕಲ್ಲಂಗಡಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.
ಕಲ್ಲಂಗಡಿ ದುಬಾರಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯಲ್ಲಿಯೂ ಹೆಚ್ಚಳವಾಗುವುದು ಸಹಜ. ಆದರೆ ಈಗನಿಂದಲೇ ಕಲ್ಲಂಗಡಿ ಬೆಲೆಯಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಇದು ಮೊದಲ ಕಟಾವಿನ ಸಮಯ. ಈ ವೇಳೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇರುವುದಿಲ್ಲ. ಆದ್ದರಿಂದ ಸದ್ಯ ಒಂದು ಟನ್ ಕಲ್ಲಂಗಡಿಗೆ 7000 ರೂ. ಬೆಲೆ ಇದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಾಗಿದೆ. ಮುಂದಿನ ಕಟಾವು ಹಂತದಲ್ಲಿ ಪೂರೈಕೆ ಹೆಚ್ಚಾಗುತ್ತದೆ. ಆವೇಳೆ 3000 ರೂ. ಟನ್ ಕಲ್ಲಂಗಡಿ ದೊರೆಯುತ್ತದೆ ಎನ್ನುತ್ತಾರೆ ಕಲ್ಲಂಗಡಿ ವ್ಯಾಪಾರಸ್ಥ ಮಲ್ಲು ಗೌಡರ.
ನೆರೆಯ ಜಿಲ್ಲೆಯಿಂದ ಕಲ್ಲಂಗಡಿ ಆಮದು: ಮುಧೋಳ ತಾಲೂಕು ಕಬ್ಬು ಬೆಳೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿನ ರೈತರು ಹೆಚ್ಚಾಗಿ ಕಬ್ಬನ್ನೆ ಬೆಳೆಯುವುದರಿಂದ ಕಲ್ಲಂಗಡಿ ಬೆಳೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುವುದಿಲ್ಲ. ಸದ್ಯ ನೆರೆಯ ಬೆಳಗಾವಿ ಜಿಲ್ಲೆಯ ರಾಮದುರ್ಗ ಭಾಗದಿಂದ ಕಲ್ಲಂಗಡಿ ತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದಂತೆಲ್ಲ ವಿವಿಧ ಭಾಗದಿಂದಲೂ ನಗರಕ್ಕೆ ಕಲ್ಲಂಗಡಿ ಆಗಮಿಸುತ್ತದೆ. ತಾಲೂಕಿನಲ್ಲಿ ಅಂದಾಜು 30ರಿಂದ 40 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹೇಶ ದಂಡನ್ನವರ.
ಇದನ್ನೂ ಓದಿ:40ಎಂ ಗಾತ್ರದ ಕ್ಯಾನ್ಸರ್ ಗಡ್ಡೆ ಹೊರತೆಗೆದ ವೈದ್ಯರು
ಪಾನೀಯ ಮಜ್ಜಿಗೆಗೆ ಹೆಚ್ಚಿದ ಬೇಡಿಕೆ:ದೇಹವನ್ನು ತಂಪಾಗಿಸುವ ಮಜ್ಜಿಗೆ ಹಾಗೂ ತಂಪು ಪಾನೀಯಕ್ಕೂ ಈಗಿನಿಂದಲೇ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಮಾಂತರ ಪ್ರದೇಶದಿಂದ ವಿವಿಧ ಕಾರ್ಯಗಳಿಗೆ ನಗರಕ್ಕೆ ಆಗಮಿಸುವ ಜನರು ಮಧ್ಯಾಹ್ನದ ಸುಡುಬಿಸಿಲಿನ ಅವಧಿಯಲ್ಲಿ ದೇಹವನ್ನು ತಂಪಾಗಿಸಲು ಮಜ್ಜಿಗೆ ಹಾಗೂ ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ.