Advertisement

ನೆರೆ ಹಾನಿಯ ಸಂಪೂರ್ಣ ಮಾಹಿತಿ ನೀಡಲು ಸೂಚನೆ

06:43 PM Sep 08, 2019 | Team Udayavani |

ಮೂಡಿಗೆರೆ: ಕಳೆದ ವಾರ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅತಿವೃಷ್ಟಿ ಹಾನಿಯ ಬಗ್ಗೆ ಸಭೆ ನಡೆಸಲಾಗಿತ್ತು. ಜಿಲ್ಲಾಧಿಕಾರಿ ಗೌತಮ್‌ ಬಗಾದಿ ಅವರು ಸಭೆಗೆ ಅತಿವೃಷ್ಟಿ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಇನ್ನೂ ಕೆಲವು ಮಾಹಿತಿಗಳನ್ನು ನೀಡಿಲ್ಲ. ಹಾಗಾಗಿ, ಅಧಿಕಾರಿಗಳು ನೆರೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೆ ಸರಕಾರಕ್ಕೆ ತಲುಪಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಹೇಳಿದರು.

Advertisement

ಶನಿವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನಲ್ಲಿ ಉಂಟಾದ ಅತಿವೃಷ್ಟಿ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಮಹಾಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಇಲಾಖೆ ಸೇರಿದಂತೆ ಯಾವ ಇಲಾಖೆಗಳ ಅಧಿಕಾರಿಗಳೂ ಭೇಟಿ ನೀಡಿಲ್ಲವೆಂಬ ದೂರು ಬಂದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಜಿಪಂನಲ್ಲಿ ಸಚಿವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಅಧಿಕಾರಿಗಳ ಅಸಡ್ಡೆ ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅತಿವೃಷ್ಟಿ ವಿಚಾರವಾಗಿ ಆಯಾ ಪ್ರದೇಶದ ಜನಪ್ರತಿನಿಧಿಗಳ ಗಮನಕ್ಕೂ ತಾರದೇ ಬೇಕಾಬಿಟ್ಟಿ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವರಲ್ಲಿ ಮನವಿ ಮಾಡಲಾಗುವುದು. ತಾಲೂಕಿನಲ್ಲಿ 454 ಮಂದಿ ನಿರಾಶ್ರತರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಸುಳ್ಳು. ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದೆ. ಸ್ಪಷ್ಟ ಮಾಹಿತಿ ಪಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ವಿಚಾರವನ್ನು ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸಲಾಗುವುದು. ಜನಪ್ರತಿನಿಧಿಗಳನ್ನು ಅಧಿಕಾರಿಗಳು ಕಡೆಗಣಿಸುತ್ತಿದ್ದೀರಿ. ಅದನ್ನು ಹಕ್ಕುಚ್ಯುತಿಗೆ ಮಂಡಿಸಿದರೆ ಅಮಾನತಾಗುತ್ತೀರಿ ಎಂದು ಎಚ್ಚರಿಸಿದರು.

ಗೌತಹಳ್ಳಿ ಸಮೀಪ ಪುರದಲ್ಲಿ ವಾಸದ ಮನೆಯೊಂದು ಕುಸಿದಿರುವ ಬಗ್ಗೆ ಆ ಮನೆ‌ ಮಾಲಿಕರ ಹೆಸರು ಏನೆಂದು ಕಂದಾಯ ಇಲಾಖೆ ನಿರೀಕ್ಷಕ ಮತ್ತು ಗ್ರಾಮಲೆಕ್ಕಿಗರನ್ನು ಸಭೆಯಲ್ಲಿ ಪ್ರಶ್ನಿಸಿದಾಗ ಹೇಳಲು ತಡವರಿಸಿದರು. ಇದಕ್ಕೆ ಎಂಎಲ್ಸಿ ಪ್ರಾಣೇಶ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ತಾಲೂಕಿನ ಎಲ್ಲಾ ಗ್ರಾಮದಲ್ಲಿರುವ ಕಂದಾಯ ಇಲಾಖೆ ಜಾಗವನ್ನು ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಆ ಜಾಗವನ್ನು ಮನೆ ಕಳೆದುಕೊಂಡ ನಿರಾಶ್ರಿತರಿಗೆ ಒದಗಿಸಲು ಮೀಸಲಿರಿಸಬೇಕು ಎಂದು ಸೂಚಿಸಿದರು.

Advertisement

ಕಾಳಜಿ ಕೇಂದ್ರವನ್ನು ತೆರೆದಿರುವ ಹಾಸ್ಟೆಲ್ಗಳಲ್ಲಿ ನಿರಾಶ್ರಿತರಿಗೆ ನೀಡುವ ಆಹಾರ ಪದಾರ್ಥಗಳಿಗೆ ಮುಗ್ಗಲು ಅಕ್ಕಿಯನ್ನು ಬಳಸಲಾಗುತ್ತಿದೆ. ಈ ಅಕ್ಕಿಯನ್ನು ಎಲ್ಲಿಂದ ತಂದಿದ್ದೀರಿ ಎಂದು ಕೆ.ಸಿ.ರತನ್‌ ಸಮಾಜ ಕಲ್ಯಾಣಾಧಿಕಾರಿ ಧನಂಜಯ ಅವರನ್ನು ಪ್ರಶ್ನಿಸಿದರು. ಆಗ, ಕಳೆದ 6 ತಿಂಗಳಿಂದ ಹಾಸ್ಟೆಲ್ಗಳಲ್ಲಿ ಮಕ್ಕಳಿಗೆಂದು ಅಕ್ಕಿಯನ್ನು ಶೇಖರಿಸಿಡಲಾಗಿದೆ. ಇದರಲ್ಲಿ ತೊಂದರೆ ಬಂದಿರಬಹುದು ಎಂದಾಗ, ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಸಂಪೂರ್ಣ ಮನೆ ಕುಸಿತಕ್ಕೊಳಗಾದವರು ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರತಿ ತಿಂಗಳು 5 ಸಾವಿರ ರೂ. ನೀಡಲು ಸರಕಾರ ನಿರ್ಧರಿಸಿದೆ. ಆದರೆ, ಇದೂವರೆಗೂ ಬಾಡಿಗೆ ಹಣ ನಿರಾಶ್ರಿತರಿಗೆ ನೀಡಿಲ್ಲ. ಹಣದ ಕೊರತೆಯಿಂದ ಈ ರೀತಿ ಮಾಡುತ್ತಿದ್ದಾರೆಯೇ ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್‌ ಪ್ರಶ್ನಿಸಿದರು. ಆಗ, ತಕ್ಷಣಕ್ಕೆ ಬಾಡಿಗೆ ಹಣ ನೀಡಲು ಸಾಧ್ಯವಾಗಿಲ್ಲ. ಆದೇಶ ಬಂದ ಕೂಡಲೇ ನಿರಾಶ್ರಿತರಿಗೆ ಹಣ ನೀಡಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸದಸ್ಯ ರಂಜನ್‌ ಅಜಿತ್‌ ಕುಮಾರ್‌ ಮತನಾಡಿ, ತಾಲೂಕಿನಾದ್ಯಂತ ಕಾಫಿ ತೋಟ, ಭತ್ತದ ಗದ್ದೆಗಳಿಗೆ ಹಾನಿಯಾಗಿರುವುದರಿಂದ ರಾಜ್ಯ ಸರಕಾರ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ, ಕಾಫಿ ತೋಟ ಹಾನಿಗೆ ಹೆಕ್ಟೇರ್‌ಗೆ 18 ಸಾವಿರ ರೂ., ಭತ್ತದ ಗದ್ದೆಗೆ ಎಕರೆಗೆ 6.200 ರೂ. ಪರಿಹಾರ ನೀಡಲಾಗುತ್ತಿದೆ. ಇದು ಸಾಲದು. ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಗೋಣಿಬೀಡು ಹೋಬಳಿಯ ಉಗ್ಗೆಹಳ್ಳಿ ಕಾಲೋನಿಯಲ್ಲಿ 4 ಮನೆ ಸಂಪೂರ್ಣ ಕುಸಿದಿದೆ. 158 ಮನೆ ಭಾಗಶಃ ಹಾನಿಯಾಗಿದೆ. ಜಮೀನು ಹಾಗೂ ವಾಸದ ಮನೆಯ ಹಾನಿಯ 726 ಅರ್ಜಿಗಳು ಬಂದಿವೆ. ಕಳಸ ಹೋಬಳಿಯಲ್ಲಿ 26 ಮನೆ ಸಂಪೂರ್ಣ ಕುಸಿದಿದೆ. 150 ಮನೆ ಶೇ.75ರಷ್ಟು ಕುಸಿದಿದೆ. ಒಟ್ಟು 293 ಮನೆಗೆ ಹಾನಿಯಾಗಿದೆ. ಬಣಕಲ್ ಹೋಬಳಿಯಲ್ಲಿ 11 ಮನೆ ಸಂಪೂರ್ಣ ಕುಸಿದಿದೆ. ಬಾಳೂರು ಹೋಬಳಿ ವ್ಯಾಪ್ತಿಯಲ್ಲಿ 6 ಮನೆ ಕುಸಿದಿದೆ. ಕಸಬಾದಲ್ಲಿ 30 ಮನೆ ಹಾನಿಗೊಂಡಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಅಲ್ಲದೇ, ತಾಲೂಕಿನಲ್ಲಿ 366 ಕಡೆ ರಸ್ತೆಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. 72 ಭಾಗಗಳಲ್ಲಿ ರಸ್ತೆ ಕುಸಿದಿವೆ. 140 ಕಡೆ ಗುಡ್ಡ ಕುಸಿದಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ವೆಂಕಟೇಶ್‌ ಸಭೆಗೆ ಮಾಹಿತಿ ನೀಡಿದರು.

ತಾಪಂ ಉಪಾಧ್ಯಕ್ಷೆ ಪ್ರಮೀಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್.ದೇವರಾಜು, ಸವಿತಾ ರಮೇಶ್‌, ವೀಣಾ ಉಮೇಶ್‌, ಭಾರತೀ ರವೀಂದ್ರ, ಸುಂದರ್‌ ಕುಮಾರ್‌, ಮೀನಾಕ್ಷಿ ಮೋಹನ್‌, ವೇದವತಿ ಲಕ್ಷ್ಮಣ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next