Advertisement

Mudigere; ಕಾರ್ತಿಕ್ ಗೌಡ ಪಾರ್ಥಿವ ಶರೀರದೆದುದು ಕಣ್ಣೀರಿಟ್ಟ ಸಾಕುನಾಯಿ

06:33 PM Nov 24, 2023 | Team Udayavani |

ಮೂಡಿಗೆರೆ: ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ತಿಕ್ ಗೌಡ ಅವರ ಅಂತಿಮ ದರ್ಶನ ದುಃಖಭರಿತ ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.ಕಾರ್ತಿಕ್ ಗೌಡ ಅವರ ಮುದ್ದಿನ ಸಾಕುನಾಯಿ ತನ್ನ ಒಡೆಯನ ಪಾರ್ಥಿವ ಶರೀರದೆದುರು ಮೂಕವಾಗಿ ಕಣ್ಣೀರು ಹಾಕಿ ನೆರೆದಿದ್ದ ನೂರಾರು ಜನರ ಕಣ್ಣಾಲಿಗಳು ತೇವವಾಗುವಂತೆ ಮಾಡಿತು.

Advertisement

ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಬುಧವಾರ ಸಂಜೆ ಆನೆಯನ್ನು ಕಾಡಿಗಟ್ಟುತ್ತಿದ್ದ ಸಂದರ್ಭದಲ್ಲಿ ಆನೆ ಕಾರ್ಯಾಚರಣೆ ಪಡೆಯ ನೌಕರ ಕಾರ್ತಿಕ್ ಗೌಡ ಮೇಲೆ ಕಾಡಾನೆ ದಾಳಿ ನಡೆಸಿತ್ತು.

ಮರಣೋತ್ತರ ಪರೀಕ್ಷೆಯ ನಂತರ ಕಾರ್ತಿಕ್ ಅವರ ಸ್ವಗ್ರಾಮ ಗೌಡಹಳ್ಳಿಯ ಅವರ ಮನೆಯಲ್ಲಿ ಗುರುವಾರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಬೆಳಗ್ಗೆಯಿಂದಲೂ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು.

ಕಾರ್ತಿಕ್ ಗೌಡ ಅವರು ಮುದ್ದಿನಿಂದ ಸಾಕಿದ್ದ ಅವರ ಸಾಕುನಾಯಿ ಚಾರ್ಲಿ ಮನೆಯಂಗಳದ ಗೂಡಿನಲ್ಲಿ ಮೂಕ ಪ್ರೇಕ್ಷಕನಾಗಿ ನಡೆಯುತ್ತಿದ್ದ ಸನ್ನಿವೇಶವನ್ನು ಗಮನಿಸುತ್ತಿತ್ತು. ಇಷ್ಟೊಂದು ಜನರಿದ್ದರೂ ತನ್ನ ಯಜಮಾನ ಮಾತ್ರ ಕಣ್ಣಿಗೆ ಬೀಳದೇ ಇದ್ದುದ್ದರಿಂದ ಒಂದು ರೀತಿಯಲ್ಲಿ ವಿಚಲಿತವಾಗಿ ಬಾಲ ಅಲ್ಲಾಡಿಸುತ್ತಾ ನಿಂತಿತ್ತು.

ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ನಾಯಿಯನ್ನು ಗೂಡಿನಿಂದ ಹೊರಬಿಟ್ಟ ತತ್ ಕ್ಷಣ ತನ್ನ ಒಡೆಯನ ಪಾರ್ಥಿವ ಶರೀರದೆದುರು ಬಂದು ಭಾವುಕವಾಗಿ ಕಣ್ಣೀರು ಹಾಕಿತು. ಹತ್ತಿರಕ್ಕೆ ಬಂದರೂ ತನ್ನ ಯಜಮಾನ ಯಾಕೆ ತನ್ನನ್ನು ಮುದ್ದಿಸುತ್ತಿಲ್ಲ ಎಂದು ಮೂಕವೇದನೆ ಅನುಭವಿಸಿತು. ಪಾರ್ಥಿವ ಶರೀರದೆದುರು ಅತ್ತಿಂದಿತ್ತ ತಿರುಗುತ್ತಾ ತನ್ನ ನೋವನ್ನು ವ್ಯಕ್ತಪಡಿಸುತ್ತಿತ್ತು.

Advertisement

ಈ ದೃಶ್ಯವನ್ನು ಕಂಡು ಮೃತ ಕಾರ್ತಿಕ್ ತಾಯಿ ಇನ್ನಷ್ಟು ದುಃಖಿತರಾದರು, ನೆರೆದಿದ್ದ ಬಂಧುಗಳು ಇನ್ನಷ್ಟು ಭಾವುಕರಾಗಿ ಕಣ್ಣೀರು ಸುರಿಸಿದರು. ಕೊನೆಗೆ ಚಾರ್ಲಿಯನ್ನು ಒತ್ತಾಯ ಪೂರ್ವಕವಾಗಿ ಅಲ್ಲಿಂದ ಕರೆದೊಯ್ದು ಗೂಡಿಗೆ ಸೇರಿಸಲಾಯ್ತು.

ಸಾಕುಪ್ರಾಣಿಗಳ ಪ್ರಿಯನಾಗಿದ್ದ ಕಾರ್ತಿಕ್ ತನ್ನ ಮುದ್ದಿನ ನಾಯಿಗೆ ಚಾರ್ಲಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದರು. ಹಾಗೆಯೇ ಅವರ ಮನೆಯಲ್ಲಿ ಅನೇಕ ಗೋವುಗಳನ್ನು ಸಾಕಿ ಸಲಹಿದ್ದರು. ತನ್ನ ಕೆಲಸ ಮುಗಿದು ಬಂದ ನಂತರ ಸಂಜೆ ಬೇಗ ಮನೆಗೆ ಬಂದಾಗ, ರಜಾ ದಿನಗಳಲ್ಲಿ ಗೋವುಗಳನ್ನು ಸಮೀಪದ ಗದ್ದೆ ಬಯಲಿನಲ್ಲಿ ತಾವೇ ಸ್ವತಃ ಕರೆದೊಯ್ದು ಮೇಯಿಸುತ್ತಿದ್ದರು.

ಹೀಗೆ ಸಾಕುಪ್ರಾಣಿಗಳೆಂದರೆ ಅತ್ಯಂತ ಪ್ರಿಯವಾಗಿದ್ದ ಕಾರ್ತಿಕ್ ಬದುಕಿಗೆ ಕಾಡುಪ್ರಾಣಿಯೊಂದು ಎರವಾಗಿ ಪರಿಣಮಿಸಿತ್ತು. ಆನೆ ಕಾರ್ಯಪಡೆಯಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಕಾರ್ತಿಕ್ ಸಾಹಸಮಯ ವ್ಯಕ್ತಿತ್ವ ಹೊಂದಿದ್ದು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಆನೆಗಳನ್ನು ಕಾಡಿಗಟ್ಟಲು ಮುಂದಾಗುತ್ತಿದ್ದರು. ಈ ಹಿಂದೆಯೂ ಅನೇಕ ಬಾರಿ ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಆದರೆ ಬುಧವಾರ ಮಾತ್ರ ವಿಧಿ ಅವರ ಬದುಕಿನಲ್ಲಿ ಬೇರೆಯದೇ ಆಟ ಆಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next