Advertisement

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

12:59 AM Dec 23, 2024 | Team Udayavani |

ಪೆರ್ಲ: ಇಲ್ಲಿನ ಪೇಟೆಯಲ್ಲಿ ಶನಿವಾರ ತಡರಾತ್ರಿ 9 ಅಂಗಡಿಗಳಿಗೆ ಬೆಂಕಿ ಸ್ಪರ್ಶವಾಗಿದ್ದು, ಐದು ಅಂಗಡಿಗಳು ಸಂಪೂರ್ಣವಾಗಿ ಉರಿದು ನಾಶವಾಗಿವೆ. ಬದಿಯಡ್ಕ- ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೈ ಬಿಲ್ಡಿಂಗ್‌ ಎಂಬ ಕಮರ್ಶಿಯಲ್‌ ಕಾಂಪ್ಲೆಕ್ಸ್‌ನಲ್ಲಿ ದುರಂತ ಸಂಭವಿಸಿದೆ. ಒಟ್ಟು ಸುಮಾರು 1.83 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.

Advertisement

ಮಧ್ಯರಾತ್ರಿ 12.15ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದು, ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಶೇಣಿ ನಿವಾಸಿ ನಾರಾಯಣ ಪೂಜಾರಿ ಮಾಲಕತ್ವದಲ್ಲಿರುವ ಪೂಜಾ ಫ್ಯಾನ್ಸಿ, ಪೆರ್ಲ ನಿವಾಸಿ ಮೋನು ಅವರ ತರಕಾರಿ ಅಂಗಡಿ, ಜಯದೇವ ಬಾಳಿಗ ಅವರ ಗೌತಮ್‌ ಕೋಲ್ಡ್‌ ಹೌಸ್‌, ಮೊಹಮ್ಮದ್‌ ಅವರ ಸಾದತ್‌ ಜನರಲ್‌ ಸ್ಟೋರ್‌, ಅಮೆಕ್ಕಳ ನಿವಾಸಿ ಪ್ರವೀಣ್‌ ಪೈ ಮಾಲಕತ್ವದ ಪ್ರವೀಣ್‌ ಆಟೋಮೋಬೈಲ್ಸ್‌, ಸಂಜೀವ ಅವರ ಕಬ್ಬಿನ ಹಾಲಿನ ಅಂಗಡಿಗೆ ಹೆಚ್ಚಿನ ಹಾನಿಯಾಗಿದೆ.

ಕಾಸರಗೋಡು ಹಾಗೂ ಉಪ್ಪಳ ದಿಂದ ಆಗಮಿಸಿದ ಅಗ್ನಿಶಾಮಕ ದಳದವರು, ಬದಿಯಡ್ಕ ಪೊಲೀಸ್‌ ಅಧಿಕಾರಿಗಳು ಮತ್ತು ಊರವರ ಸಹಕಾರದೊಂದಿಗೆ ಬೆಂಕಿಯನ್ನು ಆರಿಸಿ ಬೆಂಕಿಯ ಕೆನ್ನಾಲಿಗೆ ಸಮೀಪದ ಕಟ್ಟಡಗಳಿಗೂ ಹಬ್ಬುವುದನ್ನು ತಪ್ಪಿಸಿದರು. ಅಗ್ನಿಶಾಮಕ ದಳಗಳು ಸುಮಾರು ನಾಲ್ಕು ತಾಸುಗಳ ಸತತ ಕಾರ್ಯಾಚರಣೆ ನಡೆಸಿದವು.

ಬೆಂಕಿ ಸ್ಪರ್ಶವಾಗಲು ಕಾರಣ ತಿಳಿದುಬಂದಿಲ್ಲ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಕಟ್ಟಡದ ಮಾಲಕ ಗೋಪಿನಾಥ್‌ ಪೈ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next