Advertisement

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

10:37 AM Dec 25, 2024 | Team Udayavani |

ಮೂಡಿಗೆರೆ: ಪಟ್ಟಣದ ಮೇಗಲಪೇಟೆ ಕೆನರಾ ಬ್ಯಾಂಕ್ ಇರುವ ಕಟ್ಟಡಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಕಟ್ಟಡದಲ್ಲಿದ್ದ ಬ್ಯಾಂಕ್, ಮೇಲಂತಸ್ತಿನಲ್ಲಿರುವ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಭಸ್ಮವಾದ ಘಟನೆ ಡಿ.24ರ ಮಂಗಳವಾರ ಸಂಭವಿಸಿದೆ.

Advertisement

ಮಂಗಳವಾರ ರಾತ್ರಿ ಸುಮಾರು 11 ಗಂಟೆ ಸಮಯ ಈ ಘಟನೆ ನಡೆದಿದೆ. ರಾತ್ರಿ ಕಟ್ಟಡದಿಂದ ಶಬ್ದ ಮತ್ತು ಹೊಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ತಕ್ಷಣ ಕಟ್ಟಡದ ಮಾಲೀಕರು ಮತ್ತು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ವಾಹನ ಬರುವ ಹೊತ್ತಿಗಾಗಲೇ ಫೈನಾನ್ಸ್ ಕಚೇರಿ ಬಹುತೇಕ ಸುಟ್ಟು ಕರಕಲಾಗಿತ್ತು. ಮೂಡಿಗೆರೆ ಅಗ್ನಿಶಾಮಕ ವಾಹನವಲ್ಲದೇ ಚಿಕ್ಕಮಗಳೂರಿನಿಂದಲೂ ಹೆಚ್ಚುವರಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಅಂತಿಮವಾಗಿ ರಾತ್ರಿ ಸುಮಾರು 3 ಗಂಟೆ ಸಮಯಕ್ಕೆ ಸಂಪೂರ್ಣ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಂಜಾಗೃತ ಕ್ರಮವಾಗಿ ಮೂಡಿಗೆರೆ ಪಟ್ಟಣದಾದ್ಯಂತ ವಿದ್ಯುತ್ ನಿಲುಗಡೆ ಮಾಡಲಾಗಿತ್ತು.

ಫೈನಾನ್ಸ್ ಕಚೇರಿಯ ಕಡತಗಳು ಮತ್ತು ಪರಿಕರಗಳು ಸಂಪೂರ್ಣ ಭಸ್ಮವಾಗಿವೆ. ಲಾಕರ್ ನಲ್ಲಿದ್ದ ಹಣ ಮತ್ತು ಚಿನ್ನವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.

ಇದೇ ಕಟ್ಟಡದಲ್ಲಿ ಪಟ್ಟಣದ ಪ್ರಮುಖ ಬ್ಯಾಂಕ್ ಸೇರಿದಂತೆ ವಿವಿಧ ಕಚೇರಿಗಳು, ಮನೆಗಳಿದ್ದವು. ಬೆಂಕಿ ಬ್ಯಾಂಕ್ ಸೇರಿದಂತೆ ಇಡೀ ಕಟ್ಟಡಕ್ಕೆ ವ್ಯಾಪಿಸುವ ಅಪಾಯ ಎದುರಾಗಿತ್ತು. ಕಟ್ಟಡದಲ್ಲಿದ್ದ ವಾಸವಾಗಿದ್ದ ನಿವಾಸಿಗಳು ಮುಂಜಾಗೃತ ಕ್ರಮವಾಗಿ ಪ್ರಮುಖ ವಸ್ತುಗಳೊಂದಿಗೆ ಮನೆಯಿಂದ ಹೊರಗೆ ಬಂದಿದ್ದರು. ಬೆಂಕಿ ತಗುಲಿದ್ದ ಕಚೇರಿಯ ಮೇಲ್ಬಾಗದ ಮನೆಯಲ್ಲಿ ವೈದ್ಯರೊಬ್ಬರು ಬಾಡಿಗೆಯಿದ್ದರು. ಅವರ ಕುಟುಂಬವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

Advertisement

ಕಟ್ಟಡದಲ್ಲಿರುವ ಮನೆಗಳ ನೆಲ ಮತ್ತು ಗೋಡೆಗಳು ಶಾಖದಿಂದ ಬಿಸಿಯಾಗಿದೆ.

ಬ್ಯಾಂಕ್ ಕಚೇರಿಗೆ ಬೆಂಕಿ ತಗುಲಿದ್ದರೆ ಅಪಾರ ಪ್ರಮಾಣದ ನಷ್ಟ, ದಾಖಲೆ ನಷ್ಟ ಸಂಭವಿಸುತ್ತಿತ್ತು.

ಈ ಕಟ್ಟಡ ಪಟ್ಟಣದ ಶಿವಪ್ರಕಾಶ್ ಅವರಿಗೆ ಸೇರಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಥವಾ ಯು.ಪಿ.ಎಸ್. ಹೀಟ್ ಆಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳೀಯ ನಿವಾಸಿಗಳ ಸಮಯಪ್ರಜ್ಞೆ ಮತ್ತು ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಕಾರ್ಯದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next