Advertisement

ಮುಧೋಳ: ಮರಳುಚೋರರಿಂದ ಹಗಲು ದರೋಡೆ

05:03 PM Oct 22, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಘಟಪ್ರಭಾ ನದಿ ಉಕ್ಕೇರಿ ಹರಿಯುವ ಸಂದರ್ಭದಲ್ಲಿ ಹಳ್ಳದಲ್ಲಿ ಅಕ್ರಮವಾಗಿ ಬೋಟ್‌ನಿಂದ ಮರಳು ದಂಧೆ ನಡೆಸಿರುವ ಖದೀಮರು, ಇದೀಗ ನದಿ ಪಾತ್ರದಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ತಮ್ಮ ಬೋಟ್‌ನ್ನು ನದಿ ಒಡಲಿಗೆ ನುಗ್ಗಿಸಿ ತಮ್ಮ ದಂಧೆ ಮುಂದುವರಿಸಿದ್ದಾರೆ. ಒಂಟಗೋಡಿ ಗ್ರಾಮದಿಂದ 2-3 ಕಿ.ಮೀ ವ್ಯಾಪ್ತಿಯಲ್ಲಿರುವ ಹಳ್ಳದಲ್ಲಿ ಈ ಮೊದಲು ಅಕ್ರಮವಾಗಿ ಬೋಟ್‌ನಿಂದ ಮರಳು ದಂಧೆ ನಡೆಸುತ್ತಿದ್ದರು. ಆದರೆ ಹಳ್ಳದಲ್ಲಿನ ಮರಳು ಗುಣಮಟ್ಟದಿಂದ ಕೂಡಿರದ ಕಾರಣ ಮರಳಿಗೆ ಬೇಡಿಕೆ ಕಡಿಮೆಯಾಗಿರುವುದನ್ನು ಅರಿತ ಖದೀಮರು ತಮ್ಮ ಬೋಟ್‌ನ್ನು ನದಿಗೆ ಸ್ಥಳಾಂತರಿಸಿದ್ದಾರೆ.

Advertisement

ಅಕ್ರಮ ಮರಳು ದಂಧೆಕೋರರು ಟ್ರಾಕ್ಟರ್‌ಗಳ ಮೂಲಕ ಮುಧೋಳ ನಗರ ಸೇರಿದಂತೆ ತಾಲೂಕಿನ ಹಲವಾರು ಹಳ್ಳಿಗಳಿಗೆ ಮರಳು ಸರಬರಾಜು ಮಾಡುತ್ತಾರೆ. ಹಳ್ಳದಲ್ಲಿನ ಬೋಟ್‌ ತೆರವುಗೊಳಿಸಿದ್ದರೂ ಹಲವಾರು ಜನರು ಹಳ್ಳದ ಮರಳನ್ನೇ ಸಿಮೆಂಟ್‌ ಚೀಲದಲ್ಲಿ ತುಂಬಿಕೊಂಡು ಹೊತ್ತೂಯ್ಯುತ್ತಿದ್ದಾರೆ.

ಉಳಿದ ಕುರುಹುಗಳು: ಹಳ್ಳದಿಂದ ಬೋಟ್‌ ಸ್ಥಳಾಂತರಿಸಿದ್ದರೂ ಅಲ್ಲಿನ ಕಡ್ಡಾ (ಬೋಟ್‌ ಮೂಲಕ ನೀರಿನಲ್ಲಿನ ಮರಳನ್ನು ದಂಡೆಯಲ್ಲಿ ಸಂಗ್ರಹಿಸುವ ಸ್ಥಳ) ವನ್ನು ಹಾಗೇ ಬಿಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದರೆ ನದಿಯಲ್ಲಿ ಮರಳು ದೊರೆಯದಿದ್ದಾಗ, ನದಿ ನೀರು ಹೆಚ್ಚಾದಾಗ ಈ ಕಡ್ಡಾವನ್ನು ಬಳಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ. ಯಾರ ಹೆದರಿಕೆಯಿಲ್ಲದೆ ಹಳ್ಳದ ದಂಡೆಯಲ್ಲಿ ಮರಳು ಜಾಗ ಗುರುತಿಸಿರುವುದನ್ನು ಗಮನಿಸಿದರೆ ಆಡಳಿತ ಯಂತ್ರದ ಕಾರ್ಯವೈಖರಿ ಬಗ್ಗೆ
ಹಲವಾರು ಅನುಮಾನ ಮೂಡುತ್ತದೆ.

ಮುಖ್ಯ ರಸ್ತೆಗೆ ಹೊಂದಿಕೊಂಡ ಕಡ್ಡಾ: ಅಕ್ರಮ ಮರಳುಗಾರಿಕೆ ಎಂದರೆ ಹೆದರಿಕೆಯಿಂದ ಮಾಡುತ್ತಾರೆ. ಪೊಲೀಸರು ವಿವಿಧ ಇಲಾಖೆ ಅಧಿಕಾರಿಗಳ ಭಯದಲ್ಲಿ ನಿತ್ಯ ವ್ಯವಹಾರ ನಡೆಸುತ್ತಾರೆ ಎಂಬುದು ಸಾರ್ವಜನಿಕರ ಊಹೆ. ಆದರೆ ಈ ಹಳ್ಳದಲ್ಲಿನ ಅಳವಡಿಸಿರುವ ಕಡ್ಡಾ ಜಾಗ ಗಮನಿಸಿದರೆ ಅಕ್ರಮ ಮರಳುಕೋರರಿಗೆ ಆಡಳಿತ ಯಂತ್ರದ ಬಗ್ಗೆ ಕಿಂಚಿತ್ತೂ ಭಯವಿಲ್ಲ ಎಂಬುದು ಸಾಬೀತಾಗುತ್ತದೆ.

ಡಾಂಬರ್‌ ರಸ್ತೆಗೆ ಹೊಂದಿಕೊಂಡ ಸೇತುವೆ ಪಕ್ಕದಲ್ಲೇ ಮರಳು ಎತ್ತುವ ಜಾಗ ಗುರುತಿಸಲಾಗಿದೆ. ಪ್ರತಿನಿತ್ಯ ಈ ಮಾರ್ಗದಲ್ಲಿ ನೂರಾರು ಜನ ಓಡಾಡುತ್ತಾರೆ. ಅವಶ್ಯ ಕಾರ್ಯಗಳಿದ್ದಾಗ ಅಧಿಕಾರಿಗಳು ಸಂಚರಿಸುವುದುಂಟು. ಆದರೆ ಅವರ ಭಯವಿಲ್ಲದೆ ಮರಳು ಎತ್ತಲು ಸ್ಥಳ ನಿಗದಿ ಮಾಡಿರುವ ಅಕ್ರಮ ವಾಸನೆ ಬಂದಿದೆ.

Advertisement

ಸಿಮೆಂಟ್‌ ಚೀಲದಲ್ಲಿ ಸಾಗಣೆ: ಒಂದೆಡೆ ಅಕ್ರಮ ಮರಳು ಚೋರರು ಬೋಟ್‌ ಮೂಲಕ ಹಳ್ಳದಲ್ಲಿನ ಮರಳನ್ನು ಖಾಲಿ ಮಾಡಿದ್ದರೆ, ಮತ್ತೂಂದೆಡೆ ಸ್ಥಳೀಯರು ನೂರಾರು ಸಿಮೆಂಟ್‌ ಚೀಲದಲ್ಲಿ ಮರಳನ್ನು ತುಂಬಿಕೊಂಡು ತಮಗೆ ಅನುಕೂಲವಾಗುವ ಸಮಯದಲ್ಲಿ ಟ್ರಾಕ್ಟರ್‌ ಮೂಲಕ  ಸಾಗಿಸುತ್ತಾರೆ. ಆ ಮೂಲಕ ನೈಸರ್ಗಿಕ ಸಂಪತ್ತಿಗೆ ಕನ್ನ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ವ್ಯವಸ್ಥೆಯಲ್ಲಿನ ಲೋಪ ದುರುಪಯೋಗ ಪಡಿಸಿಕೊಳ್ಳುತ್ತಿರುವ ಮರಳು ಚೋರರು ತಾಲೂಕಿನಾ ದ್ಯಂತ ಹಗಲು ದರೋಡೆಗಿಳಿದಿದ್ದಾರೆ. ಎಲ್ಲಿಯವರೆಗೆ ಆಡಳಿತ ಯಂತ್ರ ಇಂತಹ ಖದೀಮರಿಗೆ ಬಿಸಿಮುಟ್ಟಿಸಿ ಹೆಡೆಮುರಿ ಕಟ್ಟುವುದಿಲ್ಲವೋ ಅಲ್ಲಿಯವರೆಗೆ ಇಂತಹ ದಂಧೆಗಳಿಗೆ ಕಡಿವಾಣ ಬೀಳುವುದು ಕನಸಿನ ಮಾತು.

ಒಂಟಗೋಡಿ ಗ್ರಾಮದ ಸರಹದ್ದಿನ ಹಳ್ಳದಲ್ಲಿನ ಮರಳು ಎತ್ತುವುದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈಗ ಅಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದೇಯಾದರೆ ಅಲ್ಲಿ ಮುಂದೆ ಮರಳುಗಾರಿಕೆ ನಡೆಯದಂತೆ ತಡೆ ಹಾಕಲಾಗುವುದು.
●ಶ್ವೇತಾ ಬೀಡಿಕರ ಉಪವಿಭಾಗಾಧಿಕಾರಿ, ಜಮಖಂಡಿ.

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next