ಚಾಮರಾಜನಗರ: ಶಾಲಾ ಪಠ್ಯದಲ್ಲಿ ಬಸವಣ್ಣ ಅವರ ಚರಿತ್ರೆಯನ್ನು ತಿರುಚಿರು ವುದು ಅಕ್ಷಮ್ಯವಾಗಿದ್ದು, ತಕ್ಷಣವೇ ಸರ್ಕಾರ ಪುಸ್ತಕಗಳನ್ನು ವಾಪಸ್ ಪಡೆದು ತಿದ್ದುಪಡಿ ಮಾಡಿ ಹೊಸ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಬೇಕು ಎಂದು ಜಾಗತಿಕ ಲಿಂಗಾಯತ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಹಾಗೂ ಮುಡಿಗುಂಡ ಮಠದ ಶ್ರೀಕಂಠಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, 12ನೇ ಶತಮಾನ ದಲ್ಲಿ ಸ್ತ್ರೀ ಸಮಾನತೆ, ಸಮ ಸಮಾಜದ ನಿರ್ಮಾಣಕ್ಕೆ ಹೋರಾಡಿದ ಬಸವಣ್ಣ ಅವರು ವೈದಿಕ ಸಂಸ್ಕೃತಿಯನ್ನು ವಿರೋಧಿಸಿ ಲಿಂಗ ದೀಕ್ಷೆ ಪಡೆದಿದ್ದರು. ಹೀಗಿರುವಾಗ ಅವರು ವೈದಿಕ ಧರ್ಮ ಸ್ವೀಕರಿಸಿದ್ದರು ಎಂಬ ಅರ್ಥದಲ್ಲಿ ಪಠ್ಯ ಪುಸ್ತಕದಲ್ಲಿ ಬರೆದಿರುವುದು ತಪ್ಪು ಎಂದರು. ಸರ್ಕಾರ ಈಗ ಒತ್ತಡಕ್ಕೆ ಮಣಿದು ಪಠ್ಯ ಪರಿಷ್ಕರಣ ಸಮಿತಿಯನ್ನು ವಿಸರ್ಜನೆ ಮಾಡಿದೆ. ಆಗಿರುವ ತಪ್ಪನ್ನು ತಿದ್ದುಪಡಿ ಮಾಡಿ, ಬಸವಣ್ಣ ಅವರ ಮೂಲ ತತ್ವ ಹಾಗೂ ವ್ಯಕ್ತಿತ್ವವನ್ನು ಬಿಂಬಿಸುವ ಬರಹವನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಸಮಿತಿಗೆ ಅಧ್ಯಕ್ಷರನ್ನು ನೇಮಿಸುವಾಗ ಸರ್ಕಾರ ಯೋಚನೆ ಮಾಡಬೇಕಿತ್ತು. ಏನೂ ಅನುಭವವಿಲ್ಲದ, ಸಾಮಾಜಿಕ ಜಾಲತಾಣಗಳಲ್ಲಿ ಲಘುವಾಗಿ, ಅಪಹಾಸ್ಯ ವಿಚಾರಗಳನ್ನು ಬರೆಯುವವರನ್ನು ಆಯ್ಕೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಕ್ರಮಕೈಗೊಳ್ಳಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಶ್ರೀಕಂಠಸ್ವಾಮೀಜಿ ಹೇಳಿದರು. ಪಠ್ಯಪುಸ್ತಕಗಳಲ್ಲಿ ಸತ್ಯವನ್ನೇ ಹೇಳಬೇಕು. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಆದರೆ, ನಮ್ಮ ಧರ್ಮದ ಅಸ್ತಿತ್ವ, ಅಸ್ಮಿತೆಗೆ ತೊಡಕುಂಟಾದಾಗ ಪ್ರತಿಭಟಿಸುವುದು ಅನಿವಾರ್ಯ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, ಜಗತ್ತಿಗೆ ಗುರುವಾಗಿದ್ದ, ಲಿಂಗಾಯತ ಧರ್ಮವನ್ನು ಹುಟ್ಟುಹಾಕಿದ್ದ ಬಸವಣ್ಣ ಅವರ ಇತಿಹಾಸವನ್ನು ತಿರುಚಲಾಗಿದೆ. ಇದರಿಂದ ಮಕ್ಕಳಿಗೆ ತಪ್ಪು ಸಂದೇಶ ಹೋಗುತ್ತದೆ. ಪಠ್ಯಪುಸ್ತಕದಲ್ಲಿ ಮಹಾತ್ಮರು ಹಾಗೂ ಶರಣರ ಚಿಂತನೆಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ವೇದಿಕೆ ಜಿಲ್ಲಾ ಘಟಕದ ಕಾನೂನು ಸಲಹೆಗಾರ ಆರ್.ವಿರೂಪಾಕ್ಷ ಕಾಳನಹುಂಡಿ, ಕೋಶಾಧ್ಯಕ್ಷ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿ ಮೇಲಾಜಿಪುರದ ಬಸವ ಮಂಟಪದ ಶಿವಬಸವ ಸ್ವಾಮೀಜಿ, ಮುಖಂಡ ವಿಜಯ ಕುಮಾರ್ ಹೆಗ್ಗೊಠಾರ ಉಪಸ್ಥಿತರಿದ್ದರು.