Advertisement

ಮಡ್ಲೂರು ಏತ ನೀರಾವರಿ ಶೀಘ್ರವೇ ಲೋಕಾರ್ಪಣೆ

11:52 AM Jun 14, 2019 | Suhan S |

ಹಿರೇಕೆರೂರ: ತಾಲೂಕಿನ ಮಡ್ಲೂರು, ಕಚವಿ, ಸಾತೇನಹಳ್ಳಿ ಸೇರಿದಂತೆ ಒಟ್ಟು 56 ಕೆರೆಗಳನ್ನು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆ ಆರಂಭಗೊಂಡಿದ್ದು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು.

Advertisement

ಹಾನಗಲ್ ತಾಲೂಕಿನ ಹೊಂಕಣದ ಬಳಿ ಇರುವ ವರದಾ ನದಿಯಿಂದ ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳನ್ನು ತುಂಬಿಸುವ ಮಡ್ಲೂರು ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, 38ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆಯಿಂದ ಕೆರೆಗಳು ತುಂಬಿ ರೈತರಿಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.

ಇನ್ನು ಗುಡ್ಡದಮಾದಾಪುರ ಏತ ನೀರಾವರಿ, ಮದಗದ ಕೆರೆಯಿಂದ ಹಿರೇಕೆರೂರಿನ ಶ್ರೀ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಸದ್ಯದರಲ್ಲೇ ಅದು ಪೂರ್ಣಗೊಳ್ಳಲಿದೆ. ಜತೆಗೆ 200ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 275 ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಹೊಸದಾಗಿ ಸರ್ವಜ್ಞ ಏತ ನೀರಾವರಿ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 25 ಕೋಟಿ ರೂ. ವೆಚ್ಚದಲ್ಲಿ ಮದಗದ ಕೆರೆ ಸಮಗ್ರ ಅಭಿವೃದ್ಧಿ, 10 ಕೋಟಿ ರೂ. ವೆಚ್ಚದಲ್ಲಿ ಭೈರನಪಾದ ಮತ್ತು ಭಗವತಿ ಕೆರೆ ಅಭಿವೃದ್ಧಿ ಮಾಡಲಾಗುವುದು ಎಂದರು.

ಕರ್ನಾಟಕ ನೀರಾವರಿ ನಿಗಮ ಅಪ್ಪರ್‌ ತುಂಗಾ ಯೋಜನೆಯ ಮುಖ್ಯ ಇಂಜನಿಯರ್‌ ಆರ್‌. ಕುಮಾರಸ್ವಾಮಿ ಮಾತನಾಡಿ, ಹೊಂಕಣದ ವರದಾ ನದಿಯಿಂದ ಹಿರೇಕೆರೂರ ತಾಲೂಕಿನ 56 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು, ಇದಕ್ಕೆ 0.8 ಟಿಎಂಸಿ ನೀರಿನ ಅವಶ್ಯಕತೆ ಇದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದು, ಜಾಕ್‌ವೆಲ್ ನಿರ್ಮಿಸಲಾಗುತ್ತಿದೆ. 645 ಎಚ್.ಪಿ ಸಾಮರ್ಥ್ಯದ 3 ಯಂತ್ರಗಳನ್ನು ಇಲ್ಲಿ ಅಳವಡಿಸಲಾಗುತ್ತಿದೆ. ಇದರಲ್ಲಿ ನಿತ್ಯ 2 ಯಂತ್ರಗಳು ಕಾರ್ಯ ನಿರ್ವಹಿಸುತ್ತವೆ. 1ಯಂತ್ರವನ್ನು ಹೆಚ್ಚುವರಿಯಾಗಿ ಇರಿಸಲಾಗುತ್ತಿದೆ. ಒಟ್ಟು 23 ಕಿ.ಮೀ. ಪೈಪ್‌ಲೈನ್‌ ಅಳವಡಿಸುವ ಕಾರ್ಯ ಭರದಿಂದ ಸಾಗಿದ್ದು, ಇನ್ನು 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಸಹಾಯಕ ಅಭಿಯಂತರರಾದ ಮಹೇಂದ್ರ, ಜೆ.ರವಿಕುಮಾರ, ಮುಖಂಡರಾದ ದೊಡ್ಡಗೌಡ ಪಾಟೀಲ, ಎಪಿಎಂಸಿ ಸದಸ್ಯ ಸಿದ್ಧಪ್ಪ ಹಂಪಣ್ಣನವರ, ಅಶೋಕ ಮತ್ತಿಹಳ್ಳಿ, ರಘು ರಂಗಕ್ಕನವರ ಸೇರಿದಂತೆ ಮಡ್ಲೂರು, ಕಚವಿ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next