Advertisement

Mudigere: ಖಾರದ ಪುಡಿ ಎರಚಿ ತೋಟದ ಮನೆ ದರೋಡೆ ಪ್ರಕರಣ; ಪೊಲೀಸರಿಂದ ಐವರ ಬಂಧನ

12:30 PM Feb 23, 2024 | sudhir |

ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಜಾವಳಿ ಸಮೀಪ ತೋಟದ ಮನೆಯೊಂದಕ್ಕೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ಹಣ ಆಭರಣ ದೋಚಿದ್ದ ಪ್ರಕರಣದಲ್ಲಿ ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಏನಿದು ಪ್ರಕರಣ: ಫೆಬ್ರವರಿ 15ರ ರಾತ್ರಿ ಸುಮಾರು 8-15 ಗಂಟೆಯ ಸಮಯದಲ್ಲಿ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಮನೆಯವರಿಗೆಲ್ಲಾ ಹೆದರಿಸಿ, ತಡೆಯಲು ಬಂದ ಶ್ರೀನಿವಾಸಮೂರ್ತಿ ಎಂಬ ಕೆಲಸಗಾರರಿಗೆ ಕತ್ತಿ ಚಾಕುವಿನಿಂದ ಹಲ್ಲೆ ಮಾಡಿ ಮಾರಣಾಂತಿಕವಾದ ಗಾಯ ಮಾಡಿ, ಮನೆಯಲ್ಲಿದ್ದ ಟಿ.ವಿ.ಗಳನ್ನು ಒಡೆದು ಹಾಕಿ ಗಾರ್ಡೇಜ್ ಬೀರುವಿನಲ್ಲಿದ್ದ 5,25,000/- ರೂ. ನಗದು ಮತ್ತು 1,25,000/- ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಮೊ.ನಂ:05/2024 ಕಲಂ 395, 397, 427, 450 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸರ್ ಆಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಮೂಡಿಗೆರೆ ತಾಲ್ಲೂಕು ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಆಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್ ಬಂಧಿತರು.

ಇವರಲ್ಲಿ ಅನ್ಸರ್ ಎಂಬಾತ ದರೋಡೆ ನಡೆಸಿ ಎಸ್ಕೇಪ್ ಆಗುವಾಗ ಕತ್ತಲೆಯಲ್ಲಿ ದಾರಿ ತಪ್ಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದ, ಉಳಿದವರು ದರೋಡೆ ಮಾಡಿ ಬೇರೆ ಬೇರೆ ದಿಕ್ಕಿಗೆ ತೆರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

ಕಾಫಿ ವ್ಯಾಪಾರಕ್ಕೆ ಬಂದು ದರೋಡೆಗೆ ಸ್ಕೆಚ್ : ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿಂಗ್ ಕುಮಾರ್ ಎಂಬಾತ ಕಾಫಿ ವ್ಯಾಪಾರಿಯಾಗಿದ್ದು ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆಯಿಂದ ಕಾಫಿ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಅವನೇ ಈ ಮನೆಯನ್ನು ದರೋಡೆಗೆ ಟಾರ್ಗೆಟ್ ಮಾಡಿ ಉಳಿದವರನ್ನು ಒಟ್ಟು ಸೇರಿಸಿ ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.

ಇವರೆಲ್ಲರೂ ದರೋಡೆ ಮಾಡುವ ಹಿಂದಿನ ದಿನ ಕೊಟ್ಟಿಗೆಹಾರದ ಅನಿಲ್ ಲಾಡ್ಜ್ ನಲ್ಲಿ ತಂಗಿದ್ದರು ಎನ್ನಲಾಗಿದೆ. ಇವರೆಲ್ಲಾ ಇಸ್ಪೀಟ್ ಆಟದ ಗ್ಯಾಂಗ್ ನಲ್ಲಿ ಪರಸ್ಪರ ಪರಿಚಯಸ್ಥರು ಎಂದು ತಿಳಿದುಬಂದಿದೆ.

ದರೋಡೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಇದನ್ನೂ ಓದಿ: Student: ಬಸ್ಸಿನಿಂದ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ… ತಲೆಗೆ ಗಂಭೀರ ಗಾಯ

Advertisement

Udayavani is now on Telegram. Click here to join our channel and stay updated with the latest news.

Next