Advertisement
ಹಲವರ ಬದುಕಿಗೆ ದಾರಿದೀಪವಾಗಿ ಅಕ್ಷರ ದಾನ ಮಾಡಿದ ಇಲ್ಲಿನ ಶಾಲೆಯ ಕಟ್ಟಡ ಕಾಲಕ್ಕೆ ತಕ್ಕಂತೆ ಹಾಳಾಗುತ್ತಾ ಬಂದಿತ್ತು. ಸುಣ್ಣ-ಬಣ್ಣ ಕಾಣದೆ ವರ್ಷಗಳೇ ಕಳೆದಿದ್ದ ಶಾಲೆಗೆ ಪುನರ್ ನವೀಕರಣದ ಮೂಲಕ ಮರುಜೀವ ನೀಡುವಂತೆ ಗ್ರಾಮಸ್ಥರ ಆದಿಯಾಗಿ ಎಲ್ಲರೂ ಸರ್ಕಾರ ಹಾಗೂ ಜನಪ್ರತಿ ನಿಧಿಗಳನ್ನು ಒತ್ತಾಯ ಮಾಡುತ್ತಲೇ ಬಂದಿದ್ದರು. ಆದರೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಹಾಮಳೆಯಿಂದಾಗಿ ಶಾಲೆಯ ಕಟ್ಟಡ ಬೀಳುವ ಹಂತಕ್ಕೆ ಬಂದು ನಿಂತಿತ್ತು. ಶಾಲೆಗೆ ಸಂಬಂಧವೇ ಇಲ್ಲದವರಿಂದ ಇಂದು ಶಾಲೆಗೆ ಹೊಸ ರೂಪ ಸಿಕ್ಕಿದೆ. ಅಲ್ಲಲ್ಲಿ ಕಿತ್ತುಬಂದಿದ್ದ ಗೋಡೆಗಳ ಮೇಲ್ಪದರ, ಕಿಲುಬು ಹಿಡಿದಿದ್ದ ಕಿಟಕಿ-ಬಾಗಿಲುಗಳು, ಪಾಠ ಹೇಳಿಕೊಡಲು ಬಳಸುವ ಬೋರ್ಡ್‌ಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಬಳಸಲು ಯೋಗ್ಯವಾಗುವಂತೆ ಸರಿಪಡಿಸಲಾಗಿದೆ. ಇದರಿಂದಾಗಿ ಶಾಲೆಗೆ ಬದುಕುವ ಚೈತನ್ಯ ಬಂದಿದೆ. ಇದೆಲ್ಲವನ್ನೂ ಕಂಡ ಶಾಲಾ ಮಕ್ಕಳ ಕಣ್ಣುಗಳಲ್ಲಿ ಹೊಸ ಭರವಸೆಯ ಕೋಮಿಂಚು ಮೂಡಿದೆ.
Related Articles
Advertisement
ತಿಂಗಳಿಗೆ ಲಕ್ಷಾಂತರ ರೂ. ಸಂಬಳ ಪಡೆಯುತ್ತೇವೆ ಎನ್ನುವ ಅಹಂಕಾರ ಇಲ್ಲದೇ ಹಳ್ಳಿಗರ ಜೊತೆಗೆ ಜನಸಾಮಾನ್ಯರ ರೀತಿ ಬೆರೆತು ಶಾಲೆಗೆ ಅವಶ್ಯವಿದ್ದ ಕಾರ್ಯಗಳನ್ನು ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದು ಗ್ರಾಮದ ಹಿರಿಯ ಮಂಜುನಾಥ್ ಗೌಡ ಅವರು ಸಂತಸ ವ್ಯಕ್ತಪಡಿಸಿದರು.
ಕೆಲಸದ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಇಂಜಿನಿಯರ್ ರಮ್ಯಾ ಅವರು, ನಾನೂ ಕೂಡ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿರೋದು. ಕನ್ನಡ ನಮ್ಮ ಹೆಮ್ಮೆ. ಇದು ನಮ್ಮ ಶಾಲೆ ಅಲ್ಲದಿರಬಹುದು. ಆದರೆ, ಕನ್ನಡ ನಾಡಿನಲ್ಲಿರುವ ನಮ್ಮ ಕನ್ನಡ ಶಾಲೆ. ನಾವೆಲ್ಲಾ ಹವಾ ನಿಯಂತ್ರಿತ ಆಫೀಸುಗಳಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಆದರೆ ಕನಿಷ್ಟ ಸೌಲಭ್ಯವಿಲ್ಲದೆ ಮಳೆ-ಛಳಿ-ಬಿಸಿಲು ಎನ್ನದೇ ಹಗಲಿಡೀ ಕುಳಿತು ಪಾಠ ಕೇಳುವ ಮಕ್ಕಳ ಪರಿಸ್ಥಿತಿ ಕಂಡು ಬೇಸರವಾಯಿತು. ಶಾಲಾ ದಿಗಳಲ್ಲಿ ನಾವೂ ಕೂಡ ಇಂತಹುದೇ ಪರಿಸ್ಥಿಯನ್ನು ಕಂಡಿರುವುದರಿಂದ ನಮ್ಮ ಹಳೆಯ ನೆನಪುಗಳು ಮರುಕಳಿಸಿದವು.
ನಮಗೆ ಇದ್ದಂತಹ ಕಷ್ಟ ಇಂದಿನ ಮಕ್ಕಳಿಗೆ ಬೇಡ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಇನ್ನು ಮುಂದೆಯೂ ಇಂತಹ ಶಾಲೆಗಳನ್ನು ಗುರುತಿಸಿ ಕೈಲಾದಷ್ಟು ಅನುಕೂಲತೆ ಕಲ್ಪಿಸಿಕೊಡುತ್ತೇವೆ ಎಂದರು.
ಯೂಥ್ಸ್ ಫಾರ್ ಸೇವಾ ಹಾಗೂ ರೆಫನೇಟಿವ್ ಸಾಫ್ಟ್‌ವೇರ್ ಇಂಜಿನಿಯರುಗಳ ಈ ಕೆಲಸಕ್ಕೆ ದಾರದಹಳ್ಳಿ ಗ್ರಾಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ಗ್ರಾಮವಾದ ದಾರದಹಳ್ಳಿ ಗ್ರಾಮದ ಶಾಲೆಯ ಅವ್ಯವಸ್ಥೆಯ ಬಗ್ಗೆ ಗಮನ ನೀಡದ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಕೆಸವಳಲು ರಾಘವೇಂದ್ರ, ಶಾಲೆಯ ಮುಖ್ಯೋಪಾಧ್ಯಾಯ ಅನಂತ್, ಶಿಕ್ಷಕಿಯರಾದ ಅಶ್ವಿನಿ, ಮೀನಾ, ಹಳೆಯ ವಿದ್ಯಾರ್ಥಿ ಬ್ರಿಜೇಶ್ ಕಡಿದಾಳು, ಗ್ರಾಮಸ್ಥರಾದ ಸಂದೀಪ್, ಬೆಟ್ಟಿಗೆರೆ ಪ್ರಶಾಂತ್, ಜಯಪಾಲ್ ಅಭಿವೃದ್ಧಿ ಕಾರ್ಯಕ್ಕೆ ಜೊತೆಯಾದರು.
ಪ್ರಧಾನಿ ಮೋದಿ ಅವರ ಆಶಯವಾದ ಆದರ್ಶ ಗ್ರಾಮ ಯೋಜನೆಯಡಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ದಾರದಹಳ್ಳಿ ಗ್ರಾಮವನ್ನು ದತ್ತು ನೀಡಲಾಗಿತ್ತು. ಆದರೆ, ಗ್ರಾಮ ಎಲ್ಲಿದೆ ಎನ್ನುವುದೇ ಅವರಿಗೆ ತಿಳಿದಿಲ್ಲ. ತಮಗೆ ಪರಿಚಯವೇ ಇಲ್ಲದ ಎನ್‌ಜಿಒ ಸಂಸ್ಥೆಯೊಂದು ಶಾಲೆಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇನ್ನಾದರೂ ಜನಪ್ರತಿನಿಧಿಗಳು ಇಂತಹ ವಿಚಾರಗಳ ಕಡೆ ಗಮನ ಹರಿಸಬೇಕು ಎಂದರು.ರಂಜನ್ ಅಜಿತ್‌ಕುಮಾರ್
ಜೆಡಿಎಸ್ ಜಿಲ್ಲಾಧ್ಯಕ್ಷರು