ಸುಧೀರ್ ಬಿ.ಟಿ. ಮೊದಲ ಮನೆ
ಮೂಡಿಗೆರೆ: ಪಟ್ಟಣದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-173ಯಲ್ಲಿ ಗುಂಡಿಗಳೇ ತುಂಬಿಕೊಂಡಿದ್ದು, ಗುಂಡಿಗಳಲ್ಲಿ ರಸ್ತೆ ಹುಡುಕಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಸವಾರರಿಗೆ ಬಂದೊದಗಿದೆ.
ಕಡೂರಿನಿಂದ ಮೂಡಿಗೆರೆಯ ಹ್ಯಾಂಡ್ ಪೋಸ್ಟ್‌ವರೆಗಿನ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಹಲವು ವರ್ಷಗಳ ನಂತರ 2018ರ ಏಪ್ರಿಲ್ ತಿಂಗಳಿನಲ್ಲಿ ಚಿಕ್ಕಮಗಳೂರಿನ ಆಲದಗುಡ್ಡೆಯಿಂದ ಮೂಡಿಗೆರೆಯ ಬಿಳಗುಳದ ಅಂಚಿನವರೆಗೆ ಡಾಂಬರೀಕರಣ ಮಾಡಲಾಗಿತ್ತು. ಅಧಿಕಾರಿಗಳ ದೂರಾಲೋಚನೆಯ ಕೊರತೆಯೋ ಅಥವಾ ಯೋಜನೆ ತಯಾರಿಸುವುದರಲ್ಲಿ ಆದ ತಪ್ಪುಗಳಿಂದಾಗಿಯೋ ಏನೋ ಬಿಳಗೊಳದಿಂದ ಹ್ಯಾಂಡ್‌ಪೋಸ್ಟ್‌ವರೆಗೆ ಮಾತ್ರ ಡಾಂಬರೀಕರಣ ಆಗಿಲ್ಲ.
ಈ ವಿಚಾರವಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿ ಹ್ಯಾಂಡ್ ಪೋಸ್ಟ್‌ವರೆಗೆ ಡಾಂಬರೀಕರಣ ಮಾಡುವಂತೆ ಅಹವಾಲು ಸಲ್ಲಿಸಿದ್ದರು. ಕೂಡಲೇ ಸೂಕ್ತ ಸ್ಪಂದನೆ ಸಿಕ್ಕಿತಾದರೂ ಕಾರ್ಯ ಮಾತ್ರ ಪ್ರಗತಿಗೆ ಬರಲಿಲ್ಲ. ಇದರ ಪರಿಣಾಮವಾಗಿ ಮೊದಲೇ ಹಾಳಾಗಿದ್ದ ರಸ್ತೆ ಈ ಬಾರಿಯ ಮಳೆಗಾಲದಲ್ಲಿ ಪೂರ್ತಿಯಾಗಿ ಹಾಳಾಗಿದ್ದು, ರಸ್ತೆ ಇದೆ ಎನ್ನುವ ಯಾವುದೇ ಕುರುಹು ಕಾಣಿಸುತ್ತಿಲ್ಲ.
ಬಿಳಗೊಳದಿಂದ ಮೂಡಿಗೆರೆ ಪಟ್ಟಣ ಸೇರಿದಂತೆ ಹ್ಯಾಂಡ್‌ಪೋಸ್ಟ್ ವರೆಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಸ್ಥಳೀಯರು ಮತ್ತು ವಾಹನ ಸವಾರರು ರಸ್ತೆಯಲ್ಲಿ ತಿರುಗಾಡಲು ಹರಸಾಹಸ ಪಡುವಂತಾಗಿದೆ. ಇನ್ನು ಪಾದಚಾರಿಗಳ ಕಥೆ ಊಹೆಗೆ ನಿಲುಕದ್ದಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೆದ್ದಾರಿ ಮರಣಗುಂಡಿಗಳಾಗಿ ಮಾರ್ಪಾಟಾಗಿವೆ. ಯಾವ ಗುಂಡಿ ಯಾರ ಜೀವ ತೆಗೆಯಲು ಸಿದ್ಧವಾಗಿ ಕುಳಿತಿದೆಯೋ ಎಂಬ ಚಿಂತೆ ಇಲ್ಲಿನ ನಾಗರಿಕರದ್ದು. ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ಇಂಥ ಗುಂಡಿಗಳಿಂದಾಗಿ ಸಾವನ್ನಪ್ಪಿದ ದೃಶ್ಯ ಮರೆಯುವ ಮುನ್ನ ಮತ್ತೂಂದು ಭೀಕರ ಅಪಘಾತ ಸಂಭವಿಸುವ ಮೊದಲು ಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕಿದೆ.
ಹ್ಯಾಂಟ್ ಪೋಸ್ಟ್‌ವರೆಗಿನ ರಸ್ತೆ ಗುಂಡಿ ಬಿದ್ದು 2 ವರ್ಷ ಕಳೆದರೂ ಕೂಡ ಅನುದಾನ ಬಿಡುಗಡೆ, ಟೆಂಡರ್ ಪ್ರಕ್ರಿಯೆ ಎಂದು ಸರಕಾರದ ಬಗ್ಗೆ ಬೆರಳು ತೋರಿಸುವುದರ ಬದಲು ಲಭ್ಯವಿರುವ ಅನುದಾನ ಬಳಸಿಕೊಂಡು ಗುಂಡಿ ಮುಚ್ಚಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.