Advertisement

ಮೃತ್ಯುಕೂಪವಾದ ಹೊಂಡ

11:37 AM Jun 05, 2019 | Naveen |

ಮೂಡಿಗೆರೆ: ತಾಲ್ಲೂಕಿನ ಬಣಕಲ್ ಗ್ರಾಮದ ಸುಭಾಷ್‌ನಗರದಲ್ಲಿ ವಿದ್ಯುತ್‌ ಪವರ್‌ ಸ್ಟೇಷನ್‌ ನಿರ್ಮಾಣದ ಕಾಮಗಾರಿಗಾಗಿ ತೆರೆದಿರುವ 10 ಅಡಿಪಾಯದ ಬೃಹತ್‌ ಗುಂಡಿಗಳಲ್ಲಿ ಐದು ದನಗಳು ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಮೆಸ್ಕಾಂನಿಂದ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ವಿದ್ಯುತ್‌ ಪವರ್‌ಸ್ಟೇಷನ್‌ ನಿರ್ಮಾಣ ಮಾಡಲು ಆಳವಾದ ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದಾರೆ. ಅದಕ್ಕೆ ಯಾವುದೇ ಸುರಕ್ಷತೆ ಮಾಡದೇ ಬಿಟ್ಟಿರುವುದರಿಂದ ದನಗಳು ನಡೆದುಕೊಂಡು ಹೋಗಿ ರಾತ್ರಿ ಸಮಯದಲ್ಲಿ ಬಿದ್ದಿವೆ. ಗುಂಡಿಗೆ ಬಿದ್ದಿದ್ದ ದನಗಳನ್ನು ನೋಡಿದ ಸ್ಥಳೀಯರು ಅವುಗಳಿಗೆ ಅಪಾಯವಾಗದಂತೆ ಮೇಲೆತ್ತಿ ರಕ್ಷಿಸಿದ್ದಾರೆ.

ಬೃಹತ್‌ ಗುಂಡಿಗಳನ್ನು ತೆಗೆದಾಗ ಅದಕ್ಕೆ ತಡೆಗೋಡೆ ಮಾಡುವ ಅಗತ್ಯವಿದೆ ಎಂದು ದೂರುವ ಗ್ರಾಮಸ್ಥರು, ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರವಿದೆ. ಮಕ್ಕಳು ಈ ಭಾಗದಲ್ಲಿ ಓಡಾಡುತ್ತಲೇ ಇರುತ್ತಾರೆ. ಇದರತ್ತ ಗಮನ ಹರಿಸದೆ ಗುಂಡಿ ತೋಡಿ ತಡೆ ನಿರ್ಮಿಸದೆ ಬಿಟ್ಟಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗುತ್ತಿಗೆದಾರರು ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸುವಾಗ ಸುತ್ತಲೂ ಬೇಲಿ ನಿರ್ಮಿಸಿ ಕೆಲಸ ಮಾಡುವುದು ಅಗತ್ಯ. ಆದರೆ ಸುರಕ್ಷತೆ ಬಗ್ಗೆ ನಿಗಾ ವಹಿಸದೇ ಗುಂಡಿಗೆ 5 ದನಗಳು ಬಿದ್ದು ಮೇಲೆ ಬರಲಾಗದೇ ಒದ್ದಾಡಿದವು. ಕಾಮಗಾರಿ ನಡೆಸಲು 10 ಅಡಿಪಾಯದ ಸುಮಾರು 12 ಗುಂಡಿಗಳನ್ನು ತೆರೆದಿದ್ದು, ಅವು ಅಪಾಯದ ಮೃತ್ಯು ಕೂಪಗಳಾಗಿವೆ. ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದ ಗುತ್ತಿಗೆದಾರರು ಸುರಕ್ಷತೆಯ ಕ್ರಮಗಳನ್ನು ಪಾಲಿಸಿ ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವಂತೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿದ್ಯುತ್‌ ಪವರ್‌ ಸ್ಟೇಷನ್‌ ಮಾಡಲು ಕೇವಲ ಅಡಿಪಾಯ ಹಾಕಲಾಗಿದೆ. ನಾವು ಅಡಿಪಾಯ ತೆಗೆದ ಸ್ಥಳದ ಸುತ್ತ ಮುತ್ತ 10 ಅಡಿ ಗುಂಡಿ ತೆಗೆದು ಸುರಕ್ಷತೆ ಮಾಡಲಾಗಿದೆ. ಎಲೆಕ್ಟ್ರಿಕಲ್ ಅರ್ಥಿಂಗ್‌ ವರ್ಕ್‌ ಆದ ನಂತರ ನಾವು ಕಾಮಗಾರಿ ನಡೆಯುವ ಸ್ಥಳದಲ್ಲಿ ಬೇಲಿ ನಿರ್ಮಾಣ ಮಾಡುತ್ತೇವೆ.ಸದ್ಯಕ್ಕೆ ಕಚೇರಿಗೆ ಬರುವ ರಸ್ತೆಯ ಭಾಗದಿಂದ ದನಗಳು ಒಳಪ್ರವೇಶ ಮಾಡುವುದರಿಂದ ಅಲ್ಲಿಗೆ ಸುರಕ್ಷತೆ ಮಾಡಿ ದನಗಳು ಬರದಂತೆ ತಡೆಯುತ್ತೇವೆ ಎಂದು ಬಣಕಲ್ ಮೆಸ್ಕಾಂನ ಕಿರಿಯ ಅಭಿಯಂತರ ಮಂಜುನಾಥ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next