Advertisement

ಮೂಡಿಗೆರೆ: ಒಂದೂವರೆ ಎಕರೆ ತೋಟ ನಾಶ ಮಾಡಿದ ಕಾಡಾನೆ

12:08 AM Jul 29, 2023 | Team Udayavani |

ಮೂಡಿಗೆರೆ: ಆಹಾರವನ್ನು ಅರಸಿ ಕಾಫಿ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆ ಎರಡು ದಿನಗಳಲ್ಲಿ ಬರೋಬ್ಬರಿ ಒಂದೂವರೆ ಎಕರೆ ಜಾಗದಲ್ಲಿ ಬೆಳೆದು ನಿಂತಿದ್ದ ಅಡಿಕೆ ಮತ್ತು ಕಾಫಿ ಗಿಡಗಳನ್ನು ಸಂಪೂರ್ಣ ನಜ್ಜುಗುಜ್ಜು ಮಾಡಿದೆ.ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

Advertisement

ಬೈದುವಳ್ಳಿಯಲ್ಲಿ ಹೆಚ್. ಕೆ. ರಮೇಶ್ ಹಳೇಕೆರೆ ಇವರ ತೋಟದಲ್ಲಿ ಇದ್ದ ಬಗನೆ ಮರವನ್ನು ತಿನ್ನಲ್ಲು ಬಂದಿರುವ ಒಂಟಿ ಸಲಗ ಬಗನೆ ಮರವನ್ನು ತಿನ್ನುವ ಭರದಲ್ಲಿ ಸುಮಾರು ಒಂದೂವರೆ ಎಕರೆ ಪ್ರದೇಶವನ್ನು ಸಂಪೂರ್ಣ ನಜ್ಜುಗುಜ್ಜು ಮಾಡಿದೆ.ಆನೆ ತೋಟದಲ್ಲಿ ಮನಬಂದಂತೆ ತಿರುಗಾಡಿದ್ದು, ನೂರೈವತ್ತು ಹೆಚ್ಚು ಅಡಿಕೆ ಮರಗಳು, ಇನ್ನೂರೈವತ್ತಕ್ಕೂ ಹೆಚ್ಚು ರೋಬಸ್ಟಾ ಕಾಫಿ ಗಿಡಗಳನ್ನು ಬುಡಮೇಲು ಮಾಡಿದೆ.

ಕಷ್ಟಪಟ್ಟು ಬೆಳೆಸಿದ್ದ ಗಿಡಗಳು ಒಂದೇ ರಾತ್ರಿಯಲ್ಲಿ ನಿರ್ನಾಮ ಮಾಡಿರುವುದನ್ನು ಕಂಡು ತೋಟದ ಮಾಲಕರು ತೀವ್ರವಾಗಿ ಮನನೊಂದಿದ್ದಾರೆ. ಸ್ಥಳಕ್ಕೆ ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಮತ್ತು ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆನೆ ಮಾಡಿರುವ ನಷ್ಟವನ್ನು ಕಂಡು ಸ್ವತಃ ಅರಣ್ಯ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ನಿರಂತರವಾಗಿ ರೈತರ ಜಮೀನಿಗೆ ಲಗ್ಗೆ ಇಡುತ್ತಿದ್ದು, ಅಪಾರ ಹಾನಿ ಉಂಟುಮಾಡುತ್ತಿವೆ. ಈ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಊರುಬಗೆ ಸಮೀಪ ಅರ್ಜುನ್ ಎಂಬುವವರನ್ನು ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದು ವರ್ಷವಾಗುತ್ತಾ ಬಂದಿದೆ.

ಇಲ್ಲಿಂದ ಒಂದು ಕಾಡಾನೆಯನ್ನು ಸೆರೆಹಿಡಿದು ಸಾಗಿಸಲಾಗಿದೆ. ಇಲ್ಲಿ ಉಪಟಳ ನೀಡುತ್ತಿದ್ದ ಬೈರ ಎನ್ನುವ ಆನೆಯನ್ನು ಹಿಡಿಯಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದರು. ಆದರೆ ಸ್ಥಳೀಯರು ಹೇಳುವ ಪ್ರಕಾರ ಭೈರ ಸೆರೆಯಾಗಿಲ್ಲ. ಇದೀಗ ಉಪಟಳ ನೀಡುತ್ತಿರುವ ಒಂಟಿಸಲಗವೇ ಭೈರ ಆನೆ ಎನ್ನುತ್ತಿದ್ದಾರೆ.

Advertisement

ಹಾಗಾಗಿ ಅರಣ್ಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಜರುಗಿಸಿ ಜನರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next