Advertisement

ಪ್ರಯಾಣಿಕರ ತಂಗುದಾಣಕ್ಕೆ ಆಕ್ಷೇಪ

12:42 PM Dec 08, 2019 | Naveen |

„ಸುಧೀರ್‌ ಮೊದಲಮನೆ
ಮೂಡಿಗೆರೆ:
ಪಟ್ಟಣದ ಹ್ಯಾಂಡ್‌ ಪೋಸ್ಟ್‌ ವೃತ್ತದ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರಯಾಣಿಕರ ತಂಗುದಾಣಕ್ಕೆ ಸ್ಥಳೀಯರು ಮತ್ತು ಪ್ರಯಾಣಿಕರಿಂದ ತೀವ್ರ ಆಕ್ಷೇಪ ಎದುರಾಗಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.

Advertisement

ಹ್ಯಾಂಡ್‌ಪೋಸ್ಟ್‌ ಸರ್ಕಲ್‌ ನಿರ್ಮಾಣದ ಹಂತದಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೊದಲೇ ಜಿಲ್ಲಾ ಪಂಚಾಯತಿ ಹ್ಯಾಂಡ್‌ಪೋಸ್ಟ್‌ ವೃತ್ತದ ಪಕ್ಕದಲ್ಲಿಯೇ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿರುವುದು ಮತ್ತೂಂದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಾರಂಭವಾದ ನಂತರ ರಸ್ತೆಯನ್ನು ಅಳತೆ ಮಾಡಿ ರಸ್ತೆ ಪಕ್ಕದ ಜಾಗಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೇ, ಈಗಿರುವ ನಿಯಮಗಳ ಪ್ರಕಾರ ರಸ್ತೆಯ ಮಧ್ಯ ಭಾಗದಿಂದ ರಸ್ತೆಯ ಎರಡೂ ಭಾಗಗಳಲ್ಲಿ 120 ಅಡಿಗಳಷ್ಟು ಜಾಗವನ್ನು ಬಿಟ್ಟು ಹೊಸ ಕಾಮಗಾರಿ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ನಿಯಮಾವಳಿಗಳಿಗೆ ಒಳಪಟ್ಟು ಅನುಮತಿ ಪಡೆಯಬೇಕು. ಆದರೆ, ಇವೆಲ್ಲವನ್ನೂ ಗಾಳಿಗೆ ತೂರಿ ಅವಸರದಲ್ಲಿ ಪ್ರಯಾಣಿಕರ ತಂಗುದಾಣ ಮತ್ತು ನೂತನ ವೃತ್ತಗಳ ನಿರ್ಮಾಣ ಮಾಡುತ್ತಿರುವುದರ ಹಿಂದೆ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ ಎಂಬುದು ಹಲವರ ವಾದವಾಗಿದೆ.

ಸ್ಥಳೀಯ ನಿವಾಸಿ ಮಹಮದ್‌ ಹನೀಫ್‌ ಅವರ ಪ್ರಕಾರ, ಮಂಗಳೂರು ಮತ್ತು ವಿಲ್ಲುಪುರಂ ಹೆದ್ದಾರಿ ಎಂದು ಘೋಷಣೆಗೂ ಮೊದಲಿನಿಂದಲೇ ರಸ್ತೆ ಬದಿಯಲ್ಲಿನ ಕಟ್ಟಡಗಳ ನಿರ್ಮಾಣ ಮತ್ತು ಸ್ವತ್ತುಗಳ ಹಕ್ಕು ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳಲ್ಲಿ ಜಾಗಗಳ ಮಾಲೀಕರಿಂದ ರಸ್ತೆಯ ಮಧ್ಯಭಾಗದಿಂದ 120 ಅಡಿಗಳ ಒಳಗೆ ಕಟ್ಟಡ ನಿರ್ಮಾಣ ಮಾಡುವುದಿಲ್ಲವೆಂದು ಹಾಗೂ ಹೆದ್ದಾರಿ ನಿರ್ಮಾಣದ ವೇಳೆ ಯಾವುದೇ ತಕರಾರು ಮಾಡುವುದಿಲ್ಲವೆಂದು ಬಾಂಡ್‌ ಪೇಪರ್‌ ಬರೆಯಿಸಿಕೊಳ್ಳುತ್ತಿದ್ದಾರೆ. ಒಬ್ಬ ಜನಸಾಮಾನ್ಯ ಸಾಲಸೋಲ ಮಾಡಿ ಕಟ್ಟಡ ನಿರ್ಮಾಣಕ್ಕೆ ಅಥವಾ ಜಾಗದ ಹಕ್ಕು ಬದಲಾವಣೆಗೆ ಮುಂದಾದಾಗ ನೂರಾರು ಕಾನೂನುಗಳನ್ನು ಪಾಲಿಸುವ ಸ್ಥಳೀಯ ಸಂಸ್ಥೆಗಳು ನೂತನ ಸರ್ಕಲ್‌ ಹಾಗೂ ಪ್ರಯಾಣಿಕರ ತಂಗು ನಿಲ್ದಾಣಕ್ಕೆ ಹೇಗೆ ಒಪ್ಪಿಗೆ ಕೊಟ್ಟವು ಎಂದು ಪ್ರಶ್ನಿಸಿದ್ದಾರೆ.

ಹಲವು ವರ್ಷಗಳಿಂದ ತಂಗುದಾಣ, ಶೌಚಾಲಯ ನಿರ್ಮಾಣ ಹಾಗೂ ಕುಡಿಯುವ ನೀರಿನ ಸೌಕರ್ಯ ಮಾಡಿಕೊಡುವಂತೆ ಒತ್ತಾಯಿಸಿದರೂ, ಹಲವಾರು ಬಾರಿ ಸಂಘ- ಸಂಸ್ಥೆಗಳು ಒಟ್ಟಾಗಿ ಪ್ರತಿಭಟನೆ ಮಾಡಿದರೂ ಜಗ್ಗದ ಸ್ಥಳೀಯ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು, ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ವೇಳೆಗೆ ಇದ್ದಕ್ಕಿದ್ದಂತೆ ಸಾರ್ವಜನಿಕರು ಹಾಗೂ ಪ್ರಯಾಣಿಕರ ಬಗ್ಗೆ ಕಾಳಜಿ ತೋರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಇನ್ನೇನು ಕೆಲವೇ ದಿನಗಳಲ್ಲಿ ಹೆದ್ದಾರಿ ಕಾಮಗಾರಿ ಆರಂಭವಾಗಲಿದ್ದು, ಪ್ರಯಾಣಿಕರ ತಂಗುದಾಣಕ್ಕೆ ವೆಚ್ಚವಾಗುತ್ತಿರುವ 1.5ಲಕ್ಷ ರೂ. ಸೇರಿದಂತೆ, ಹ್ಯಾಂಡ್‌ಪೋಸ್ಟ್‌ ವೃತ್ತ ಹಾಗೂ ರಸ್ತೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್‌ ಎಲ್ಲವೂ ನಾಶವಾಗಲಿದೆ. ಒಟ್ಟಾರೆ ಸಾರ್ವಜನಿಕರ ತೆರಿಗೆ ಹಣ ಜಿಲ್ಲಾ ಪಂಚಾಯತಿ ಅಧಿಕಾರಿಗಳ ಅಸಡ್ಡೆಯಿಂದಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದಂತೂ ಸತ್ಯ ಎಂಬುದು ಸಾರ್ವಜನಿಕರ ನೋವಿನ ಮಾತು.

ಪ್ರಯಾಣಿಕರ ತಂಗುದಾಣದ ಬಗ್ಗೆ ನಮಗೆ ಯಾವುದೇ ದೂರುಗಳಾಗಲಿ ಅಥವಾ ಅನುಮತಿ ಕೋರಿ ಯಾವುದೇ ಪತ್ರಗಳಾಗಲಿ ಬಂದಿಲ್ಲ. ಆದರೆ, ಪ್ರಸ್ತುತ ಹೆದ್ದಾರಿ ನಿಯಮಾವಳಿಗಳಡಿ ಹೆದ್ದಾರಿ ಕಾಮಗಾರಿ ಮುಗಿಯುವವರೆಗೂ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವಂತಿಲ್ಲ. ಸರ್ಕಾರ ನಿಗದಿಪಡಿಸಿದ ಮಾರ್ಜಿನ್‌ಗಿಂತ ಒಳಗಡೆ ಇದ್ದರೆ ರಸ್ತೆ ನಿರ್ಮಾಣದ ಅವಧಿಯಲ್ಲಿ ತೆಗೆದುಹಾಕಲಾಗುವುದು.
ಅರ್ಚನಾ ಕುಮಾರ್‌,
ಹೆದ್ದಾರಿ ಪ್ರಾಧಿಕಾರ ಅಧಿಕಾರಿ

ಪ್ರಯಾಣಿಕರ ತಂಗುದಾಣದ ಕುರಿತು ಯಾರೂ ನಮ್ಮ ಬಳಿ ಪರವಾನಗಿ ಪಡೆದುಕೊಂಡಿಲ್ಲ, ಅಲ್ಲದೇ, ಈ ವಿಚಾರವಾಗಿ ಯಾವುದೇ ಲಿಖೀತ ದೂರುಗಳು ಕೂಡ ಬಂದಿಲ್ಲ. ಯಾವ ಆಧಾರದ ಮೇಲೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂಬುದರ ಪೂರ್ಣ ಮಾಹಿತಿ ಇಲ್ಲ. ಮಾಹಿತಿ ಕಲೆಹಾಕಿ ಈ ವಿಚಾರದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ.
.ಮಧು,
ಬಿದರಹಳ್ಳಿ ಗ್ರಾಪಂ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next