Advertisement

ಮೃತ ರೈತರಕುಟುಂಬಕ್ಕೆ ತಲಾ 5ಲಕ್ಷ ಪರಿಹಾರ ನೀಡಿ

01:37 PM Oct 06, 2019 | Naveen |

ಮೂಡಿಗೆರೆ: ಕಳಸ ಸಮೀಪದ ಕಾರಗದ್ದೆ ಹಾಗೂ ಎಸ್‌.ಕೆ.ಮೇಗಲ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಕ್ಷಣ ತಲಾ 5ಲಕ್ಷ ರೂ. ಪರಿಹಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

Advertisement

ಆತ್ಮಹತ್ಯೆ ಮಾಡಿಕೊಂಡ ರೈತರಾದ ಎಸ್‌.ಕೆ.ಮೇಗಲ್‌ ಗ್ರಾಮದ ಚಂದ್ರೇಗೌಡ ಹಾಗೂ ಕಾರಗದ್ದೆಯ ಚನ್ನಪ್ಪಗೌಡರ ಮನೆಗಳಿಗೆ ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿ, ತಲಾ 50 ಸಾವಿರ ರೂ. ವೈಯಕ್ತಿಕ ಪರಿಹಾರ ನೀಡಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಮೃತ ರೈತರ ಪತ್ನಿಯರಿಗೆ 2 ಸಾವಿರ ರೂ. ಮಾಸಾಶನ ನೀಡಬೇಕು. ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ ಅವರಿಗೆ ಉಚಿತ ಶಿಕ್ಷಣ ಒದಗಿಸಬೇಕು. ಚಂದ್ರೇಗೌಡರ ಸೊಸೆಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ತಾವು ಅ ಧಿಕಾರದಲ್ಲಿದ್ದಾಗ ಈ ಸೌಲಭ್ಯಗಳನ್ನು ಕಲ್ಪಿಸಬೇಕು. ಆರೋಗ್ಯ ಚಿಕಿತ್ಸಾ ಸೌಲಭ್ಯ ನೀಡಬೇಕೆಂದು ಆದೇಶ ನೀಡಿದ್ದಾಗಿ ತಿಳಿಸಿದ ಅವರು, ಇದೀಗ ಇಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡು 16 ದಿನಗಳಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಕ್ಷೇತ್ರದ ಶಾಸಕರಾಗಲಿ ಭೇಟಿ ನೀಡಿಲ್ಲ. ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿಲ್ಲ ಎಂದರು. ಈ ಸರ್ಕಾರ ಎಷ್ಟು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

ಕಂದಾಯ ಇಲಾಖೆ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ರೈತರ ಮನೆಗಳಿಗೆ ಭೇಟಿ
ನೀಡಿ ಸಾಂತ್ವನ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸ್ಥಳೀಯ ಶಾಸಕರು, ಸಂಸದರು ಸಹ ಭೇಟಿ ನೀಡಿಲ್ಲ ಎಂದು ಆಕ್ಷೇಪಿಸಿದರು. ಈ ಜನ ಯಾವುದೇ ಹಳ್ಳಿಗಳಿಗೆ ಭೇಟಿ ನೀಡದಿದ್ದರೂ ಮತ ಹಾಕ್ತಾರೆ. ಇದೊಂದು ದುರ್ದೈವ ಎಂದರು.

ಜಿಪಂ ಕಳಸ ಕ್ಷೇತ್ರದ ಸದಸ್ಯ ಪ್ರಭಾಕರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್‌, ಮಾಜಿ ಸಚಿವೆ ಮೋಟಮ್ಮ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದರು. ಮಾಜಿ ಸಚಿವರಾದ ಯು.ಟಿ.ಖಾದರ್‌, ಅಭಯಚಂದ್ರ ಜೈನ್‌, ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಐವಾನ್‌ ಡಿಸಿಲ್ಲ, ಹರೀಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌. ವಿಜಯಕುಮಾರ್‌, ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌, ಮುಖಂಡರಾದ ಎಂ.ಸಿ.ಶಿವಾನಂದಸ್ವಾಮಿ, ರೂಬಿನ್‌ ಮೋಸೆಸ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next