Advertisement
ಇದೀಗ ಈ ಭಾಗಗಲ್ಲಿ ಮಳೆ ಮತ್ತು ನೆರೆಯ ಪ್ರತಾಪ ಕೊಂಚ ಮಟ್ಟಿಗೆ ಇಳಿಮುಖವಾಗಿದೆ ಹಾಗೂ ಈ ಭಾಗದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯವೂ ಅಂತ್ಯಗೊಂಡಿದೆ. ತಮ್ಮ ಕಾರ್ಯವನ್ನು ಮುಗಿಸಿ ಹಿಂತಿರುಗಲು ಸಿದ್ಧರಾಗಿದ್ದ ಭಾರತೀಯ ಸೇನೆಯ ಯೋಧರಿಗೆ ಮೂಡಿಗೆರೆ ಭಾಗದ ಜನ ಭಾವುಕ ವಿದಾಯ ಕೋರಿದ್ದಾರೆ.
ತಮ್ಮ ಕರ್ತವ್ಯ ಮುಗಿಸಿ ಹೊರಟಿದ್ದ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಮೂಡಿಗೆರೆಯ ಜನತೆ, ‘ನಿಮ್ಮಿಂದಾಗಿ ನಮ್ಮ ಪ್ರಾಣ ಉಳಿದಿದೆ..’ ಎಂದು ಯೋಧರಿಗೆ ಕೈಮುಗಿದು ವಿದಾಯ ಹೇಳಿದ್ದಾರೆ. ಇನ್ನು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪ್ರತೀ ಸೈನಿಕರ ಕೈಗೂ ರಾಖಿ ಕಟ್ಟುವ ಮೂಲಕ ಭಾವನಾತ್ಮಕ ವಿದಾಯವನ್ನು ಕೋರಿದ್ದಾರೆ. ಈ ಜನರ ಮುಗ್ದ ಪ್ರೀತಿಗೆ ಆಶ್ಚರ್ಯಗೊಂಡ ಸೈನಿಕರು, ನಾವೆಂದೂ ನಿಮ್ಮ ಜೊತೆಗಿರುತ್ತೇವೆ, ನಾಡಿನ ಸೇವೆಗೆ ನಾವು ಸದಾ ಸಿದ್ಧ ಎಂದು ಹೇಳಿ ತಮ್ಮಲ್ಲಿದ್ದ ಹಣ್ಣು, ಬಿಸ್ಕತ್ತುಗಳನ್ನು ಸಂತ್ರಸ್ತರಿಗೆ ಹಂಚಿದರು. ಬಳಿಕ ಸೈನಿಕರ ತಂಡವು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.