Advertisement

ಬಸ್‌ ಮಾರ್ಗ ಬದಲಾವಣೆ: ಜನರಪರದಾಟ

01:14 PM Feb 01, 2020 | Naveen |

ಮೂಡಿಗೆರೆ: ಕೆಎಸ್‌ಆರ್‌ಟಿಸಿ ನಿಗಮದ ಪ್ರಾರಂಭದ ದಿನಗಳಿಂದಲೂ ನಿಗಮದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮೂಡಿಗೆರೆ ತಾಲೂಕಿನ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ನಡೆಸುತ್ತಿದ್ದ ಬಸ್‌ ಗಳ ಮಾರ್ಗ ಬದಲಾಯಿಸಿದ ಸಂಸ್ಥೆಯ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ನಿತ್ಯವೂ ಪರದಾಡುವಂತಾಗಿದೆ.

Advertisement

ಉತ್ತರ ಕರ್ನಾಟಕ ಭಾಗದಿಂದ ಉಜಿರೆ, ಧರ್ಮಸ್ಥಳ, ಮಂಗಳೂರು, ಉಡುಪಿ ಮುಂತಾದ ಊರುಗಳಿಗೆ ತೆರಳಲು ಮೂಡಿಗೆರೆ ಪ್ರಮುಖ ರಹದಾರಿಯಾಗಿದೆ. ಇದು ಮೂಡಿಗೆರೆ ಪಾಲಿಗೆ ನೈಸರ್ಗಿಕ ಅನುಕೂಲ ಎಂದೇ ಬಣ್ಣಿಸಲಾಗುತ್ತದೆ. ಆದರೆ, ಈ ಬಾರಿಯ ಅತಿವೃಷ್ಟಿಯಿಂದಾಗಿ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ ಉಂಟಾಗಿ ಬಸ್‌ ಸಂಚಾರ ಬಂದ್‌ ಆಗಿದ್ದು ಈಗ ಇತಿಹಾಸ. ಸದ್ಯ ಈ ಮಾರ್ಗದ ಕಾಮಗಾರಿ ಮುಗಿಯುವವರೆಗೂ ಜಿಲ್ಲಾಡಳಿತ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇದನ್ನು ಕಾರಣವಾಗಿರಿಸಿಕೊಂಡು ನಿಗಮದ ಅಧಿ ಕಾರಿಗಳು ಕೆಎಸ್‌ಆರ್‌ಟಿಸಿ ಬಸ್ಸುಗಳು ಚಿಕ್ಕಮಗಳೂರು-ಬೇಲೂರು- ಸಕಲೇಶಪುರ ಮಾರ್ಗವಾಗಿ ಚಲಿಸುವಂತೆ ಅಧಿ ಸೂಚನೆ ನೀಡಿದ ಪರಿಣಾಮ, ತಾಲೂಕಿನ ವಿವಿಧ ಭಾಗಗಳಿಂದ ಚಿಕ್ಕಮಗಳೂರು ಹಾಗೂ ರಾಜ್ಯದ ಇತರೆ ಭಾಗಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಿದೆ.

ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಮಿನಿ ಬಸ್‌ ಹಾಗೂ ನಿಲುಗಡೆ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ ವೇಳೆಯಲ್ಲಿ ಈ ಬಸ್ಸುಗಳ
ಸಂಚಾರ ಇಲ್ಲದ್ದರಿಂದ ಹಗಲು ಹೊತ್ತಿನಲ್ಲಿಯೇ ಮನೆ ಸೇರಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ವೇಗದೂತ ಬಸ್ಸುಗಳ ದರವನ್ನೇ ನಿಲುಗಡೆ ಬಸ್ಸುಗಳಿಗೆ ನಿಗದಿಪಡಿಸಿರುವುದು,
ದುಪ್ಪಟ್ಟು ಪ್ರಯಾಣದ ಅವಧಿ, ವಿಪರೀತ ನಿಲುಗಡೆಗಳು, ಪ್ರಯಾಣಿಕರ ಅಸಮಧಾನಕ್ಕೆ ಕಾರಣವಾಗಿದೆ. ಮೂಡಿಗೆರೆ ಮಾರ್ಗವಾಗಿ ಸಕಲೇಶಪುರಕ್ಕೆ ಉತ್ತಮ ದಾರಿ ಇದ್ದರೂ ಕೂಡ ಕೇವಲ 11 ಕಿ.ಮೀ. ಉಳಿಸುವ ಸಲುವಾಗಿ ಪ್ರಾರಂಭದ ದಿನಗಳಿಂದಲೂ ನಿಗಮದ ಜೊತೆ
ಅವಿನಾಭಾವ ಸಂಬಂಧ ಇರಿಸಿಕೊಂಡು ಸಹಕರಿಸಿದ ತಾಲೂಕಿನ ಪ್ರಯಾಣಿಕರನ್ನು ಕಡೆಗಣಿಸಿರುವುದು ಮಲೆನಾಡಿಗರ ಬೇಸರಕ್ಕೆ ಕಾರಣವಾಗಿದೆ.

ಈ ವಿಚಾರವಾಗಿ ಮಾತನಾಡಿದ ನೌಕರ ಯಶವಂತ್‌ ಅವರು, ನಷ್ಟದ ಕಾರಣ ನೀಡಿ ಮಾರ್ಗ
ಬದಲಿಸಿರುವುದು ಅವೈಜ್ಞಾನಿಕವಾಗಿದೆ. ಬೇಲೂರು-ಸಕಲೇಶಪುರ ಮಾರ್ಗಕ್ಕಿಂತಲೂ ಮೂಡಿಗೆರೆ-ಸಕಲೇಶಪುರ ಮಾರ್ಗದಲ್ಲಿ ಬಸ್ಸುಗಳು ಸಂಚಾರ ಮಾಡುವುದು ಆದಾಯದ ದೃಷ್ಟಿಯಿಂದ ಉತ್ತಮ. ಪ್ರತಿನಿತ್ಯ ನಮ್ಮ ಸಮಯಕ್ಕೆ ಬಸ್ಸುಗಳು ಸಿಗದ ಕಾರಣ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅರೆಕಾಲಿಕ ನೌಕರಿಯಲ್ಲಿರುವ ನಾನು ಮೇಲಿನ ಅಧಿಕಾರಿಗಳಿಂದ ನಿತ್ಯ ಬೈಗುಳ ತಿನ್ನಬೇಕಾಗಿದೆ ಎಂದು ನೋವು ತೋಡಿಕೊಂಡರು.

ನಾನು ಕಾಲೇಜು ವಿದ್ಯಾರ್ಥಿನಿ,ಸಮಯವನ್ನು ಸರಿಯಾಗಿ ನಿಭಾಯಿಸಿಕೊಳ್ಳಬೇಕು. ವೇಗದೂತ ಬಸ್ಸುಗಳ ಬದಲಾಗಿ ನಿಲುಗಡೆ ಬಸ್ಸುಗಳನ್ನು ಬಿಟ್ಟಿರುವುದರಿಂದ ಸಮಯಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಬಸ್ಸುಗಳ ಕೊರತೆಯಿಂದಾಗಿ ವಿಪರೀತ
ಜನಸಂದಣಿ ಇರುತ್ತದೆ. ಇದನ್ನು ಗುರಿಯಾಗಿಸಿಕೊಂಡು ಕೆಲವರು ಮೈ ತಾಗಿಸುವುದು, ಮುಟ್ಟುವುದು ಮಾಡುತ್ತಾರೆ. ಕಾಲ ಎಷ್ಟೇ ಮುಂದುವರೆದಿದ್ದರೂ ಹೆಣ್ಣು ಮಕ್ಕಳು ಇಂತಹ ಸಮಸ್ಯೆಗಳನ್ನು ಯಾರ ಬಳಿ ಹೇಳುವುದಕ್ಕೂ ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಗಳಿಂದಾಗಿ ಎಷ್ಟೋ ಹೆಣ್ಣುಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.
ದಯವಿಟ್ಟು ಅಧಿ ಕಾರಿಗಳು ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮನವಿ ಮಾಡಿದರು.

Advertisement

ಸಮಸ್ಯೆಯ ಬಗ್ಗೆ ಹಲವಾರು ಮನವಿಗಳು ಬರುತ್ತಿವೆ. ಮಾರ್ಗ ಬದಲಾವಣೆ
ಕುರಿತು ಕೆ.ಎಸ್‌. ಆರ್‌.ಟಿ.ಸಿ. ಅ ಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಸಾರಿಗೆ
ಸಚಿವರ ಬಳಿ ನೇರವಾಗಿ ಚರ್ಚಿಸಿ ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಸಲಾಗುವುದು.
ಎಂ.ಪಿ.ಕುಮಾರಸ್ವಾಮಿ, ಶಾಸಕರು

ಮೂಡಿಗೆರೆ ಮಾರ್ಗವಾಗಿ ಬಸ್ಸುಗಳನ್ನು ಬಿಡುವಂತೆ ಹಲವಾರು ಮನವಿಗಳು ಬಂದಿವೆ.
ಆದರೆ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ವಿವಿಧ ಡಿವಿಜನ್‌ಗಳ ಅಧಿಕಾರಿಗಳ ನಿರ್ಧಾರವಾಗಿರುತ್ತದೆ. ಸ್ಥಳೀಯ ಶಾಸಕರು ಉನ್ನತ ಅಧಿಕಾರಿಗಳ ಜೊತೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರೆ ಪರಿಹಾರ ಸಾಧ್ಯ.
ದೇವರಾಜು, ಡಿಸಿ, ಕೆಎಸ್‌ಆರ್‌ಟಿಸಿ
ನಿಗಮ, ಚಿಕ್ಕಮಗಳೂರು

„ಸುಧೀರ್‌ ಬಿ.ಟಿ.

Advertisement

Udayavani is now on Telegram. Click here to join our channel and stay updated with the latest news.

Next